image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಶ್ರೀ ಧರ್ಮಸ್ಥಳ ಸಿರಿ ಗ್ರಾಮೊದ್ಯೋಗ ಸಂಸ್ಥೆಯ 'ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್' ಮೇ 31 ರಂದು ಲೋಕಾರ್ಪಣೆ

ಶ್ರೀ ಧರ್ಮಸ್ಥಳ ಸಿರಿ ಗ್ರಾಮೊದ್ಯೋಗ ಸಂಸ್ಥೆಯ 'ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್' ಮೇ 31 ರಂದು ಲೋಕಾರ್ಪಣೆ

ಬೆಳ್ತಂಗಡಿ: ಗ್ರಾಮೀಣ ಭಾಗದ ಸಾವಿರಾರು ಮಹಿಳೆಯರ ಬದುಕನ್ನು ಹಸನುಗೊಳಿಸಿ, ಅವರಿಗೆ ಭದ್ರವಾದ ಜೀವನವನ್ನು ಕಟ್ಟಿಕೊಟ್ಟ ಹೆಮ್ಮೆಯ ಸಿರಿ ಗ್ರಾಮೊದ್ಯೋಗ ಸಂಸ್ಥೆಯು ಬೆಳ್ತಂಗಡಿಯ ರೆಂಕದಗುತ್ತು ಎಂಬಲ್ಲಿ ನಿರ್ಮಿಸಿರುವ ಸುಸಜ್ಜಿತ 'ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್' ಮೇ 31 ರಂದು ಲೋಕಾರ್ಪಣೆಗೊಳ್ಳಲಿದೆ. ಅಂದು ಬೆಳಗ್ಗೆ 10 ಗಂಟೆಗೆ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಉದ್ಘಾಟನಾ ಸಮಾರಂಭವು ಅದ್ಧೂರಿಯಾಗಿ ನಡೆಯಲಿದೆ ಎಂದು ಸಿರಿ ಗ್ರಾಮೊದ್ಯೋಗ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ಜನಾರ್ದನ ಅವರು ತಿಳಿಸಿದ್ದಾರೆ.

ಈ ನೂತನ ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕನ್ನು ಗೌರವಾನ್ವಿತ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಉದ್ಘಾಟಿಸಲಿದ್ದು,  ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಗೌರವಾನ್ವಿತ ಉಪಸ್ಥಿತಿಯಲ್ಲಿ ನಡೆಯುವ ಈ ಸಮಾರಂಭದ ಅಧ್ಯಕ್ಷತೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ಬ್ರಿಜೇಶ್ ಚೌಟ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಸಿರಿ ಸಂಸ್ಥೆಯ ಅಧ್ಯಕ್ಷೆ ಹೇಮಾವತಿ ವಿ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್ ಹಾಗೂ ರಾಜ್ಯಸಭೆ ಕಾರ್ಯದರ್ಶಿ ಡಾ. ಕೆ.ಎಸ್. ಸೋಮಶೇಖರ್ ಮುಂತಾದ ಪ್ರಮುಖರು ಪಾಲ್ಗೊಳ್ಳಲಿದ್ದಾರೆ.

ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ವಿ. ಹೆಗ್ಗಡೆ ಅವರ ಕನಸಿನ ಕೂಸಾದ ಸಿರಿ ಗ್ರಾಮೊದ್ಯೋಗ ಸಂಸ್ಥೆಯು, ಗ್ರಾಮೀಣಾಭಿವೃದ್ಧಿ ಮತ್ತು ಮಹಿಳಾ ಸಬಲೀಕರಣಕ್ಕಾಗಿ 2004ರಲ್ಲಿ ಬೆಳ್ತಂಗಡಿ ತಾಲೂಕಿನ ಲಾಯಿಲ ಪ್ರದೇಶದಲ್ಲಿ ಸ್ಥಾಪನೆಯಾಯಿತು. ವಿಶೇಷ ಅನುಭವ ಇಲ್ಲದ ಗ್ರಾಮೀಣ ಮಹಿಳೆಯರಿಗೆ ವೇತನ ಸಹಿತ ತರಬೇತಿ ನೀಡಿ, ಅವರ ಮೂಲಕ ಗುಣಮಟ್ಟದ ಸಿದ್ಧ ಉಡುಪುಗಳು, ಫಿನಾಯಿಲ್, ಅಗರಬತ್ತಿ, ಜ್ಯೂಸ್, ಉಪ್ಪಿನಕಾಯಿ ಸೇರಿದಂತೆ ಹಲವು ಬಗೆಯ ಗೃಹೋಪಯೋಗಿ ಉತ್ಪನ್ನಗಳನ್ನು ತಯಾರಿಸುತ್ತಾ ಇಂದು ರಾಜ್ಯವ್ಯಾಪಿ ಜನಪ್ರಿಯತೆ ಗಳಿಸಿದೆ. ಐದು ಸಾವಿರಕ್ಕೂ ಹೆಚ್ಚು ಕುಟುಂಬಗಳ ಸ್ವಾವಲಂಬಿ ಬದುಕಿಗೆ ಶಕ್ತಿಯಾಗಿರುವ ಈ ಸಂಸ್ಥೆಯು ಉದ್ಯೋಗ ಕ್ಷೇತ್ರದಲ್ಲಿ ನಿಜವಾದ ಕ್ರಾಂತಿ ಮಾಡಿದೆ.
ಸಿರಿಯ ಎಲ್ಲಾ ಉತ್ಪನ್ನಗಳನ್ನು ಒಂದೇ ಸೂರಿನಡಿ ತರುವ ನಿಟ್ಟಿನಲ್ಲಿ ಬೆಳ್ತಂಗಡಿಯ ರೆಂಕದಗುತ್ತುವಿನಲ್ಲಿ ಸುಮಾರು 7 ಎಕರೆ ನಿವೇಶನದಲ್ಲಿ 1.50 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಈ ಬೃಹತ್ ಕಟ್ಟಡವನ್ನು ನಿರ್ಮಿಸಿ, ಅತ್ಯಾಧುನಿಕ ಯಂತ್ರೋಪಕರಣಗಳನ್ನು ಅಳವಡಿಸಲಾಗಿದೆ. ಇಲ್ಲಿ ಕೆಲಸಕ್ಕೆ ಬರುವ ಸಿಬ್ಬಂದಿಗಾಗಿ ಎರಡು ಉಚಿತ ಬಸ್ ವ್ಯವಸ್ಥೆ, ದೂರದ ಊರಿನ ಮಹಿಳೆಯರಿಗಾಗಿ ಸುಸಜ್ಜಿತ ಹಾಸ್ಟೆಲ್ ವ್ಯವಸ್ಥೆ, 11 ವಸತಿ ಗೃಹಗಳು, ಜಿಮ್, ಮೆಡಿಟೇಷನ್ ಕೊಠಡಿ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಸಂಸ್ಥೆಯಲ್ಲಿ ಶೇಕಡಾ 90 ರಷ್ಟು ಮಹಿಳಾ ಸಿಬ್ಬಂದಿ ಇರುವುದರಿಂದ ಸಣ್ಣ ಮಕ್ಕಳ ಪಾಲನೆಗಾಗಿ ಶಿಶು ವಿಹಾರ ಕೇಂದ್ರವನ್ನು ಸ್ಥಾಪಿಸಲಾಗಿದೆ. ಅಲ್ಲದೆ, ಸಂಸ್ಥೆಯ ಪ್ರವೇಶ ದ್ವಾರದ ಬಳಿ ಸಿರಿ ಉತ್ಪನ್ನಗಳ ಮಾರಾಟ ಮಳಿಗೆ ಹಾಗೂ ಸಿರಿ ಕೆಫೆಯನ್ನು ಕೂಡ ಆರಂಭಿಸಲಾಗಿದೆ.

Category
ಕರಾವಳಿ ತರಂಗಿಣಿ