ಮಂಗಳೂರು: ಭಾರತೀಯ ನೌಕಾಪಡೆಯಲ್ಲಿ ಸಬ್ ಲೆಫ್ಟಿನೆಂಟ್ ಅಧಿಕಾರಿಯಾಗಿ ನಿಯೋಜನೆಗೊಂಡಿರುವ ಕುಲಶೇಖರ ಕೊಂಗೂರಿನ ನಿವಾಸಿ ನಿಶೆಲ್ ಫ್ಲೋರಾ ಆಲ್ಮೆಡಾ ಅವರ ಮನೆಗೆ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ ಅವರು ಭೇಟಿ ನೀಡಿ ವಿಶೇಷವಾಗಿ ಅಭಿನಂದಿಸಿದರು. ನವೀನ್ ಆಲ್ಮೆಡಾ ಮತ್ತು ಕ್ರಿಸ್ ಎವರ್ಟ್ ಡಿಸೋಜ ದಂಪತಿಗಳ ಪುತ್ರಿಯಾಗಿರುವ ನಿಶೆಲ್ ಫ್ಲೋರಾ ಆಲ್ಮೆಡಾ ಅವರ ಈ ಸಾಧನೆಯು ಇಡೀ ತುಳುನಾಡಿಗೆ ಹೆಮ್ಮೆ ತಂದಿದೆ ಎಂದು ಶಾಸಕರು ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ನಿಶೆಲ್ ಅವರ ಸಾಧನೆಯು ಇಂದಿನ ಯುವ ಜನಾಂಗಕ್ಕೆ ದೊಡ್ಡ ಪ್ರೇರಣೆಯಾಗಿದೆ. ಕೊಂಗೂರಿನ ನಾಗರಿಕರು ಪ್ರೀತಿ ಮತ್ತು ಹೆಮ್ಮೆಯಿಂದ ಅವರನ್ನು ಬರಮಾಡಿಕೊಂಡಿರುವುದು ಭಾರತೀಯ ಸೇನೆಗೆ ನಮ್ಮ ಜನರು ನೀಡುವ ಗೌರವಕ್ಕೆ ಸಾಕ್ಷಿಯಾಗಿದೆ. ನಿಶೆಲ್ ಅವರಿಗೆ ಭಾರತ ಮಾತೆಯ ಸೇವೆಯಲ್ಲಿ ಉಜ್ವಲ ಅವಕಾಶಗಳು ದೊರೆಯಲಿ ಮತ್ತು ಅವರು ಅತ್ಯುನ್ನತ ಸ್ಥಾನಕ್ಕೇರಲಿ ಎಂದು ಶುಭ ಹಾರೈಸಿದರು. ಈ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ರಮೇಶ್ ಹೆಗ್ಡೆ, ನಿಕಟಪೂರ್ವ ಪಾಲಿಕೆ ಸದಸ್ಯ ಕಿಶೋರ್ ಕೊಟ್ಟಾರಿ, ಪ್ರವೀಣ್ ನಿಡ್ಡೇಲ್, ಮಣಿ, ತೇಜಸ್ ಕೊಂಗೂರು, ಭಾಸ್ಕರ್, ಚೇತನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.