ಮಂಗಳೂರು: ತುಳುನಾಡಿನ ನೆಲದ ಪರಂಪರೆಯ ಗತವೈಭವವನ್ನು ಮರುಕಳಿಸುವ ನಿಟ್ಟಿನಲ್ಲಿ ಹಾಗೂ ರಾಷ್ಟ್ರಮಟ್ಟದ ಮಾನ್ಯತೆ ಪಡೆದುಕೊಳ್ಳುತ್ತಿರುವ ಹುಲಿವೇಷ ಕುಣಿತದ ಕಲಾ ಶ್ರೇಷ್ಠತೆಯನ್ನು ಮುಂದಿನ ತಲೆಮಾರಿಗೆ ದಾಟಿಸುವ ಸದುದ್ದೇಶದಿಂದ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನವು ಶ್ರೀ ನಳಿನ್ ಕುಮಾರ್ ಕಟೀಲ್ ಅವರ ಮಾರ್ಗದರ್ಶನ ಹಾಗೂ ಶಾಸಕ ಶ್ರೀ ಡಿ.ವೇದವ್ಯಾಸ್ ಕಾಮತ್ ರವರ ನೇತೃತ್ವದಲ್ಲಿ ಆಯೋಜಿಸಿದ್ದ "ಕುಡ್ಲದ ಪಿಲಿಪರ್ಬ"ವು ಕಳೆದೆರಡು ಆವೃತ್ತಿಗಳಲ್ಲಿ ತುಳುನಾಡಿನ ಸಮಸ್ತ ದೈವ, ದೇವರುಗಳ ಆರ್ಶೀವಾದದಿಂದ ಅತ್ಯಂತ ಯಶಸ್ವಿಯಾಗಿದ್ದವು ಎಂದು ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಗಿರಿದರ್ ಶೆಟ್ಟಿ ಹೇಳಿದರು. ಅವರು ನಗರದ ಖಾಸಗಿ ಹೊಟೇಲಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇದೀಗ ಪಿಲಿ ಪರ್ಬದ ಮೂರನೇ ಆವೃತ್ತಿಯ ಸ್ಪರ್ಧಾಕೂಟವು ಇದೇ ಅಕ್ಟೋಬರ್ 11 ರ ಶುಕ್ರವಾರದಂದು ಮಂಗಳೂರಿನ ಕೇಂದ್ರ ಮೈದಾನದಲ್ಲಿ ಬೆಳಿಗ್ಗೆ 10 ಗಂಟೆಗೆ ಸಂಭ್ರಮ- ಸಡಗರದಿಂದ ಆರಂಭವಾಗಲಿದೆ
ಕೇವಲ ಕಲೆಯಾಗಿ ಮಾತ್ರವಲ್ಲದೇ, ಧಾರ್ಮಿಕವಾಗಿಯೂ ತುಳುನಾಡಿನಲ್ಲಿ ಹುಲಿವೇಷಕ್ಕೆ ಪ್ರಮುಖ ಸ್ಥಾನವಿದ್ದು ಇದೀಗ ಅದಕ್ಕೆ ಸ್ಪರ್ಧಾಕೂಟದ ಸ್ಪರ್ಶವೂ ಸಿಕ್ಕಿರುವುದು ಪ್ರತೀ ವರ್ಷವೂ ಹತ್ತು ಹಲವು ತಂಡಗಳು ತಮ್ಮದೇ ಆದ ಕಠಿಣ ಪರಿಶ್ರಮದಿಂದ ಸಿದ್ದಗೊಂಡು ಈ ದಿನಕ್ಕಾಗಿ ಕಾಯುತ್ತಿರುತ್ತವೆ.
ಕೇಂದ್ರ ಮೈದಾನದಲ್ಲಿ ಈಗಾಗಲೇ ನಿರ್ಮಿಸಲಾಗಿರುವ ಭವ್ಯ ಹಾಗೂ ವಿಶಾಲ ವೇದಿಕೆಯಲ್ಲಿ, ಪರಿಣಿತ ತೀರ್ಪುಗಾರರ ಸಮ್ಮುಖದಲ್ಲಿ, ಜಿಲ್ಲೆ-ರಾಜ್ಯ-ದೇಶ- ವಿದೇಶಗಳಲ್ಲಿ ಪ್ರದರ್ಶನ ನೀಡಿರುವ ಕರಾವಳಿಯ ಜನಪ್ರಿಯ 10 ಹುಲಿವೇಷ ತಂಡಗಳು ಈ ಸ್ಪರ್ಧಾಕೂಟದಲ್ಲಿ ಪಾಲ್ಗೊಳ್ಳಲಿದ್ದು, ಇಡೀ ದಿನ ಕಡಲನಗರಿ ಹುಲಿಗಳ ಘರ್ಜನೆಗೆ ಸಾಕ್ಷಿಯಾಗಲಿದೆ ಎಂದರು. ಈ ಸಂಭ್ರಮದಲ್ಲಿ ಪಾಲ್ಗೊಳ್ಳಲು ಮಕ್ಕಳಿಂದ ಹಿಡಿದು ಹಿರಿಯರ ತನಕ ಪ್ರತಿಯೊಬ್ಬ ಕಲಾಪ್ರೇಮಿಗೂ ಮುಕ್ತ ಅವಕಾಶವಿದ್ದು, ಸ್ಪರ್ಧಾಕೂಟದಲ್ಲಿ ಒಂದಕ್ಕಿಂತ ಒಂದು ವಿಭಿನ್ನತೆಯಿಂದ ಕೂಡಿರುವ ಹುಲಿವೇಷ ತಂಡಗಳಿಂದ ಇಡೀ ದಿನ ಸ್ಪರ್ಧಾಕೂಟದ ಮನರಂಜನೆಯಲ್ಲಿ ಮಿಂದೇಳುವ ಅವಕಾಶವಿದೆ.
