image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕದ್ರಿ ಉದ್ಯಾನವನದಲ್ಲಿ ಮೇ 28ರಿಂದ ಭರ್ಜರಿ ಮಾವು ಮೇಳ

ಕದ್ರಿ ಉದ್ಯಾನವನದಲ್ಲಿ ಮೇ 28ರಿಂದ ಭರ್ಜರಿ ಮಾವು ಮೇಳ

ಮಂಗಳೂರು : ರಾಮನಗರ ಜಿಲ್ಲಾ ಮಾವು ತೋಟದ ಬೆಳೆಗಾರರ ಮಾರಾಟ ಸಂಘದ ವತಿಯಿಂದ, ತೋಟಗಾರಿಕಾ ಇಲಾಖೆಯ ಸಹಕಾರದೊಂದಿಗೆ ಮೇ 28ರಿಂದ 31ರವರೆಗೆ ನಗರದ ಕದ್ರಿ ಉದ್ಯಾನವನದಲ್ಲಿ ನಾಲ್ಕು ದಿನಗಳ ಕಾಲ 'ಮಾವು ಮೇಳ'ವನ್ನು ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ರಮೇಶ್ ವೈ ಜಿ ಹೇಳಿದರು. 

ನಗರದ ಪತ್ರಿಕಾ ಭವನದಲ್ಲಿ ನಡೆದ  ಪತ್ರಿಕಾಗೋಷ್ಟಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು,  ಈ ಮೇಳದಲ್ಲಿ ಯಾವುದೇ ರಾಸಾಯನಿಕ ಬಳಸದೆ ನೈಸರ್ಗಿಕವಾಗಿ ಮಾಗಿಸಲಾದ ಅತ್ಯುತ್ತಮ ಗುಣಮಟ್ಟದ ಮಾವಿನ ಹಣ್ಣುಗಳು ನೇರವಾಗಿ ಸಿಗಲಿವೆ ಎಂದು ತಿಳಿಸಿದರು. ಆಲ್ಫಾನ್ಸೋ, ಬಾದಾಮಿ, ಮಲ್ಲಿಕಾ, ರಸಪುರಿ, ಮಲಗೋವಾ, ಸಿಂಧೂರ, ಕಾಲಪಾಡಿ, ತೋತಾಪುರಿ, ಬೆಂಗನಪಲ್ಲಿ ಹಾಗೂ ಶುಗರ್ ಬೇಬಿ ಸೇರಿದಂತೆ ವೈವಿಧ್ಯಮಯ ತಳಿಗಳ ಹಣ್ಣುಗಳು ಸ್ಪರ್ಧಾತ್ಮಕ ಬೆಲೆಯಲ್ಲಿ ಸಾರ್ವಜನಿಕರಿಗೆ ಮಾರಾಟಕ್ಕೆ ಲಭ್ಯವಿರಲಿದ್ದು, ರಾಮನಗರ ಜಿಲ್ಲೆಯಿಂದ ಸುಮಾರು 25ಕ್ಕೂ ಹೆಚ್ಚು ಪ್ರಗತಿಪರ ಮಾವು ಬೆಳೆಗಾರರು ಈ ಮೇಳದಲ್ಲಿ ಪಾಲ್ಗೊಳ್ಳುತ್ತಿದ್ದು, ಈ ವರ್ಷ ಸುಮಾರು 20 ಟನ್ ಮಾವು ಮಾರಾಟವಾಗುವ ನಿರೀಕ್ಷೆಯಿದೆ. ಸಾರ್ವಜನಿಕರು ಹಾಗೂ ಮಾವು ಪ್ರಿಯರಿಗಾಗಿ ಪ್ರತಿದಿನ ಬೆಳಿಗ್ಗೆ 8:00 ಗಂಟೆಯಿಂದ ರಾತ್ರಿ 8:30ರ ವರೆಗೆ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ ಮುಕ್ತವಾಗಿರುತ್ತದೆ ಎಂದರು.

ಮೇ 28ರಂದು ಪೂರ್ವಾಹ್ನ 11:00 ಗಂಟೆಗೆ ವಿಧಾನಸಭಾಧ್ಯಕ್ಷರಾದ ಯು.ಟಿ. ಖಾದರ್ ಅವರು ಈ ಮೇಳವನ್ನು ಅಧಿಕೃತವಾಗಿ ಉದ್ಘಾಟಿಸಲಿದ್ದು,  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಡಿ. ವೇದವ್ಯಾಸ ಕಾಮತ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ತೋಟಗಾರಿಕಾ ಇಲಾಖೆಯ ನಿರ್ದೇಶಕ ಇಬ್ರಾಹಿಂ ಮೈಸೂರು, ಜಿಪಂ ಸಿಇಒ ಆನಂದ್, ಮನಪಾ ಆಯುಕ್ತ ಆನಂದ್ ಸಿ.ಎಲ್., ತೋಟಗಾರಿಕಾ ಇಲಾಖೆಯ ಅಪರ ನಿರ್ದೇಶಕ ಡಾ. ಎಸ್. ನಂದಾ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ವಿಜಯ್ ಕುಮಾರ್ ರೈ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಪ್ರವೀಣ್ ಮಾತನಾಡಿ, ಅನುದಾನದ ಕೊರತೆಯಿಂದಾಗಿ ಈ ವರ್ಷ ತೋಟಗಾರಿಕಾ ಇಲಾಖೆಯ ನೇರ ವತಿಯಿಂದ ಮಾವು ಮೇಳ ಆಯೋಜಿಸಲು ಸಾಧ್ಯವಾಗುತ್ತಿಲ್ಲ, ಬದಲಾಗಿ ಇಲಾಖೆಯ ವತಿಯಿಂದ ಬೆಳೆಗಾರರ ಸಂಘಕ್ಕೆ ಸಂಪೂರ್ಣ ಪ್ರೋತ್ಸಾಹ ಮತ್ತು ಮಾರ್ಗದರ್ಶನ ನೀಡಲಾಗುತ್ತಿದೆ ಎಂದರು. 

ಪತ್ರಿಕಾಗೋಷ್ಠಿಯಲ್ಲಿ ಸಂಘದ ನಿರ್ದೇಶಕ ಸಿದ್ದರಾಜು ಹಾಗೂ ಪ್ರಗತಿಪರ ಕೃಷಿಕ ವಾಸು ಉಪಸ್ಥಿತರಿದ್ದರು

 

Category
ಕರಾವಳಿ ತರಂಗಿಣಿ