ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ನಗರ ಮತ್ತು ಗ್ರಾಮಾಂತರ ಪ್ರದೇಶದ ಎಲ್ಲಾ ರೂಟ್‌ಗಳಲ್ಲೂ ಸರ್ಕಾರಿ ಬಸ್‌ಗಳು ಸಂಚರಿಸಲು ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಜನವಾದಿ ಮಹಿಳಾ ಸಂಘಟನೆಯು ನಗರದ ಬಿಜೈ ಸರ್ಕಾರಿ ಬಸ್ ನಿಲ್ದಾಣದ ಮುಂದೆ ಬೃಹತ್ ಪ್ರತಿಭಟನೆ ನಡೆಸಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ ಅವರು, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ 'ಶಕ್ತಿ ಯೋಜನೆ'ಯ ಪ್ರಯೋಜನವು ಪ್ರತಿಯೊಂದು ಹಳ್ಳಿಯ ಮಹಿಳೆಯರಿಗೂ ಲಭಿಸುವಂತಾಗಬೇಕು ಎಂದು ಒತ್ತಾಯಿಸಿದರು. ಹಳ್ಳಿಯ ಸಾವಿರಾರು ಮಂದಿ ಶಾಲಾ-ಕಾಲೇಜು ವಿದ್ಯಾರ್ಥಿನಿಯರು, ಅಂಗಡಿ, ಹೋಟೆಲ್, ಆಸ್ಪತ್ರೆ, ಬೀದಿಬದಿ ವ್ಯಾಪಾರಸ್ಥರು, ಮಾಲ್‌ಗಳು, ಕಟ್ಟಡ ಕಾರ್ಮಿಕರು ಹಾಗೂ ಮನೆಗೆಲಸ ಮಾಡುವ ಮಹಿಳೆಯರು ತಮ್ಮ ದೈನಂದಿನ ಕೆಲಸ ಕಾರ್ಯಗಳಿಗಾಗಿ ನಗರಕ್ಕೆ ಬರಲು ಪ್ರತಿನಿತ್ಯ ಖಾಸಗಿ ಬಸ್‌ಗಳನ್ನೇ ಅವಲಂಬಿಸಿದ್ದಾರೆ. ಖಾಸಗಿ ಬಸ್‌ಗಳಲ್ಲಿ ದುಬಾರಿ ದರ ನೀಡಿ ಸಂಚರಿಸುವುದು ದಿನಗೂಲಿ ನಂಬಿ ಬದುಕುವ ದುಡಿಯುವ ಮಹಿಳೆಯರಿಗೆ ಆರ್ಥಿಕವಾಗಿ ಬಹಳ ಕಷ್ಟವಾಗುತ್ತಿದೆ ಎಂದು ಅವರು ತೀವ್ರ ಕಳವಳ ವ್ಯಕ್ತಪಡಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾಧ್ಯಕ್ಷೆ ಕಿರಣ್ ಪ್ರಭ, ಜಯಂತಿ ಶೆಟ್ಟಿ, ಭಾರತಿ ಬೋಳಾರ ಹಾಗೂ ಪದ್ಮಾವತಿ ಶೆಟ್ಟಿ ವಹಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಪ್ರತಿಭಟನಾ ನಿರತರನ್ನುದ್ದೇಶಿಸಿ ಅಸುಂತಾ ಡಿಸೋಜ, ಪ್ರಮೋದಿನಿ ಹಾಗೂ ಯೋಗಿತಾ ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ಪ್ರಮಿಳಾ ಶಕ್ತಿನಗರ ಅವರು ಕಾರ್ಯಕ್ರಮಕ್ಕೆ ಎಲ್ಲರನ್ನು ಸ್ವಾಗತಿಸಿದರೆ, ಮೂಡುಬಿದಿರೆ ತಾಲೂಕು ಅಧ್ಯಕ್ಷೆ ರಾಧಾ ಅವರು ಧನ್ಯವಾದ ಸಮರ್ಪಿಸಿದರು.