ಮಂಗಳೂರು : ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್) ಸಂಸ್ಥೆಯ ಯೋಜನೆಗಳ ವಿಭಾಗದ ನೂತನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಪಟ್ಟತ್ತಿಲ್ ಸುಜಿತ್ ಅವರು ನೇಮಕಗೊಂಡಿದ್ದಾರೆ. ಈ ಹಿಂದೆ ಅವರು ಸಂಸ್ಥೆಯ ಕಾರ್ಪೊರೇಟ್ ಸ್ಟ್ರಾಟಜಿ ವಿಭಾಗದ ಗ್ರೂಪ್ ಜನರಲ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಆ ಅವಧಿಯಲ್ಲಿ ಕಂಪನಿಯ ಕಾರ್ಯತಂತ್ರದ ಉಪ ಕ್ರಮಗಳು, ವ್ಯವಹಾರ ಯೋಜನೆ ಮತ್ತು ದೀರ್ಘಕಾಲೀನ ಬೆಳವಣಿಗೆಯ ಯೋಜನೆಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಮೂಲತಃ ಕೇರಳದ ಪಾಲಕ್ಕಾಡ್ ನಿವಾಸಿಯಾಗಿರುವ ಸುಜಿತ್ ಅವರು ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರರಾಗಿದ್ದಾರೆ. ಇವರು ಉದ್ಯಮ ರಂಗದಲ್ಲಿ ಮೂರು ದಶಕಗಳಿಗೂ ಹೆಚ್ಚಿನ ಸುದೀರ್ಘ ಅನುಭವ ಹೊಂದಿದ್ದಾರೆ. 1993ರಲ್ಲಿ ಎಂಆರ್‌ಪಿಎಲ್ ಸಂಸ್ಥೆಯನ್ನು ಸೇರಿದ ಇವರು ನಿರ್ವಹಣೆ, ಇಂಜಿನಿಯರಿಂಗ್ ಮತ್ತು ತಪಾಸಣೆ, ಯೋಜನೆಗಳು ಹಾಗೂ ಕಾರ್ಪೊರೇಟ್ ಸ್ಟ್ರಾಟಜಿ ಸೇರಿದಂತೆ ವಿವಿಧ ಪ್ರಮುಖ ವಿಭಾಗಗಳಲ್ಲಿ ಸೇವೆ ಸಲ್ಲಿಸಿ, ವ್ಯಾಪಕ ಅನುಭವ ಗಳಿಸಿದ್ದಾರೆ. ನೂತನ ಕಾರ್ಯನಿರ್ವಾಹಕ ನಿರ್ದೇಶಕರಾಗಿ (ಯೋಜನೆಗಳು) ಪಟ್ಟತ್ತಿಲ್ ಸುಜಿತ್ ಅವರು ಎಂಆರ್‌ಪಿಎಲ್‌ನ ವಿಸ್ತರಣೆ, ಆಧುನೀಕರಣ ಮತ್ತು ದೀರ್ಘಕಾಲೀನ ಪ್ರಗತಿಗೆ ಪೂರಕವಾದ ಪ್ರಮುಖ ಬಂಡವಾಳ ಯೋಜನೆಗಳು ಹಾಗೂ ಮೂಲಸೌಕರ್ಯ ಉಪಕ್ರಮಗಳ ಯೋಜನೆ, ಅನುಷ್ಠಾನ ಮತ್ತು ಉಸ್ತುವಾರಿಯನ್ನು ವಹಿಸಿಕೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.