ಉಜಿರೆ:ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ಸುಂದರ ಕನಸುಗಳನ್ನು ಕಾಣುವುದರೊಂದಿಗೆ, ಅವುಗಳನ್ನು ನನಸಾಗಿಸಿಕೊಳ್ಳಲು ಅವಿರತವಾಗಿ ಪ್ರಯತ್ನಿಸಬೇಕು ಎಂದು ಸೋನಿಯಾ ಯಶೋವರ್ಮ ಕರೆ ನೀಡಿದರು. ಅವರು ಬುಧವಾರ ಉಜಿರೆಯ ಎಸ್.ಡಿ.ಎಂ. ಸನಿವಾಸ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಪಿಯುಸಿ ಶಿಕ್ಷಣವು ವಿದ್ಯಾರ್ಥಿ ಜೀವನದ ಅತ್ಯಂತ ಪ್ರಮುಖ ಹಂತವಾಗಿದೆ. ವಿದ್ಯಾರ್ಥಿಗಳು ಶಿಸ್ತು ಮತ್ತು ಸಮಯಪಾಲನೆಯನ್ನು ಮೈಗೂಡಿಸಿಕೊಂಡು, ಕಠಿಣ ಪರಿಶ್ರಮದಿಂದ ಅಧ್ಯಯನ ನಡೆಸಿದರೆ ಮಾತ್ರ ಉತ್ತಮ ಅಂಕಗಳೊಂದಿಗೆ ಯಶಸ್ಸು ಗಳಿಸಲು ಸಾಧ್ಯ ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಐ.ಟಿ. ಮತ್ತು ವಿದ್ಯಾರ್ಥಿನಿಲಯಗಳ ಆಡಳಿತ ವಿಭಾಗದ ಮುಖ್ಯಕಾರ್ಯನಿರ್ವಹಣಾಧಿಕಾರಿ ಪೂರನ್‌ವರ್ಮ ಮಾತನಾಡಿ, ವಸತಿ ನಿಲಯಗಳು ಕೇವಲ ಶಿಕ್ಷಣದ ತಾಣಗಳಲ್ಲ, ಅವು ಜೀವನ ಶಿಕ್ಷಣವನ್ನು ಮತ್ತು ಉತ್ತಮ ಸಂಸ್ಕಾರವನ್ನು ನೀಡುವ ಕೇಂದ್ರಗಳಾಗಿವೆ. ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿಗಳನ್ನು ಅರಿತುಕೊಳ್ಳುವುದರ ಜೊತೆಗೆ, ಬದುಕಿನಲ್ಲಿ ಕೃತಜ್ಞತಾ ಭಾವವನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಸಂಸ್ಥೆಯ ಪ್ರಾಂಶುಪಾಲ ಸುನಿಲ್ ಪಂಡಿತ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ಉಪನ್ಯಾಸಕಿ ವಾಣಿ ಸ್ವಾಗತಿಸಿದರು ಮತ್ತು ಕವಿತಾ ಅವರು ವಂದನಾರ್ಪಣೆ ಸಲ್ಲಿಸಿದರು.