ಮೂಡುಬಿದಿರೆ: ಆಳ್ವಾಸ್ ಪುನರ್ಜನ್ಮ ಹಾಗೂ ಬೆಳ್ತಂಗಡಿಯ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ಮೂಡುಬಿದಿರೆಯ ಆಳ್ವಾಸ್ ಪುನರ್ಜನ್ಮ ಸಮಗ್ರ ವೈದ್ಯಕೀಯ ಚಿಕಿತ್ಸೆಯ ದುಶ್ಚಟ ನಿವಾರಣಾ ಕೇಂದ್ರದಲ್ಲಿ ಜುಲೈ 4ರಿಂದ 13ರವರೆಗೆ ರಾಜ್ಯ ಮಟ್ಟದ ಮಹಿಳಾ ಮದ್ಯವರ್ಜನ ಶಿಬಿರ ಆಯೋಜಿಸಲಾಗಿದ್ದು, ಇದರ ಪೂರ್ವಭಾವಿ ಸಮಾಲೋಚನಾ ಸಭೆ ಮೂಡುಬಿದಿರೆಯಲ್ಲಿ ಇತ್ತೀಚೆಗೆ ಯಶಸ್ವಿಯಾಗಿ ನಡೆಯಿತು. ಸಭೆಯಲ್ಲಿ ಮಾತನಾಡಿದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯ್ಸ್ ಅವರು, ಇತ್ತೀಚಿನ ದಿನಗಳಲ್ಲಿ ಮಹಿಳೆಯರೂ ಸಹ ಮದ್ಯ, ಮಾದಕ ವಸ್ತುಗಳು ಹಾಗೂ ಇತರ ವ್ಯಸನಗಳ ಬಲೆಗೆ ಸಿಲುಕುತ್ತಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ. ವ್ಯಸನವು ಕೇವಲ ವ್ಯಕ್ತಿಯ ಆರೋಗ್ಯವನ್ನಷ್ಟೇ ಅಲ್ಲದೆ, ಕುಟುಂಬದ ನೆಮ್ಮದಿ ಹಾಗೂ ಸಮಾಜದ ಸ್ವಾಸ್ಥ್ಯದ ಮೇಲೂ ಗಂಭೀರ ಪರಿಣಾಮ ಬೀರುತ್ತದೆ. ಒಬ್ಬ ಮಹಿಳೆ ದಾರಿ ತಪ್ಪಿದರೆ ಇಡೀ ಕುಟುಂಬವೇ ಸಂಕಷ್ಟಕ್ಕೆ ಸಿಲುಕುವುದರಿಂದ, ಮಹಿಳೆಯರಲ್ಲಿ ಜಾಗೃತಿ ಮೂಡಿಸಿ ಅವರನ್ನು ವ್ಯಸನಮುಕ್ತ ಬದುಕಿನತ್ತ ಕೊಂಡೊಯ್ಯುವ ಮಹತ್ತರ ಉದ್ದೇಶದಿಂದ ಈ ಶಿಬಿರವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಡಾ. ಡಿ. ವೀರೆಂದ್ರ ಹೆಗ್ಗಡೆಯವರ ದಿವ್ಯ ಮಾರ್ಗದರ್ಶನದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯು ಇದುವರೆಗೆ ಸುಮಾರು 1.5 ಲಕ್ಷಕ್ಕೂ ಅಧಿಕ ಜನರನ್ನು ವಿವಿಧ ವ್ಯಸನಗಳಿಂದ ಮುಕ್ತಗೊಳಿಸಿದ್ದು, ಸಾವಿರಾರು ಕುಟುಂಬಗಳಲ್ಲಿ ಹೊಸ ಬದುಕಿನ ಆಶಾಕಿರಣ ಮೂಡಿಸಿದೆ. ಮಹಿಳೆಯರಿಗಾಗಿ ವಿಶೇಷವಾಗಿ ಆಯೋಜಿಸಲಾಗುತ್ತಿರುವ ಈ ಶಿಬಿರವು