ಸುಬ್ರಹ್ಮಣ್ಯ: ದಕ್ಷಿಣ ಭಾರತದ ಪ್ರಸಿದ್ಧ ನಾಗರಾಧನೆಯ ಪುಣ್ಯಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯಕ್ಕೆ ರವಿವಾರ ರಾಜ್ಯ ಹಾಗೂ ಹೊರರಾಜ್ಯಗಳಿಂದ 30,000ಕ್ಕೂ ಅಧಿಕ ಭಕ್ತರು ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದರು.
ಮುಂಜಾನೆಯಿಂದಲೇ ಕುಮಾರಧಾರಾ ನದಿಯಲ್ಲಿ ಪವಿತ್ರ ಸ್ನಾನಗೈದ ಭಕ್ತರು, ದೀರ್ಘ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪುನೀತರಾದರು. ಭಕ್ತರ ಅನುಕೂಲಕ್ಕಾಗಿ ಲಡ್ಡು ಪ್ರಸಾದ, ಪಂಚಕಜ್ಜಾಯ ಮತ್ತು ತೀರ್ಥ ಬಾಟಲಿಗಳನ್ನು ಪಡೆಯಲು ದೇವಾಲಯದ ಹೊರಭಾಗದಲ್ಲಿ ಪ್ರತ್ಯೇಕ ಕೌಂಟರ್‌ಗಳನ್ನು ತೆರೆಯಲಾಗಿತ್ತು. ಮಧ್ಯಾಹ್ನ ಶ್ರೀ ದೇವಳದ ಷಣ್ಮುಖ ಭೋಜನ ಶಾಲೆ ಹಾಗೂ ಆದಿ ಸುಬ್ರಹ್ಮಣ್ಯದ ಭೋಜನ ಶಾಲೆಯಲ್ಲಿ ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಶನಿವಾರ ರಾತ್ರಿಯಿಂದಲೇ ಕ್ಷೇತ್ರಕ್ಕೆ ಆಗಮಿಸಿದ ಭಕ್ತರು ವಸತಿ ಗೃಹಗಳಲ್ಲಿ ವಾಸ್ತವ್ಯ ಹೂಡಿದ್ದರಿಂದ, ದೇವಸ್ಥಾನದ ಪರಿಸರದ ಪಾರ್ಕಿಂಗ್ ಪ್ರದೇಶಗಳು, ಸವಾರಿ ಮಂಟಪ ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಆಸುಪಾಸು ವಾಹನಗಳಿಂದ ತುಂಬಿ ತುಳುಕುತ್ತಿದ್ದವು. ಭಕ್ತರಿಗೆ ಯಾವುದೇ ರೀತಿಯ ಅಡಚಣೆಯಾಗದಂತೆ ಸುಗಮ ದರ್ಶನ, ತೀರ್ಥ ಪ್ರಸಾದ ಹಾಗೂ ಭೋಜನ ವ್ಯವಸ್ಥೆಯನ್ನು ದೇವಾಲಯದ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳು ಸಮರ್ಪಕವಾಗಿ ನಿರ್ವಹಿಸಿದರು.