ಕಡಬ:ಕಡಬ ತಾಲೂಕು ಕೇಂದ್ರದಲ್ಲಿ ನ್ಯಾಯಾಲಯವನ್ನು ಸ್ಥಾಪಿಸಬೇಕೆಂಬ ಈ ಭಾಗದ ಸಾರ್ವಜನಿಕರು ಮತ್ತು ನ್ಯಾಯವಾದಿಗಳ ದಶಕಗಳ ಕನಸು ಅಂತಿಮವಾಗಿ ನನಸಾಗುತ್ತಿದೆ. ಜೂನ್ 2ರಂದು ಕಡಬದ ಗಣೇಶ್ ಬಿಲ್ಡಿಂಗ್‌ನಲ್ಲಿರುವ ಬಾಡಿಗೆ ಕಟ್ಟಡದಲ್ಲಿ ಅಧಿಕೃತವಾಗಿ ನ್ಯಾಯಾಲಯ ಕಾರ್ಯಾರಂಭ ಮಾಡಲಿದೆ. ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಸತ್ರ ನ್ಯಾಯಾಧೀಶ ಬಸವರಾಜ್ ಅವರು, ನ್ಯಾಯಾಲಯ ಪ್ರಾರಂಭಕ್ಕೆ ಅಗತ್ಯವಿರುವ ಎಲ್ಲಾ ಮೂಲಭೂತ ಸಿದ್ಧತೆಗಳು ಅಂತಿಮ ಹಂತದಲ್ಲಿವೆ ಎಂದು ತಿಳಿಸಿದ್ದಾರೆ.
ಈ ನೂತನ ನ್ಯಾಯಾಲಯವು ಸದ್ಯಕ್ಕೆ ಗಣೇಶ್ ಬಿಲ್ಡಿಂಗ್‌ನ ಎರಡನೇ ಮಹಡಿಯಲ್ಲಿ ಕಾರ್ಯಾಚರಣೆ ನಡೆಸಲಿದ್ದು, ವಾರದಲ್ಲಿ ಎರಡು ದಿನ ಅಂದರೆ ಪ್ರತಿ ಮಂಗಳವಾರ ಮತ್ತು ಶುಕ್ರವಾರ ಕಲಾಪಗಳು ನಡೆಯಲಿವೆ. ಕಡಬ ತಾಲೂಕು ವ್ಯಾಪ್ತಿಗೆ ಬರುವ ಪ್ರಕರಣಗಳ ಕಡತಗಳನ್ನು ಈಗಾಗಲೇ ಪುತ್ತೂರು ನ್ಯಾಯಾಲಯದಿಂದ ಪ್ರತ್ಯೇಕಿಸಲಾಗಿದ್ದು, ಇನ್ನು ಮುಂದೆ ಕಡಬದಲ್ಲೇ ವಿಚಾರಣೆ ನಡೆಯಲಿದೆ. ನ್ಯಾಯಾಲಯದ ಶಾಶ್ವತ ಕಟ್ಟಡ ನಿರ್ಮಾಣಕ್ಕಾಗಿ ಕಡಬ ತಾಲೂಕು ಕಚೇರಿಯ ಬಳಿ ೩ ಎಕರೆ ಜಾಗವನ್ನು ಮೀಸಲಿರಿಸಲಾಗಿದ್ದು, ಸ್ವಂತ ಕಟ್ಟಡ ನಿರ್ಮಾಣವಾಗುವವರೆಗೆ ಬಾಡಿಗೆ ಕಟ್ಟಡದಲ್ಲಿಯೇ ನ್ಯಾಯಾಲಯದ ಕಲಾಪಗಳು ಮುಂದುವರಿಯಲಿವೆ.
ಪುತ್ತೂರು ಮತ್ತು ಸುಳ್ಯ ನ್ಯಾಯಾಲಯಗಳಿಗೆ ಅಲೆಯಬೇಕಿದ್ದ ಕಡಬ ತಾಲೂಕಿನ ಜನರಿಗೆ ಮತ್ತು ವಕೀಲರಿಗೆ ಈ ನ್ಯಾಯಾಲಯದ ಸ್ಥಾಪನೆಯು ದೊಡ್ಡ ನೆಮ್ಮದಿ ನೀಡಲಿದೆ. ಇದರಿಂದ ಸಮಯ ಮತ್ತು ಹಣದ ಉಳಿತಾಯವಾಗುವುದಲ್ಲದೆ, ಸ್ಥಳೀಯವಾಗಿ ಶೀಘ್ರ ನ್ಯಾಯದಾನ ದೊರೆಯಲು ಸಹಕಾರಿಯಾಗಲಿದೆ. ಹೈಕೋರ್ಟ್‌ನಿಂದ ಅಗತ್ಯ ಅನುಮತಿ ಲಭಿಸಿದ್ದು, ಕಟ್ಟಡ ಮಾಲೀಕರೊಂದಿಗೆ ಒಪ್ಪಂದ ಪ್ರಕ್ರಿಯೆಯೂ ಪೂರ್ಣಗೊಂಡಿದೆ. ಈ ಸಂದರ್ಭದಲ್ಲಿ ಕಡಬದ ನ್ಯಾಯವಾದಿಗಳಾದ ಲೋಕೇಶ್ ಎಂ.ಜೆ., ಶಿವಪ್ರಸಾದ್ ಪುತ್ತಿಲ, ಅಶ್ವಿತ್ ಕಂಡಿಗ, ಅವಿನಾಶ್ ಬೈತಡ್ಕ, ಕೃಷ್ಣಪ್ಪ ಗೌಡ ಕಕ್ವೆ, ಮನೋಹರ ಸಬಳೂರು, ಕೌಶಿಕ್ ಆಲಂಕಾರು, ಅರ್ಪಿತಾ ಪಿ., ಸುಮನಾ ಎಂ. ಮತ್ತು ಕಟ್ಟಡ ಮಾಲೀಕ ಸುಂದರ ಗೌಡ ಮಂಡೆಕರ ಮೊದಲಾದವರು ಉಪಸ್ಥಿತರಿದ್ದರು.