ಸಂಪೂರ್ಣ ವಸತಿ ಸಹಿತ ಪುನರ್ವಸತಿ ಶಿಬಿರವಾಗಿದ್ದು, ಪರಿಣತ ವೈದ್ಯರು ಹಾಗೂ ಮನೋವೈದ್ಯರ ಮಾರ್ಗದರ್ಶನದಲ್ಲಿ ಸೂಕ್ತ ಚಿಕಿತ್ಸೆ ಮತ್ತು ಸಲಹಾ ಸೇವೆಗಳನ್ನು ಉಚಿತವಾಗಿ ಒದಗಿಸಲಾಗುವುದು ಎಂದರು. ಈ ಶಿಬಿರದಲ್ಲಿ ಭಾಗವಹಿಸುವ ಮಹಿಳೆಯರಿಗೆ ಮನೋವೈದ್ಯಕೀಯ, ಸ್ತ್ರೀರೋಗ, ದಂತ, ಶ್ವಾಸಕೋಶ, ನೇತ್ರ, ಚರ್ಮ, ನರರೋಗ ಹಾಗೂ ಪೌಷ್ಟಿಕಾಂಶ ಸೇರಿದಂತೆ ವಿವಿಧ ವಿಭಾಗಗಳ ಸಮಗ್ರ ವೈದ್ಯಕೀಯ ತಪಾಸಣೆ ನಡೆಯಲಿದೆ. ಅಗತ್ಯವಿರುವವರಿಗೆ ಡಿಟಾಕ್ಸ್ ಹಾಗೂ ವ್ಯಸನಮುಕ್ತಿ ಚಿಕಿತ್ಸೆಯ ಜೊತೆಗೆ ವೈಯಕ್ತಿಕ ಸಮಾಲೋಚನೆ ಮತ್ತು ಮಾನಸಿಕ ಆರೋಗ್ಯ ಶಿಕ್ಷಣವನ್ನು ನೀಡಲಾಗುತ್ತದೆ. ಇದರೊಂದಿಗೆ ಯೋಗ, ಧ್ಯಾನ, ಪ್ರಕೃತಿ ಚಿಕಿತ್ಸೆ, ಆಯುರ್ವೇದ ಮತ್ತು ಹೋಮಿಯೋಪಥಿ ಚಿಕಿತ್ಸೆಗಳ ಮೂಲಕ ಸಮಗ್ರ ಆರೋಗ್ಯ ಪುನಶ್ಚೇತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮಹಿಳೆಯರ ಸ್ವಾವಲಂಬನೆಗೆ ಉತ್ತೇಜನ ನೀಡುವ ದೃಷ್ಟಿಯಿಂದ ಹೊಲಿಗೆ, ಬ್ಯೂಟಿಷಿಯನ್ ಸೇರಿದಂತೆ ವಿವಿಧ ಕೌಶಲ್ಯಾಭಿವೃದ್ಧಿ ತರಬೇತಿಗಳ ಪರಿಚಯಾತ್ಮಕ ಅಧಿವೇಶನಗಳನ್ನು ಆಯೋಜಿಸಲಾಗಿದೆ. ಶಿಬಿರದ ಅವಧಿಯಲ್ಲಿ ಭಜನೆ, ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಒಳಾಂಗಣ ಕ್ರೀಡೆಗಳು ಹಾಗೂ ವಿವಿಧ ಸ್ಪರ್ಧೆಗಳು ನಡೆಯಲಿದ್ದು, ಭಾಗವಹಿಸುವವರಿಗೆ ಉಚಿತ ಆಹಾರ ಮತ್ತು ವಸತಿ ಸೌಲಭ್ಯ ಇರಲಿದೆ.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ವೈದ್ಯಕೀಯ ಕಾಲೇಜಿನ ಡೀನ್ ಡಾ. ಮಹಾಬಲ ಶೆಟ್ಟಿ ಮಾತನಾಡಿ, ಮಹಿಳಾ ಮದ್ಯವರ್ಜನ ಶಿಬಿರದ ಯಶಸ್ಸಿನಲ್ಲಿ ಗೌಪ್ಯತೆ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ವ್ಯಸನದ ಸಮಸ್ಯೆಯಿಂದ ಬಳಲುತ್ತಿರುವ ಅನೇಕ ಮಹಿಳೆಯರು ಸಾಮಾಜಿಕ ಕಳಂಕ, ಕುಟುಂಬದ ಒತ್ತಡ ಹಾಗೂ ಸಾರ್ವಜನಿಕ ಅಭಿಪ್ರಾಯದ ಭಯದಿಂದ ತಮ್ಮ ಸಮಸ್ಯೆಯನ್ನು ಬಹಿರಂಗಪಡಿಸಲು ಹಿಂಜರಿಯುತ್ತಾರೆ. ಆದ್ದರಿಂದ ಶಿಬಿರಾರ್ಥಿಗಳ ವೈಯಕ್ತಿಕ ಮಾಹಿತಿ, ಆರೋಗ್ಯ ಸಂಬಂಧಿತ ವಿವರಗಳು ಹಾಗೂ ಸಮಾಲೋಚನೆಯಲ್ಲಿ ಹಂಚಿಕೊಳ್ಳುವ ಎಲ್ಲಾ ವಿಷಯಗಳನ್ನು ಸಂಪೂರ್ಣ ಗೌಪ್ಯವಾಗಿ ಇಡಲಾಗುವುದು ಎಂದು ಭರವಸೆ ನೀಡಿದರು. ಪುನರ್ಜನ್ಮದ ಆಪ್ತ ಸಮಾಲೋಚಕಿ ಸುಮನ್ ಪಿಂಟೋ ಪ್ರಾಸ್ತಾವಿಕವಾಗಿ ಮಾತನಾಡಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಶಿಕ್ಷಣ, ಆರೋಗ್ಯ, ಸಂಸ್ಕೃತಿ ಹಾಗೂ ಸಾಮಾಜಿಕ ಜಾಗೃತಿ ಕ್ಷೇತ್ರಗಳಲ್ಲಿ ಮಹತ್ವದ ಸೇವೆ ಸಲ್ಲಿಸುತ್ತಿದೆ. ಈ ಸಾಮಾಜಿಕ ಬದ್ಧತೆಯ ಭಾಗವಾಗಿರುವ ಆಳ್ವಾಸ್ ಪುನರ್ಜನ್ಮ – ಪ್ರೈಮ್ ಸೆಂಟರ್ ಫಾರ್ ಸೈಕಲಾಜಿಕಲ್ ಮೆಡಿಸಿನ್ ಕಳೆದ ಆರು ವರ್ಷಗಳಿಂದ ಮಾನಸಿಕ ಆರೋಗ್ಯ ಮತ್ತು ವ್ಯಸನಮುಕ್ತಿ ಕ್ಷೇತ್ರದಲ್ಲಿ ಗಮನಾರ್ಹ ಸೇವೆ ಸಲ್ಲಿಸುತ್ತಿದೆ. ಮಹಿಳೆಯರ ಆರೋಗ್ಯ, ಸುರಕ್ಷತೆ ಮತ್ತು ಗೌರವವನ್ನು ಗಮನದಲ್ಲಿಟ್ಟುಕೊಂಡು ಜುಲೈ 4 ರಿಂದ 13ರವರೆಗೆ ವಿಶೇಷ ಮಹಿಳಾ ವ್ಯಸನಮುಕ್ತಿ ಶಿಬಿರ ಹಾಗೂ ಪ್ರತ್ಯೇಕ ಡಿ-ಅಡಿಕ್ಷನ್ ವಾರ್ಡ್ ಆರಂಭಿಸುವ ಮಹತ್ವದ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು. ಸಭೆಯಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಮೂಡುಬಿದಿರೆ ವಲಯದ ವಾಸುದೇವ ನಾಯ್ಕ, ಪ್ರಮುಖರಾದ ಸುಭಾಶ್ಚಂದ್ರ ಚೌಟ ಹಾಗೂ ಬಾಹುಬಲಿ ಪ್ರಸಾದ್ ಉಪಸ್ಥಿತರಿದ್ದರು. ಮೂಡುಬಿದಿರೆ ವಲಯ ಯೋಜನಾಧಿಕಾರಿ ಧನಂಜಯ ಸ್ವಾಗತಿಸಿ, ವಂದಿಸಿದರು. ಯೋಜನಾಧಿಕಾರಿ ಗಣೇಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.