ಮಂಗಳೂರು: ಆರೋಗ್ಯ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿರುವ ಆಶಾ ಕಾರ್ಯಕರ್ತೆಯರು ಎದುರಿಸುತ್ತಿರುವ ಸಮಸ್ಯೆಗಳಿಗೆ ತಕ್ಷಣವೇ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿ, ಭಾರತೀಯ ಮಜ್ದೂರು ಸಂಘದ (BMS) ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರ ನಿಯೋಗವು ಇಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಹೆಚ್.ಆರ್. ತಿಮ್ಮಯ್ಯ ಅವರಿಗೆ ಮನವಿ ಸಲ್ಲಿಸಿತು.
ಜಿಲ್ಲಾ ಆರೋಗ್ಯಾಧಿಕಾರಿಗಳ ಮೂಲಕ ರಾಜ್ಯದ ಮುಖ್ಯಮಂತ್ರಿಗಳು, ಆರೋಗ್ಯ ಸಚಿವರು ಹಾಗೂ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಸಲ್ಲಿಸಲಾದ ಮನವಿಯಲ್ಲಿ, "ಸಮಸ್ತ" ಡಿಜಿಟಲ್ ಆರೋಗ್ಯ ಮಾಹಿತಿ ವ್ಯವಸ್ಥೆಯಿಂದ ಉಂಟಾಗುತ್ತಿರುವ ವಿಪರೀತ ಕೆಲಸದ ಒತ್ತಡದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಲಾಗಿದೆ. ಆಶಾ ಕಾರ್ಯಕರ್ತೆಯರು ನಿತ್ಯವೂ ಮನೆಮನೆಗೆ ಭೇಟಿ ನೀಡಿ ಆರೋಗ್ಯ ಸೇವೆ ಹಾಗೂ ಜಾಗೃತಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದರ ಜೊತೆಗೆ, ಗಂಟೆಗಟ್ಟಲೆ ಆ್ಯಪ್‌ನಲ್ಲಿ ಡೇಟಾ ಅಪ್‌ಲೋಡ್ ಮಾಡುವ ಕೆಲಸಕ್ಕೆ ನಿಯೋಜಿಸಲಾಗುತ್ತಿದ್ದು, ಇದರಿಂದ ಮೂಲ ಆರೋಗ್ಯ ಸೇವೆಗಳಿಗೆ ಅಡಚಣೆಯಾಗುತ್ತಿದೆ ಎಂದು ತಿಳಿಸಲಾಗಿದೆ.
ಈ ಕುರಿತು ಮಾತನಾಡಿದ ಬಿಎಮ್‌ಎಸ್ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಹಾಗೂ ವಕೀಲ ಅನಿಲ್ ಕುಮಾರ್ ಯು, ಕೊರೊನಾ ಸಾಂಕ್ರಾಮಿಕದಂತಹ ಕಠಿಣ ಸಮಯದಲ್ಲಿ ಜೀವದ ಹಂಗು ತೊರೆದು ದುಡಿದ ಆಶಾ ಕಾರ್ಯಕರ್ತೆಯರಿಗೆ ಇಂದು ಸೂಕ್ತ ಭದ್ರತೆ ಮತ್ತು ಗೌರವಯುತ ಸಂಭಾವನೆ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನಾಲ್ಕು ವರ್ಷಗಳಿಂದ ಬಾಕಿ ಉಳಿದಿರುವ ಪ್ರೋತ್ಸಾಹ ಧನವನ್ನು ಕೂಡಲೇ ಪರಿಷ್ಕರಿಸಬೇಕು ಮತ್ತು ನಿಗದಿತ ದಿನಾಂಕದಂದೇ ಪ್ರೋತ್ಸಾಹ ಧನವನ್ನು ಪಾವತಿಸಬೇಕು ಎಂದು ಅವರು ಆಗ್ರಹಿಸಿದರು.
"ಸಮಸ್ತ" ಆ್ಯಪ್‌ನ ಹೆಚ್ಚುವರಿ ಕೆಲಸದ ಹೊರೆಯನ್ನು ತಕ್ಷಣವೇ ರದ್ದುಪಡಿಸುವುದು, ಆಶಾ ಕಾರ್ಯಕರ್ತೆಯರ ಸಮಸ್ಯೆಗಳ ನಿವಾರಣೆಗಾಗಿ ರಾಜ್ಯ ಮಟ್ಟದ ಸಮಿತಿಯನ್ನು ರಚಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಸಂದರ್ಭದಲ್ಲಿ ಬಿಎಮ್‌ಎಸ್ ರಾಜ್ಯ ಉಪಾಧ್ಯಕ್ಷ ಸತೀಶ್ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಾಲ ಕೃಷ್ಣ, ಜಿಲ್ಲಾ ಉಪಾಧ್ಯಕ್ಷ ರೋಹಿತಾಶ್ವ, ಆಶಾ ಕಾರ್ಯಕರ್ತೆಯರ ಮಜ್ದೂರು ಸಂಘದ ರಾಜ್ಯ ಕಾರ್ಯದರ್ಶಿ ರೇವತಿ, ಬಂಟ್ವಾಳ ತಾಲೂಕು ಅಧ್ಯಕ್ಷೆ ತುಳಸಿ ದೇವರಾಜ್, ಕಾರ್ಯದರ್ಶಿ ಡೀಲಾಕ್ಷೀ, ಕೋಶಾಧಿಕಾರಿ ಸೌಮ್ಯ, ಗೌರವಾಧ್ಯಕ್ಷೆ ಗಿರಿಜಾ ನಾವೂರು ಸೇರಿದಂತೆ ಹಲವು ಮುಖಂಡರು ಮತ್ತು ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.