image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೂನ್ 30ರಿಂದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಆರಂಭ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೂನ್ 30ರಿಂದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಆರಂಭ

ಮಂಗಳೂರು : ಭಾರತದ ಚುನಾವಣಾ ಆಯೋಗದ ನಿರ್ದೇಶನದಂತೆ ಕರ್ನಾಟಕ ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಆರಂಭಗೊಳ್ಳಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದಕ್ಕೆ ಅಗತ್ಯವಿರುವ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎಚ್. ವಿ. ದರ್ಶನ್ ರವರು ತಿಳಿಸಿದ್ದಾರೆ. ಈ ಬಾರಿ 2026ರ ಅಕ್ಟೋಬರ್ 1 ಅನ್ನು ಅರ್ಹತಾ ದಿನಾಂಕವಾಗಿ ಪರಿಗಣಿಸಿ ಪರಿಷ್ಕರಣೆ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಯೋಜನೆಯ ಪ್ರಕಾರ ಜೂನ್ 30ರಿಂದ ಜುಲೈ 29ರವರೆಗೆ ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಜಿಲ್ಲೆಯ ಪ್ರತಿಯೊಂದು ಮನೆ-ಮನೆಗೆ ಭೇಟಿ ನೀಡಿ ಗಣತಿ ನಮೂನೆಗಳನ್ನು ವಿತರಿಸಿ, ಸಾರ್ವಜನಿಕರಿಂದ ವಿವರಗಳನ್ನು ಸಂಗ್ರಹಿಸಲಿದ್ದಾರೆ.

ಬಳಿಕ ಆಗಸ್ಟ್ 5ರಂದು ಕರಡು ಮತದಾರರ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಲಾಗುತ್ತಿದ್ದು, ಸೆಪ್ಟೆಂಬರ್ 4ರವರೆಗೆ ಸಾರ್ವಜನಿಕರು ತಮ್ಮ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಮುಕ್ತ ಅವಕಾಶ ನೀಡಲಾಗಿದೆ. ಎಲ್ಲಾ ಪ್ರಕ್ರಿಯೆಗಳು ಮುಗಿದ ನಂತರ ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ 3ರಂದು ಬಿಡುಗಡೆ ಮಾಡಲಾಗುವುದು. ಸದ್ಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 18,05,189 ಮತದಾರರಿದ್ದು, ಅವರಲ್ಲಿ 15,98,723 ಮತದಾರರ ವಿವರಗಳನ್ನು ಈಗಾಗಲೇ ಯಶಸ್ವಿಯಾಗಿ ಮ್ಯಾಪಿಂಗ್ ಮಾಡಲಾಗಿದೆ. ಇದು ಶೇಕಡಾ 88.56ರಷ್ಟು ಪ್ರಗತಿಯನ್ನು ಸೂಚಿಸುತ್ತದೆ. ಈ ಬೃಹತ್ ಪರಿಷ್ಕರಣೆ ಪ್ರಕ್ರಿಯೆಯನ್ನು ಸುಗಮವಾಗಿ ನಡೆಸಲು ಜಿಲ್ಲೆಯಲ್ಲಿ 8 ಮತದಾರರ ನೋಂದಣಾಧಿಕಾರಿಗಳು, 10 ಸಹಾಯಕ ಮತದಾರರ ನೋಂದಣಾಧಿಕಾರಿಗಳು, 206 ಬಿಎಲ್‌ಒ ಮೇಲ್ವಿಚಾರಕರು ಹಾಗೂ 1,876 ಬಿಎಲ್‌ಒಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಲಿದ್ದಾರೆ.

ಮತದಾರರು ತಮ್ಮ ಮನೆಗೆ ಬರುವ ಬಿಎಲ್‌ಒಗಳು ನೀಡುವ ಗಣತಿ ನಮೂನೆಯನ್ನು (Enumeration Form) ಸರಿಯಾಗಿ ಭರ್ತಿ ಮಾಡಿ, ಅದರೊಂದಿಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಸಲ್ಲಿಸಬೇಕಾಗಿದೆ. ವಯಸ್ಸು ಮತ್ತು ವಿಳಾಸದ ದೃಢೀಕರಣಕ್ಕಾಗಿ ಜನನ ಪ್ರಮಾಣಪತ್ರ, ಪಾಸ್‌ಪೋರ್ಟ್, ಶೈಕ್ಷಣಿಕ ಪ್ರಮಾಣಪತ್ರ, ಖಾಯಂ ನಿವಾಸ ಪ್ರಮಾಣಪತ್ರ ಅಥವಾ ಜಾತಿ ಪ್ರಮಾಣಪತ್ರ ಸೇರಿದಂತೆ ಯಾವುದೇ ಮಾನ್ಯತೆ ಪಡೆದ ದಾಖಲೆಗಳನ್ನು ಸಾರ್ವಜನಿಕರು ಸಲ್ಲಿಸಬಹುದಾಗಿದೆ. ಯಾವುದೇ ಒಬ್ಬ ಅರ್ಹ ಮತದಾರನೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಮತ್ತು ಯಾವುದೇ ಅನರ್ಹ ವ್ಯಕ್ತಿಗಳು ಪಟ್ಟಿಗೆ ಸೇರ್ಪಡೆಯಾಗಬಾರದು ಎನ್ನುವುದೇ ಈ ವಿಶೇಷ ಸಮಗ್ರ ಪರಿಷ್ಕರಣೆಯ ಮುಖ್ಯ ಉದ್ದೇಶವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಜಿಲ್ಲೆಯ ಎಲ್ಲಾ ನಾಗರಿಕರು ಬಿಎಲ್‌ಒಗಳು ಮನೆ-ಮನೆಗೆ ಭೇಟಿ ನೀಡುವ ಸಂದರ್ಭದಲ್ಲಿ ಅಗತ್ಯ ಮಾಹಿತಿ ಹಾಗೂ ದಾಖಲೆಗಳನ್ನು ನೀಡಿ ಪೂರ್ಣ ಸಹಕಾರ ನೀಡಬೇಕೆಂದು ಜಿಲ್ಲಾಡಳಿತ ಮನವಿ ಮಾಡಿದೆ.

Category
ಕರಾವಳಿ ತರಂಗಿಣಿ