image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕೈಗಾರಿಕಾ ಕ್ಷೇತ್ರದಲ್ಲಿ ಮಹಿಳೆಯರಿಗೂ ವಿಫುಲ ಅವಕಾಶಗಳಿವೆ: ದೇವದಾಸ್ ಶೆಟ್ಟಿ

ಕೈಗಾರಿಕಾ ಕ್ಷೇತ್ರದಲ್ಲಿ ಮಹಿಳೆಯರಿಗೂ ವಿಫುಲ ಅವಕಾಶಗಳಿವೆ: ದೇವದಾಸ್ ಶೆಟ್ಟಿ

ಉಜಿರೆ : ಕೈಗಾರಿಕಾ ಕ್ಷೇತ್ರದಲ್ಲಿ ಇಂದು ಮಹಿಳೆಯರಿಗೂ ವಿಫುಲ ಅವಕಾಶಗಳಿದ್ದು, ಆಸಕ್ತ ಮಹಿಳೆಯರ ಸಂಖ್ಯೆ ಮಾತ್ರ ಕಡಿಮೆ ಇದೆ. ಮುಂದಿನ ವರ್ಷದಿಂದ ಕೈಗಾರಿಕಾ ಕ್ಷೇತ್ರದಲ್ಲಿ ಹೊಸ ಉದ್ಯಮ ಆರಂಭಿಸುವ ಮಹಿಳೆಯರಿಗೆ ತಮ್ಮ ಸಂಸ್ಥೆಯ ವತಿಯಿಂದ ಬೆಂಗಳೂರಿನಲ್ಲಿ ೨೧ ದಿನಗಳ ಉಚಿತ ತರಬೇತಿಯನ್ನು ನೀಡಲಾಗುವುದು ಎಂದು ಸ್ನೇಯ್ಡರ್ ಎಲೆಕ್ಟ್ರಿಕ್ ಫೌಂಡೇಶನ್ ಆಫ್ ಇಂಡಿಯಾ ಕಂಪೆನಿಯ ಉಪಾಧ್ಯಕ್ಷ ದೇವದಾಸ್ ಶೆಟ್ಟಿ ತಿಳಿಸಿದರು.

ಅವರು ಮಂಗಳವಾರ ವೇಣೂರಿನಲ್ಲಿ ಎಸ್.ಡಿ.ಎಂ. ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ನವೀಕೃತ ಕೈಗಾರಿಕಾ ಸಮಗ್ರ ಉಪಕರಣಗಳ ಕಾರ್ಯಾಗಾರ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿನಿಯರಿಗೆ ತಮ್ಮ ಸಂಸ್ಥೆಯಿಂದ ವಿಶೇಷ ವಿದ್ಯಾರ್ಥಿವೇತನ ನೀಡಿ ಪ್ರೋತ್ಸಾಹಿಸುವುದಾಗಿ ಅವರು ಭರವಸೆ ನೀಡಿದರಲ್ಲದೆ, ಐವತ್ತು ವಿದ್ಯಾರ್ಥಿಗಳಿಗೆ ಕಂಪೆನಿಯ ವತಿಯಿಂದ ಟೂಲ್‌ಕಿಟ್ ವಿತರಿಸಿದರು. ಕಂಪೆನಿಯ ಡಿ.ಜಿ.ಎಂ. ಪ್ರಶಾಂತ ಶೆಟ್ಟಿ ಕಾರ್ಯಕ್ರಮಕ್ಕೆ ಶುಭಾಶಂಸನೆ ಕೋರಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ತಮಗೆ ಸಿಗುವ ಎಲ್ಲಾ ಅವಕಾಶಗಳ ಸದುಪಯೋಗ ಪಡೆದು ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಸದಾ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೇ ಹೊರತು, ಅಡಗಿಸಿಕೊಳ್ಳಬಾರದು ಎಂದು ಸಲಹೆ ನೀಡಿದರು. ಉತ್ತಮ ಕೌಶಲವನ್ನು ಬೆಳೆಸಿಕೊಂಡು ಕಲಿಕೆಯೊಂದಿಗೆ ಗಳಿಕೆಗೂ ಆದ್ಯತೆ ನೀಡಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಸಂಸ್ಥೆಯ ಪ್ರಾಂಶುಪಾಲ ವಿಶ್ವೇಶ್ವರ ಪ್ರಸಾದ್ ಸ್ವಾಗತಿಸಿದ ಕಾರ್ಯಕ್ರಮದಲ್ಲಿ ರಾಮಚಂದ್ರ ಶೆಟ್ಟಿ ಧನ್ಯವಾದವಿತ್ತರು. ಪದ್ಮಪ್ರಸಾದ್ ಬಿ. ಸಮಾರಂಭವನ್ನು ನಿರ್ವಹಿಸಿದರು.

Category
ಕರಾವಳಿ ತರಂಗಿಣಿ