ಪಿಲಿಪರ್ಬದಲ್ಲಿ ಭಾಗವಹಿಸುವ ಹುಲಿವೇಷ ತಂಡಗಳು ವೈಭವದ ಮೆರವಣಿಗೆಯ ಮೂಲಕ ವೇದಿಕೆಗೆ ಪ್ರವೇಶ ಮಾಡಲಿದ್ದು, 20 ನಿಮಿಷಗಳ ಪ್ರದರ್ಶನ ನೀಡಲಿವೆ. ಪ್ರತಿ ತಂಡವೂ ಅಕ್ಕಿಮುಡಿ ಹಾರಿಸುವುದು ಕಡ್ಡಾಯವಾಗಿದ್ದು, ಕರಿಹುಲಿಗಳು, ಮರಿಹುಲಿಗಳು, ಹಿಮ್ಮೇಳ, ಧರಣಿ ಮಂಡಲ ಹೀಗೆ ಇಡೀ ಕೂಟವು ವೈವಿಧ್ಯತೆಯಿಂದ ಕೂಡಿರಲಿದೆ.
ಅಂತಿಮವಾಗಿ ಅತ್ಯುತ್ತಮ ಪ್ರದರ್ಶನ ನೀಡಿದ ತಂಡಗಳಿಗೆ, ಪ್ರಥಮ-ದ್ವಿತೀಯ-ತೃತೀಯ ಬಹುಮಾನ ನೀಡಿ ಗೌರವಿಸಲಾಗುವುದರ ಜೊತೆಗೆ ಶಿಸ್ತಿನ ತಂಡ, ಅತ್ಯುತ್ತಮ ಹುಲಿ ಮೆರವಣಿಗೆ ತಂಡ, ಪರ್ಬದ ಪಿಲಿ, ಕಪ್ಪು ಪಿಲಿ, ಮರಿ ಹುಲಿ, ಮುಡಿ, ತಾಸೆ, ಬಣ್ಣಗಾರಿಕೆ, ಧರಣಿ ಮಂಡಲ ಬಹುಮಾನವನ್ನೂ ನೀಡುವುದಾಗಿದ್ದು, ತೀವ್ರ ಜಿದ್ದಾಜಿದ್ದಿನ ಪೈಪೋಟಿ ನಿರೀಕ್ಷಿಸಲಾಗಿದೆ. ಈ ಬಾರಿ, ರಾಷ್ಟ್ರಪ್ರಶಸ್ತಿ ವಿಜೇತ ಕರಾವಳಿಯ ಹೆಮ್ಮೆ ಶ್ರೀ ರಿಷಬ್ ಶೆಟ್ಟಿ, ಕನ್ನಡ ಚಿತ್ರರಂಗದಲ್ಲಿ ತನ್ನ ಅದ್ಭುತ ಪ್ರತಿಭೆ ಮೂಲಕ ಮಿಂಚುತ್ತಿರುವ ತುಳುನಾಡಿನ ಕಣ್ಮಣಿ ರಾಜ್ ಬಿ. ಶೆಟ್ಟಿ, ತೆಲಿಕೆದ ಬೊಳ್ಳಿ ಡಾ. ದೇವದಾಸ್ ಕಾಪಿಕಾಡ್, ಅನೂಪ್ ಸಾಗರ್, ಶನಿಲ್ ಗುರು, ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ಅರ್ಜುನ್ ಕಾಪಿಕಾಡ್, ಸಮಿತಾ ಅಮೀನ್, ವಿನೀತ್ ಕುಮಾರ್, ಸೇರಿದಂತೆ ಅನೇಕ ಸಾಧಕರು, ಜನಪ್ರಿಯ ವ್ಯಕ್ತಿಗಳು ಪಿಲಿಪರ್ಬಕ್ಕೆ ಆಗಮಿಸಿ ಕಾರ್ಯಕ್ರಮದ ಮೆರುಗು ಹೆಚ್ಚಿಸಲಿದ್ದಾರೆ. ಈ ನಿಟ್ಟಿನಲ್ಲಿ ಹಿಂದಿಗಿಂತಲೂ ಅತ್ಯಧಿಕ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುವ ನಿರೀಕ್ಷೆಯಿದೆ ಎಂದರು.
