image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪದವಿ ಪ್ರಮಾಣಪತ್ರಕ್ಕಿಂತ ಅದರ ಹಿಂದಿರುವ ಮೌಲ್ಯಗಳು ಶ್ರೇಷ್ಠ: ಡಾ. ಚಿನ್ನಪ್ಪ ಗೌಡ

ಪದವಿ ಪ್ರಮಾಣಪತ್ರಕ್ಕಿಂತ ಅದರ ಹಿಂದಿರುವ ಮೌಲ್ಯಗಳು ಶ್ರೇಷ್ಠ: ಡಾ. ಚಿನ್ನಪ್ಪ ಗೌಡ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಆಳ್ವಾಸ್ ನುಡಿಸಿರಿ ವೇದಿಕೆಯಲ್ಲಿ ಆಯೋಜಿಸಲಾಗಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳ 2,627 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಹಾವೇರಿಯ ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ. ಚಿನ್ನಪ್ಪ ಗೌಡ ಅವರು, ಶಿಕ್ಷಣದ ನಿಜವಾದ ಉದ್ದೇಶವು ಕೇವಲ ಪದವಿ ಪಡೆಯುವುದಲ್ಲ, ಬದಲಾಗಿ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದಾಗಿದೆ ಎಂದು ತಿಳಿಸಿದರು.

ಪದವಿ ಪ್ರಮಾಣಪತ್ರವು ಕೇವಲ ಒಂದು ಕಾಗದದ ತುಣುಕಾಗಿದ್ದು, ಅದಕ್ಕೆ ನಿಜವಾದ ಮೌಲ್ಯ ದೊರೆಯುವುದು ವ್ಯಕ್ತಿಯ ಜ್ಞಾನ, ಸಾಮರ್ಥ್ಯ, ಪ್ರಾಮಾಣಿಕತೆ ಹಾಗೂ ಜೀವನ ಮೌಲ್ಯಗಳಿಂದ ಮಾತ್ರ ಎಂದು ಅವರು ಅಭಿಪ್ರಾಯಪಟ್ಟರು. ವಿದ್ಯಾರ್ಥಿಗಳು ಕಲಿಕೆಯ ಅವಧಿಯಲ್ಲಿ ರೂಪಿಸಿಕೊಂಡ ವ್ಯಕ್ತಿತ್ವ ಮತ್ತು ಸಾಮಾಜಿಕ ಬದ್ಧತೆಯೇ ಅವರ ನಿಜವಾದ ಗುರುತಾಗಿದ್ದು, ಸಮಾಜದಲ್ಲಿ ಆಳ್ವಾಸ್ ಸಂಸ್ಥೆಯ ರಾಯಭಾರಿಗಳಾಗಿ ಮುಂದುವರಿಯಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಸುಮಾರು 20 ಸಾವಿರ ವಿದ್ಯಾರ್ಥಿಗಳನ್ನು ಒಳಗೊಂಡಿರುವ ಆಳ್ವಾಸ್ ಆವರಣವು ಭಾರತದ ಏಕತೆಯಲ್ಲಿ ವೈವಿಧ್ಯತೆಯ ಪರಿಕಲ್ಪನೆಯನ್ನು ಜೀವಂತವಾಗಿ ಪ್ರತಿಬಿಂಬಿಸುತ್ತದೆ ಎಂದು ಶ್ಲಾಘಿಸಿದ ಅವರು, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವ್ಯಕ್ತಿತ್ವ ನಿರ್ಮಾಣ, ಶಿಸ್ತು, ಸಾಮಾಜಿಕ ಹೊಣೆಗಾರಿಕೆ ಹಾಗೂ ನಿರಂತರ ಕಲಿಕೆಯ ಮನೋಭಾವವೇ ಯಶಸ್ಸಿನ ಪ್ರಮುಖ ಅಂಶಗಳಾಗಿವೆ ಎಂದರು.

​ಇದೇ ಸಂದರ್ಭದಲ್ಲಿ ಶೈಕ್ಷಣಿಕ ಸಾಧನೆಗಾಗಿ ಡಾ. ಕೇಕೆಸಾನಾ, ಅಂಜನಾ ಎಂ. ಹಾಗೂ ನವರೆನ್ ಸಿಂಗ್ ಅವರಿಗೆ ಪ್ರತಿಷ್ಠಿತ ‘ಡಾ. ಪಿ.ಬಿ. ಆಚಾರ್ಯ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಯಿತು. ಹಾಗೆಯೇ ಅತ್ಯುತ್ತಮ ಸಾಧನೆಗಾಗಿ ಡಾ. ಗೌತಮಿ ಬಿ. ಅವರಿಗೆ ‘ಸೀತಾರಾಂ ಜಿಂದಾಲ್ ಚಿನ್ನದ ಪದಕ’ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ವಹಿಸಿದ್ದರು. ವೇದಿಕೆಯಲ್ಲಿ ಟ್ರಸ್ಟಿ ವಿವೇಕ್ ಆಳ್ವ, ವಿವಿಧ ಸಂಸ್ಥೆಗಳ ಪ್ರಾಂಶುಪಾಲರು, ಅಧ್ಯಾಪಕರು, ಪೋಷಕರು ಹಾಗೂ ಗಣ್ಯರು ಉಪಸ್ಥಿತರಿದ್ದರು. ಉಪನ್ಯಾಸಕ ರಾಜೇಶ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರೆ, ಡಾ. ಕುರಿಯನ್ ಅವರು ನೆರೆದಿದ್ದವರನ್ನು ಸ್ವಾಗತಿಸಿದರು.

Category
ಕರಾವಳಿ ತರಂಗಿಣಿ