image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕಂಕನಾಡಿ-ಪಂಪ್‌ವೆಲ್ ರಸ್ತೆ ಕಾಮಗಾರಿ: ಜೂನ್ 10ಕ್ಕೆ ಒಂದು ಬದಿಯ ಸಂಚಾರ ಮುಕ್ತ, ಐವನ್ ಡಿ'ಸೋಜಾ ಭರವಸೆ

ಕಂಕನಾಡಿ-ಪಂಪ್‌ವೆಲ್ ರಸ್ತೆ ಕಾಮಗಾರಿ: ಜೂನ್ 10ಕ್ಕೆ ಒಂದು ಬದಿಯ ಸಂಚಾರ ಮುಕ್ತ, ಐವನ್ ಡಿ'ಸೋಜಾ ಭರವಸೆ

ಮಂಗಳೂರು : ನಗರದ ಅತ್ಯಂತ ಪ್ರಮುಖ ಕಾಮಗಾರಿಯಾಗಿದ್ದು, ನಗರದ ಪ್ರವೇಶ ದ್ವಾರ ಎಂದೇ ಕರೆಯಲ್ಪಡುವ ಕಂಕನಾಡಿ ಪಂಪ್‌ವೆಲ್ ರಸ್ತೆಯ ಕಾಂಕ್ರೀಟೀಕರಣದ ಒಂದು ಭಾಗದ ಕಾಮಗಾರಿಯು ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಸದ್ಯ ಬಾಕಿ ಉಳಿದಿರುವ ಸಣ್ಣಪುಟ್ಟ ಕೆಲಸಗಳು ಹಾಗೂ ಚರಂಡಿ ವ್ಯವಸ್ಥೆಯ ನೀರಿನ ಸುಗಮ ಸಂಚಾರದ ಕಾರ್ಯಗಳನ್ನು ಪೂರ್ಣಗೊಳಿಸಿ, ಬರುವ ಜೂನ್ 10 ರಂದು ಈ ರಸ್ತೆಯನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಐವನ್ ಡಿ'ಸೋಜಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಂದು ಇಂಜಿನಿಯರ್‌ಗಳ ತಂಡದೊಂದಿಗೆ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ ಐವನ್ ಡಿ'ಸೋಜಾ ಅವರು, ಮಳೆಗಾಲದಲ್ಲಿ ಯಾವುದೇ ಕಾರಣಕ್ಕೂ ನೀರು ರಸ್ತೆಯ ಪಕ್ಕದ ಅಂಗಡಿ ಮುಂಗಟ್ಟುಗಳಿಗೆ ನುಗ್ಗದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕು ಎಂದು ಇಂಜಿನಿಯರ್‌ಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು. ಇದೇ ವೇಳೆ ಮಾತನಾಡಿದ ಮಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಇಂಜಿನಿಯರ್ ನಾಗರಾಜ್ ಅವರು, ಈಗಾಗಲೇ ಒಳಚರಂಡಿ ವ್ಯವಸ್ಥೆಯನ್ನು ಜೋಡಿಸುವ ಕೆಲಸವನ್ನು ಯಶಸ್ವಿಯಾಗಿ ಮಾಡಲಾಗಿದ್ದು, ಒಳಚರಂಡಿ ವ್ಯವಸ್ಥೆಯಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನಿಗದಿತ ಸಮಯದೊಳಗೆ ಅತ್ಯಂತ ಉತ್ತಮ ದರ್ಜೆಯಲ್ಲಿ ರಸ್ತೆಯ ಒಂದು ಭಾಗದ ಕಾಮಗಾರಿಯನ್ನು ಮುಗಿಸಿದ್ದಕ್ಕಾಗಿ ಐವನ್ ಡಿ'ಸೋಜಾ ಅವರು ಸಂಬಂಧಪಟ್ಟ ಇಂಜಿನಿಯರ್‌ಗಳು ಹಾಗೂ ಗುತ್ತಿಗೆದಾರರನ್ನು (Contractor) ಅಭಿನಂದಿಸಿದರು. ಇದರೊಂದಿಗೆ ರಸ್ತೆಯ ಇನ್ನೊಂದು ಬದಿಯ ಕಾಮಗಾರಿಯನ್ನು ಮುಂಬರುವ ಮೂರು ತಿಂಗಳ ಒಳಗಾಗಿ ಪೂರ್ಣಗೊಳಿಸುವುದಾಗಿ ಅವರು ಇದೇ ಸಂದರ್ಭದಲ್ಲಿ ವಾಗ್ದಾನ ನೀಡಿದರು. ರಸ್ತೆಯ ಬಾಕಿ ಇರುವ ಚರಂಡಿ ಹಾಗೂ ಪಾದಚಾರಿ ಮಾರ್ಗದ (Footpath) ಕಾಮಗಾರಿಗಳನ್ನು ಮಹಾನಗರ ಪಾಲಿಕೆಯಿಂದ ಕೈಗೆತ್ತಿಕೊಳ್ಳಬೇಕಾಗಿದ್ದು, ಇದಕ್ಕಾಗಿ ಈಗಾಗಲೇ ಟೆಂಡರ್ ಕರೆಯಲಾಗಿದೆ. ಈ ಚರಂಡಿ ಮತ್ತು ಪಾದಚಾರಿ ಮಾರ್ಗದ ಕಾಮಗಾರಿಗಳನ್ನು ಯಾವುದೇ ವಿಳಂಬವಿಲ್ಲದೆ ಕೂಡಲೇ ಆರಂಭಿಸಲು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಅವರು ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ರಸ್ತೆ ಪರಿಶೀಲನೆಯ ಈ ಸಂದರ್ಭದಲ್ಲಿ ಪಿ.ಡಬ್ಲ್ಯೂ.ಡಿ (PWD) ಇಂಜಿನಿಯರ್‌ಗಳಾದ ಪ್ರೀತಮ್ ಹಾಗೂ ಹೇಮಂತ್, ಮಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಇಂಜಿನಿಯರ್ ನಾಗರಾಜ್, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಮಾಜಿ ಕಾರ್ಪೊರೇಟರ್‌ಗಳಾದ ನವೀನ್ ಡಿಸೋಜಾ, ನಾಗೇಂದ್ರ ಕುಮಾರ್, ಭಾಸ್ಕರ್ ರಾವ್, ಅಪ್ಪಿ ಎಸ್, ಸತೀಶ್ ಪೆಂಗಲ್ ಹಾಗೂ ಕಾಂಗ್ರೆಸ್ ನಾಯಕರಾದ ಸುಹೆಲ್ ಕಂದಕ್, ಚೇತನ್ ಕುಮಾರ್, ಉಪೇಂದ್ರ ಕುತ್ಕೋರಿಗುಡ್ಡ, ಅನಿಲ್ ಕುತ್ಕೋರಿಗುಡ್ಡ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