image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಆರು ತಿಂಗಳೊಳಗೆ ಕರ್ನಾಟಕ ವಿಧಾನಮಂಡಲ ಕಾಗದರಹಿತ: ಸ್ಪೀಕರ್ ಯು.ಟಿ. ಖಾದರ್

ಆರು ತಿಂಗಳೊಳಗೆ ಕರ್ನಾಟಕ ವಿಧಾನಮಂಡಲ ಕಾಗದರಹಿತ: ಸ್ಪೀಕರ್ ಯು.ಟಿ. ಖಾದರ್

ಮಂಗಳೂರು: ಕರ್ನಾಟಕ ವಿಧಾನಮಂಡಲದ ವಿವಿಧ ಪ್ರಕ್ರಿಯೆಗಳಿಗೆ ಕಾಗದರಹಿತ ವ್ಯವಸ್ಥೆಯನ್ನು ಜಾರಿಗೊಳಿಸಲು ಮಹತ್ವದ ಚಾಲನೆ ನೀಡಲಾಗಿದ್ದು, ಮುಂದಿನ ಆರು ತಿಂಗಳೊಳಗೆ ಇದು ಸಂಪೂರ್ಣವಾಗಿ ಅನುಷ್ಠಾನಗೊಳ್ಳಲಿದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ತಿಳಿಸಿದ್ದಾರೆ. ನಗರದ ಸರ್ಕ್ಯೂಟ್ ಹೌಸ್ ನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, 

ಕೇಂದ್ರ ಸರ್ಕಾರದ ‘ನ್ಯಾಷನಲ್ ಇ-ವಿಧಾನ್ ಆಪ್ಲಿಕೇಷನ್’ (ನೇವಾ) ತಂತ್ರಾಂಶವನ್ನು ಬಳಸಿ ವಿಧಾನಮಂಡಲದ ಕಲಾಪಗಳನ್ನು ಡಿಜಿಟಲೀಕರಣಗೊಳಿಸುವ ಕುರಿತು ಸಂಸತ್ತು ಹಾಗೂ ಕರ್ನಾಟಕ ವಿಧಾನಮಂಡಲಗಳ ಸಚಿವಾಲಯಗಳ ನಡುವೆ ಇತ್ತೀಚೆಗೆ ಒಪ್ಪಂದ (MoU) ಸಹಿಯಾಗಿದ್ದು, ವಿಧಾನಮಂಡಲದ ಕಲಾಪಗಳನ್ನು ಸಂಪೂರ್ಣ ಡಿಜಿಟಲ್ ರೂಪಕ್ಕೆ ತರಲು ರಾಜ್ಯ ಸರ್ಕಾರವು ಕೇಂದ್ರದ ‘ನೇವಾ’ ಆಪ್ಲಿಕೇಷನ್ ಬಳಕೆಗೆ ಅನುಮೋದನೆ ನೀಡಿದೆ. ಈ ವ್ಯವಸ್ಥೆ ಜಾರಿಯಾದರೆ ಒಟ್ಟು ವೆಚ್ಚದ ಶೇ.60ರಷ್ಟು ಹಣವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ ಎಂದರು.

ಈ ಯೋಜನೆಯಡಿ ಬೆಂಗಳೂರಿನ ವಿಧಾನಸೌಧ ಹಾಗೂ ಬೆಳಗಾವಿಯ ಸುವರ್ಣ ವಿಧಾನಸೌಧವನ್ನು ಡಿಜಿಟಲೀಕರಣಗೊಳಿಸಲಾಗುವುದು. ವಿಧಾನಸಭೆಯ ಡಿಜಿಟಲೀಕರಣಕ್ಕೆ 72 ಕೋಟಿ ರೂ. ಹಾಗೂ ವಿಧಾನ ಪರಿಷತ್ತಿನ ಡಿಜಿಟಲೀಕರಣಕ್ಕೆ 52 ಕೋಟಿ ರೂ. ವೆಚ್ಚವಾಗಲಿದೆ. ಯೋಜನೆಯ ಅನುಷ್ಠಾನಕ್ಕಾಗಿ ಪ್ರತ್ಯೇಕ ಸಮಿತಿಯನ್ನು ರಚಿಸಲಾಗುತ್ತಿದ್ದು, ವಿಧಾನಸಭಾ ಸಚಿವಾಲಯದ ಕಾರ್ಯದರ್ಶಿಗಳು ಹಾಗೂ ಮಾಹಿತಿ ತಂತ್ರಜ್ಞಾನ ವಿಭಾಗದ ಅಧಿಕಾರಿಗಳು ಜವಾಬ್ದಾರಿ ವಹಿಸಲಿದ್ದಾರೆ. ಡಿಜಿಟಲೀಕರಣ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಪ್ರಶ್ನೋತ್ತರಗಳು, ಬಜೆಟ್ ಪ್ರತಿಗಳು, ಮಸೂದೆಗಳ ಕರಡುಗಳು ಸೇರಿದಂತೆ ಎಲ್ಲಾ ದಾಖಲೆಗಳ ಮುದ್ರಣ ಹಾಗೂ ಸಾಗಾಟ ವೆಚ್ಚ ಸಂಪೂರ್ಣವಾಗಿ ಉಳಿತಾಯವಾಗಲಿದೆ. ಈಗಿನ ಹೂಡಿಕೆ ಮುಂದಿನ ಒಂದೆರಡು ವರ್ಷಗಳಲ್ಲಿ ಕಾಗದ ಮತ್ತು ಮುದ್ರಣ ವೆಚ್ಚದ ಉಳಿತಾಯದ ಮೂಲಕ ಸರಿದೂಗಲಿದೆ ಎಂದು ಖಾದರ್ ಹೇಳಿದರು. ಅಧಿವೇಶನದ ಸಂದರ್ಭದಲ್ಲಿ ಶಾಸಕರಿಗೆ ಐಪ್ಯಾಡ್ ಹಾಗೂ ಅಗತ್ಯ ಟ್ಯಾಬ್‌ಗಳನ್ನು ಒದಗಿಸಲಾಗುವುದು. ದಿನದ ಕಾರ್ಯಸೂಚಿ ಸೇರಿದಂತೆ ಅಗತ್ಯ ಮಾಹಿತಿಗಳು ಇದರಲ್ಲಿ ಲಭ್ಯವಿರಲಿದ್ದು, ಬಳಕೆಯ ಕುರಿತು ಶಾಸಕರಿಗೆ ವಿಶೇಷ ತರಬೇತಿಯನ್ನೂ ನೀಡಲಾಗುತ್ತದೆ. ಇದರಿಂದ ಹಣದ ಜೊತೆಗೆ ಸಮಯದ ಉಳಿತಾಯವೂ ಆಗಲಿದೆ ಎಂದು ಹೇಳಿದರು.

