ಮಂಗಳೂರು: ತರುಣ ಭಾರತ ಚಾರಿಟೇಬಲ್ ಟ್ರಸ್ಟ್(ರಿ.) ಹೆರ್ಮುಂಡೆ ಇದರ ವತಿಯಿಂದ ಆಯೋಜಿಸಲಾದ ನೂತನ ಸರಣಿ ಕಾರ್ಯಕ್ರಮ 'ಕೃಷಿ ಕ್ಷೇತ್ರ ಪಾಠಶಾಲೆ'ಯ ಉದ್ಘಾಟನಾ ಸಮಾರಂಭವು ಇತ್ತೀಚೆಗೆ ಹೆರ್ಮುಂಡೆಯ ಮಹಾದೇವ್ ಫಾರ್ಮ್ಸ್‌ನಲ್ಲಿ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತರುಣ ಭಾರತ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕಿ ಶ್ರೀಮತಿ ಇಂದುಮತಿ ಅಶೋಕ್ ಸಾಲಿಯಾನ್ ವಹಿಸಿದ್ದರು. ವಿಟ್ಲದ ಗೋ ಆಧಾರಿತ ಕೃಷಿಕರಾದ ಶ್ರೀ ಪ್ರವೀಣ್ ಸರಳಾಯರು ಕಲ್ಪವೃಕ್ಷವನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಸಾಯನಿಕಗಳಿಗೆ ಪರ್ಯಾಯವಾಗಿ ಗೋ ಉತ್ಪನ್ನಗಳನ್ನು ಕೃಷಿಯಲ್ಲಿ ಬಳಸುವುದರಿಂದ ಸಿಗುವ ಲಾಭಗಳು ಮತ್ತು ಸಾವಯವ ಕೃಷಿಯ ಮೂಲಕ ಪರಿಸರ ಸಂರಕ್ಷಣೆಯ ಮಹತ್ವದ ಕುರಿತು ಸವಿವರವಾಗಿ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಾರ್ಕಳ ಮುಂಡ್ಲಿ ಜೋಡುಮಠ ಫಾರ್ಮ್ಸ್‌ನ ಹವ್ಯಾಸಿ ಕೃಷಿಕರಾದ ಶ್ರೀಮತಿ ನಿವೇದಿತಾ ಭಟ್, ನಗರ ಜೀವನ ಹಾಗೂ ಗ್ರಾಮೀಣ ಕೃಷಿ ಬದುಕಿನ ಅನುಭವಗಳನ್ನು ಹಂಚಿಕೊಳ್ಳುತ್ತಾ, ರೈತರಿಂದ ಗ್ರಾಹಕರಿಗೆ ನೇರವಾಗಿ ಉತ್ಪನ್ನಗಳು ತಲುಪುವುದರಿಂದ ಆಗುವ ಆರ್ಥಿಕ ಲಾಭದ ಕುರಿತು ಸಲಹೆ ನೀಡಿದರು. ವಿಶೇಷ ಅತಿಥಿ ಹಾಗೂ ಹವ್ಯಾಸಿ ಜೇನು ಕೃಷಿಕರಾದ ಶ್ರೀ ಮುಕೇಶ್ ಅವರು, ಆಹಾರ ಸರಪಳಿಯಲ್ಲಿ ಜೇನಿನ ಪ್ರಾಮುಖ್ಯತೆಯನ್ನು ವಿವರಿಸುತ್ತಾ, ಕೃಷಿಯಲ್ಲಿ ಬಳಸುವ ರಾಸಾಯನಿಕ ಸಿಂಪಡಣೆಯಿಂದ ಜೇನುಗಳಿಗೆ ಹಾಗೂ ಮಾನವನ ಆರೋಗ್ಯಕ್ಕೆ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಎಚ್ಚರಿಸಿದರು.
ಕಾರ್ಯಕ್ರಮದ ಪ್ರಾಸ್ತಾವಿಕವಾಗಿ ಮಾತನಾಡಿದ ತರುಣ ಭಾರತ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಶ್ರೀ ಸತೀಶ್ ಹೆಗ್ಡೆ, ಆಧುನಿಕ ಜೀವನಶೈಲಿಯಿಂದ ಕೃಷಿಯಿಂದ ದೂರವಾಗುತ್ತಿರುವ ಯುವ ಪೀಳಿಗೆಯನ್ನು ಮರಳಿ ಸಾಂಪ್ರದಾಯಿಕ ಕೃಷಿಯತ್ತ ಆಕರ್ಷಿಸುವುದು ಮತ್ತು ಕೃಷಿಯ ಬಗ್ಗೆ ಮೂಲಭೂತ ಜ್ಞಾನವನ್ನು ಒದಗಿಸುವುದು ಈ ಪಾಠಶಾಲೆಯ ಮುಖ್ಯ ಉದ್ದೇಶವಾಗಿದೆ ಎಂದು ನುಡಿದರು.
ಈ ಸಂದರ್ಭದಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದುಕೊಂಡೂ ಕೃಷಿ ಬದುಕನ್ನು ಆರಿಸಿಕೊಂಡ ಮಹಾದೇವ್ ಫಾರ್ಮ್ಸ್‌ನ ಸಂಸ್ಥಾಪಕ ಶ್ರೀ ಸಚಿನ್ ಸುಬ್ಬಣ್ಣ ನಾಯಕ್ ದಂಪತಿಗಳನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಮಹಾದೇವ್ ಫಾರ್ಮ್ಸ್‌ನ ಮಾಲಕ ಶ್ರೀ ಸುಬ್ಬಣ್ಣ ನಾಯಕ್ ಉಪಸ್ಥಿತರಿದ್ದರು. ಶ್ರೀ ಶಿವರಾಜ್ ಹೆಗ್ಡೆ ಸ್ವಾಗತಿಸಿದರೆ, ಕುಮಾರಿ ಸುರಕ್ಷ ಅತಿಥಿ ಪರಿಚಯ ಮಾಡಿದರು. ಕುಮಾರಿ ವಿನುತ ಧನ್ಯವಾದ ಅರ್ಪಿಸಿದರು ಮತ್ತು ಶ್ರೀಮತಿ ಮೋನಿಕಾ ಭವಿತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ಪಾಠಶಾಲೆಯ ಚೊಚ್ಚಲ ಕಾರ್ಯಕ್ರಮದ ಭಾಗವಾಗಿ ಮಹಾದೇವ್ ಫಾರ್ಮ್ಸ್ ಸಹಯೋಗದಲ್ಲಿ ಅರಿಶಿನ ನಾಟಿ ಪ್ರಾತ್ಯಕ್ಷಿಕೆಯನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಅನೇಕ ರೈತರು ಮತ್ತು ಯುವಕರು ಉತ್ಸಾಹದಿಂದ ಭಾಗವಹಿಸಿ ಅರಿಶಿನ ನಾಟಿಯ ವಿಧಾನವನ್ನು ಕಲಿತುಕೊಂಡರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು.