ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಕೃಷಿಕರು ವನ್ಯಜೀವಿಗಳ ಉಪಟಳದಿಂದ ತಮ್ಮ ಬೆಳೆ ರಕ್ಷಣೆಗೆ ಬಳಸುವ ಬಂದೂಕು ಪರವಾನಗಿ (ಲೈಸನ್ಸ್) ನವೀಕರಣ ಪ್ರಕ್ರಿಯೆಯಲ್ಲಿ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಗಂಭೀರ ಸಮಸ್ಯೆಗೆ ತಕ್ಷಣವೇ ಸ್ಪಂದಿಸಿ ಸೂಕ್ತ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿ ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ರಾಜ್ಯ ಪೊಲೀಸ್ ಮಹಾ ನಿರ್ದೇಶಕರು (ಡಿಜಿಪಿ) ಹಾಗೂ ಜಿಲ್ಲಾಧಿಕಾರಿಗಳಿಗೆ ತುರ್ತು ಪತ್ರ ಬರೆದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕೃಷಿಕರು ಕಾನೂನುಬದ್ಧವಾಗಿ ಪಡೆದಿರುವ ಬಂದೂಕು ಪರವಾನಗಿಯ ನವೀಕರಣ ಅರ್ಜಿಗಳನ್ನು ಕಠಿಣ ನಿಯಮಗಳ ನೆಪವೊಡ್ಡಿ ಅಧಿಕಾರಿಗಳು ವ್ಯವಸ್ಥಿತವಾಗಿ ತಿರಸ್ಕರಿಸುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ ಎಂದು ಸಂಸದರು ಆತಂಕ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಅದರಲ್ಲೂ ವಿಶೇಷವಾಗಿ ಕಾಡಿನಂಚಿನಲ್ಲಿರುವ ಕೃಷಿಕರು ನಾನಾ ರೀತಿಯ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹಿಂದೆ ವಾಡಿಕೆಯಂತೆ ಈ ಬೆಳೆ ರಕ್ಷಣಾ ಪರವಾನಗಿಗಳನ್ನು ವಾರ್ಷಿಕ ನವೀಕರಣ ಪ್ರಕ್ರಿಯೆಗೆ ಒಳಪಡಿಸಲಾಗುತ್ತಿತ್ತು. ಆದರೆ ಪ್ರಸ್ತುತ ಈ ಪ್ರಕ್ರಿಯೆಗಳಿಗೆ ತಡೆಯೊಡ್ಡುತ್ತಿರುವುದು ರೈತರನ್ನು ಸಂಪೂರ್ಣವಾಗಿ ಅಸಹಾಯಕರನ್ನಾಗಿಸುತ್ತಿದೆ.
ದಕ್ಷಿಣ ಕನ್ನಡ ಭಾಗದ ರೈತರು ಕಷ್ಟಪಟ್ಟು ದುಡಿದ ಬೆಳೆಗಳನ್ನು ಕಾಡುಪ್ರಾಣಿಗಳಿಂದ ರಕ್ಷಿಸಲು ಹಲವು ದಶಕಗಳಿಂದ ಈ ಕೋವಿ ಪರವಾನಗಿ ಸೌಲಭ್ಯವನ್ನು ಅವಲಂಬಿಸಿದ್ದಾರೆ. ಆದರೆ ಕಳೆದೊಂದು ವರ್ಷದಲ್ಲಿ ’ಕೃಷಿ ಭೂಮಿಗೆ ವನ್ಯಜೀವಿಗಳು ನುಗ್ಗಿಲ್ಲ ಅಥವಾ ಹಾನಿ ಮಾಡಿಲ್ಲ’ ಎಂಬ ವಿಚಿತ್ರ ಕಾರಣ ನೀಡಿ ನೊಂದ ರೈತರ ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿರುವ ಬಗ್ಗೆ ಸಂತ್ರಸ್ತರು ಸಂಸದರ ಗಮನಕ್ಕೆ ತಂದಿದ್ದಾರೆ. ರೈತರ ಬಳಿ ಪರವಾನಗಿ ಹೊಂದಿದ ಬಂದೂಕು ಇರುವುದೇ ವನ್ಯಜೀವಿಗಳು ಕೃಷಿ ಭೂಮಿಗೆ ನುಗ್ಗದಂತೆ ತಡೆಯುವ ಪ್ರಮುಖ ಪ್ರತಿಬಂಧಕ ಶಕ್ತಿಯಾಗಿರುತ್ತದೆ. ಕಾಡುಪ್ರಾಣಿಗಳ ದಾಳಿಯು ತೀರಾ ಅನಿರೀಕ್ಷಿತವಾಗಿದ್ದು, ಅದನ್ನು ಮುಂಚಿತವಾಗಿ ಊಹಿಸುವುದು ಅಸಾಧ್ಯ. ಇಂತಹ ಪರಿಸ್ಥಿತಿಯಲ್ಲಿ ಬಂದೂಕು ಪರವಾನಗಿ ಇಲ್ಲದೆ ರೈತನು ಅಸಹಾಯಕನಾಗಿ ಕೈಕಟ್ಟಿ ಕುಳಿತರೆ, ಕಣ್ಣೆದುರೇ ಇಡೀ ಕೃಷಿ ನಾಶವಾಗಿ ಆತನ ಜೀವನೋಪಾಯವೇ ಬೀದಿಗೆ ಬೀಳುವ ಆತಂಕ ಎದುರಾಗುತ್ತದೆ ಎಂಬುದನ್ನು ಕ್ಯಾಪ್ಟನ್ ಚೌಟ ಅವರು ಜಿಲ್ಲಾಡಳಿತಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಕಾನೂನು ಪಾಲಿಸುವ ಮತ್ತು ಯಾವುದೇ ಅಪರಾಧ ಹಿನ್ನೆಲೆ ಇಲ್ಲದ ಕೃಷಿಕರು ಕೇವಲ ತಮ್ಮ ಆತ್ಮರಕ್ಷಣೆ ಹಾಗೂ ಬೆಳೆ ರಕ್ಷಣೆಗಾಗಿ ಮಾತ್ರ ಬಂದೂಕು ಹೊಂದಿರುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಹೀಗಿರುವಾಗ ರೈತರ ಮೇಲೆ ಅನಗತ್ಯ ಕಠಿಣ ನಿಬಂಧನೆಗಳನ್ನು ಹೇರದೆ, ಜಿಲ್ಲಾಡಳಿತವು ವಾಸ್ತವಿಕ ನೆಲೆಯಲ್ಲಿ ಪ್ರಸ್ತುತ ಜಾರಿಯಲ್ಲಿರುವ ಕಠಿಣ ನಿಯಮಗಳನ್ನು ಮರುಪರಿಶೀಲಿಸಬೇಕು ಮತ್ತು ಪ್ರಕ್ರಿಯೆಯನ್ನು ಸರಳೀಕೃತಗೊಳಿಸಬೇಕು. ಗನ್ ಲೈಸನ್ಸ್ ನಿಯಮಗಳನ್ನು ಪಾಲಿಸುತ್ತಿರುವ ಅರ್ಹ ರೈತರ ಅರ್ಜಿಗಳನ್ನು ಯಾವುದೇ ಅಡೆತಡೆಯಿಲ್ಲದೆ ಸುಲಭವಾಗಿ ನವೀಕರಿಸಿಕೊಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ತಕ್ಷಣ ಆದೇಶಿಸಬೇಕೆಂದು ಪತ್ರದ ಮೂಲಕ ಒತ್ತಾಯಿಸಲಾಗಿದೆ. ರೈತರ ಈ ಗಂಭೀರ ಸಮಸ್ಯೆಯನ್ನು ಸಂಸದರು ಡಿಜಿಪಿ ಅವರೊಂದಿಗೆ ಪಶ್ಚಿಮ ವಲಯ ಐಜಿಪಿ, ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಹಾಗೂ ಮಂಗಳೂರು ನಗರ ಪೊಲೀಸ್ ಆಯುಕ್ತರ ಗಮನಕ್ಕೂ ತಂದು ತಕ್ಷಣದ ಕ್ರಮಕ್ಕೆ ಆಗ್ರಹಿಸಿದ್ದಾರೆ.