ಪ್ರಸ್ತುತ ಶಾಸಕರ ಹಾಜರಾತಿಯನ್ನು ಸಹಿ ಮೂಲಕ ದಾಖಲಿಸಲಾಗುತ್ತಿದ್ದು, ಶೀಘ್ರದಲ್ಲೇ ಸ್ವಯಂಚಾಲಿತ ವ್ಯವಸ್ಥೆ ಜಾರಿಗೆ ಬರಲಿದೆ. ಶಾಸಕರಿಗೆ ಪ್ರತ್ಯೇಕ ಮೊಬೈಲ್ ಒದಗಿಸಲಾಗುವುದು. ಅವರು ಸಭಾಂಗಣದಲ್ಲಿ ತಮ್ಮ ನಿಗದಿತ ಆಸನದಲ್ಲಿ ಕುಳಿತಾಗ ಮಾತ್ರ ಹಾಜರಾತಿ ದಾಖಲಾಗುವ ವ್ಯವಸ್ಥೆ ಅಳವಡಿಸಲಾಗುತ್ತದೆ. ಯುವ ಶಾಸಕರು ಈ ವ್ಯವಸ್ಥೆಗೆ ಸುಲಭವಾಗಿ ಹೊಂದಿಕೊಳ್ಳಲಿದ್ದು, ಹಿರಿಯ ಶಾಸಕರು ಹೊಂದಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು ಎಂದು ಖಾದರ್ ಅಭಿಪ್ರಾಯಪಟ್ಟರು. ಸಾರ್ವಜನಿಕರ ಅನುಕೂಲಕ್ಕಾಗಿ ವಿಧಾನಸೌಧದ ಪ್ರತಿ ಮಹಡಿಯಲ್ಲಿ ತಲಾ ಎರಡು ಕಿಯಾಸ್ಕ್‌ಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ. ಇವುಗಳ ಮೂಲಕ ವಿವಿಧ ಸಚಿವಾಲಯಗಳ ಕಚೇರಿಗಳು ಹಾಗೂ ಸಚಿವರ ಕೊಠಡಿಗಳ ಮಾಹಿತಿ ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗಲಿದೆ. ಮುಂದಿನ ದಿನಗಳಲ್ಲಿ ಹೊಸ ಮಸೂದೆಗಳ ಕರಡುಗಳನ್ನು ಸಾರ್ವಜನಿಕರಿಗೆ ಮುಕ್ತವಾಗಿ ಲಭ್ಯವಾಗುವಂತೆ ಮಾಡಿ ಅವರ ಅಭಿಪ್ರಾಯ ಸಂಗ್ರಹಿಸುವ ಯೋಜನೆಯೂ ಇದೆ. ಅಲ್ಲದೆ, ವಿಧಾನಸಭೆಯಲ್ಲಿ ಸಚಿವರು ಹಾಗೂ ಶಾಸಕರು ಮಾಡುವ ಭಾಷಣಗಳನ್ನು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಮೂಲಕ ವಿವಿಧ ಭಾಷೆಗಳಿಗೆ ತರ್ಜುಮೆ ಮಾಡಿ ಜನರಿಗೆ ತಲುಪಿಸುವ ಉದ್ದೇಶವನ್ನೂ ಹೊಂದಲಾಗಿದೆ. ವಿಧಾನಸೌಧವು ಐತಿಹಾಸಿಕ ಹಾಗೂ ಪಾರಂಪರಿಕ ಕಟ್ಟಡವಾಗಿರುವ ಹಿನ್ನೆಲೆಯಲ್ಲಿ, ಆಧುನಿಕ ಡಿಜಿಟಲ್ ತಂತ್ರಜ್ಞಾನಗಳನ್ನು ಅಳವಡಿಸುವಾಗ ಹೆರಿಟೇಜ್ ರಚನೆಗೆ ಯಾವುದೇ ಧಕ್ಕೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗುವುದು ಎಂದರು.

Category
ಕರಾವಳಿ ತರಂಗಿಣಿ