ಕಾರ್ಯಕ್ರಮಕ್ಕೆ ಆಗಮಿಸಲಿರುವ ಗಣ್ಯರು, ದಾನಿಗಳಿಗೆ ವಿಶೇಷ ಆಸನದ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು ಸ್ಪರ್ಧಾಕೂಟ ನಡೆಯುವ ಮೈದಾನದಲ್ಲಿ 5 ಸಾವಿರ ಮಂದಿ ಕುಳಿತು ವೀಕ್ಷಿಸಬಹುದಾದ ಸುಸಜ್ಜಿತ ಪ್ರೇಕ್ಷಕ ಗ್ಯಾಲರಿ ನಿರ್ಮಿಸಲಾಗಿದೆ. ಅಲ್ಲಿಯೇ ದೊಡ್ಡ ಪರದೆಯ ವ್ಯವಸ್ಥೆಯನ್ನೂ ಮಾಡಲಾಗಿದ್ದು ಕಾರ್ಯಕ್ರಮಕ್ಕೆ ಬರಲು ಉತ್ಸುಕರಾಗಿದ್ದು ಜನಜಂಗುಳಿಯಿಂದಾಗಿ ಬರಲು ಸಾಧ್ಯವಾಗದೇ ಇರುವ ಹಿರಿಯರು ಹಾಗೂ ಮಕ್ಕಳಿಗಾಗಿ ಮನೆಯಲ್ಲಿಯೇ ಕುಳಿತು ಕಾರ್ಯಕ್ರಮ ವೀಕ್ಷಿಸಲು ನೇರ ಪ್ರಸಾರದ ವ್ಯವಸ್ಥೆಯನ್ನು ಮಾಡಲಾಗಿದೆ. ಮೈದಾನದಲ್ಲಿ ಅಚ್ಚುಕಟ್ಟಾದ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡಲಾಗಿದೆ. ಕಲಾಪ್ರೇಮಿಗಳು ಮಂಗಳೂರು ದಸರಾ ಸಂಭ್ರಮದ ಜೊತೆಗೆ ಪಿಲಿಪರ್ಬಕ್ಕೆ ಕುಟುಂಬ ಸಮೇತ ಆಗಮಿಸಿ ಕಾರ್ಯಕ್ರಮದ ಸಂಪೂರ್ಣ ಯಶಸ್ಸಿಗೆ ನಮ್ಮೊಂದಿಗೆ ಸಹಕರಿಸಿ ಸ್ಪರ್ಧಾಕೂಟದ ರಸದೌತಣ ಸವಿಯುವಂತೆ ಅಹ್ವಾನಿಸಿದರು.
ಸ್ಪರ್ಧಾಕೂಟದಲ್ಲಿ ಟೀಮ್ ಪರಶುರಾಮ ಕುಡ್ಲ, ಪಾಂಡೇಶ್ವರ ಶಾರದಾ ಹುಲಿ, ಟೀಮ್ ಹನುಮಾನ್ ಫ್ರೆಂಡ್ಸ್ ಫೈಸಲ್ ನಗರ, ಎಮ್.ಎಫ್.ಟಿ ಮುಳಿಹಿತ್ಲು, ನಂದಿಗುಡ್ಡ ಫ್ರೆಂಡ್ಸ್ ಬಾಬುಗುಡ್ಡ, ಟ್ಯಾಲೆಂಟ್ ಟೈಗರ್ಸ್ ತುಳುನಾಡು, ಪುರಲ್ದಪ್ಪೆನ ಮೋಕೆದ ಬೊಳ್ಳಿಲು ಪೊಳಲಿ ಟೈಗರ್ಸ್, ಎಸ್ ಕೆ ಬಿ ಟೈಗರ್ಸ್ ಕುಂಪಲ, ಟೀಮ್ ಕಲ್ಲೇಗ ಟೈಗರ್ಸ್ ಪುತ್ತೂರು, ಮುಳುಹಿತ್ಲು ಫ್ರೆಂಡ್ಸ್ ಸರ್ಕಲ್ (ರಿ.) ಒಟ್ಟು ಹತ್ತು ತಂಡಗಳು ಭಾಗವಹಿಸಲಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಪ್ರತಿಷ್ಟಾನದ ಅದ್ಯಕ್ಷರಾದ ದಿವಾಕರ್ ಪಾಂಡೇಶ್ವರ್, ಅಶ್ವಿತ್ ಕೊಟ್ಟಾರಿ,ಲಲಿತ್ ಮೆಂಡನ್, ಜಗದೀಶ್, ಶಾನ್ ಪೂಜಾರಿ ಉಪಸ್ಥಿತರಿದ್ದರು .