ಮಂಗಳೂರು : ಮಂಗಳೂರು ಮತ್ತು ಉಡುಪಿ ಜಿಲ್ಲೆಗಳಲ್ಲಿ ಕೈಗೊಳ್ಳಲಾಗಿರುವ ಕೆಯುಐಡಿಎಫ್‌ಸಿ (KUIDFC) ಮತ್ತು ಅಮೃತ್ ಯೋಜನೆಯ ಒಳಚರಂಡಿ ಕಾಮಗಾರಿಗಳ ಲೋಪದೋಷಗಳನ್ನು ಪರಿಶೀಲಿಸಲು ಸಾರ್ವಜನಿಕ ಉದ್ದಿಮೆ ಸಮಿತಿಯು ಮೇ 26 ಮತ್ತು ಮೇ 27ರಂದು ಎರಡು ದಿನಗಳ ಕಾಲ ಪ್ರವಾಸ ಹಮ್ಮಿಕೊಂಡಿದೆ. ವಿಧಾನ ಪರಿಷತ್ ಶಾಸಕ ಐವನ್ ಡಿ’ಸೋಜಾ ಅವರ ಪ್ರಕಟಣೆಯ ಪ್ರಕಾರ, ಸಮಿತಿಯ ಅಧ್ಯಕ್ಷರಾದ ಶ್ರೀ ಟಿ. ರಘುಮೂರ್ತಿ ಹಾಗೂ ಸದಸ್ಯರುಗಳಾದ ಐವನ್ ಡಿ’ಸೋಜಾ, ಜಿ.ಕೆ. ವೆಂಕಟಶಿವ ರೆಡ್ಡಿ, ಎಂ. ಕೃಷ್ಣಪ್ಪ, ಡಿ.ಜಿ. ಶಂತಾನಗೌಡ, ಕೆ. ಗೋಪಾಲಯ್ಯ, ಎಸ್. ಮುನಿರಾಜು, ಪ್ರಕಾಶ್ ಕೆ. ಕೋಳಿವಾಡ, ಡಾ. ಕೆ. ಗೋವಿಂದರಾಜು, ಟಿ.ಎನ್. ಜವರಾಯ್‌ಗೌಡ, ಕಿಶೋರ್ ಕುಮಾರ್ ಪುತ್ತೂರು ಮತ್ತು ಹರೀಶ್ ಅವರು ಇಂದು ಮಂಗಳೂರಿಗೆ ಆಗಮಿಸಲಿದ್ದಾರೆ. ಮೇ 27ರಂದು ಬೆಳಿಗ್ಗೆ ಸಮಿತಿಯು ಉಡುಪಿಗೆ ತೆರಳಿ ಸ್ಥಳ ವೀಕ್ಷಣೆ ನಡೆಸಲಿದ್ದು, ನಂತರ ಮಧ್ಯಾಹ್ನ 1 ಗಂಟೆಗೆ ಮಂಗಳೂರಿನ ಓಷನ್ ಪರ್ಲ್ ಹೋಟೆಲ್‌ಗೆ ಆಗಮಿಸಿ ಕೆಯುಐಡಿಎಫ್‌ಸಿ ಅಧಿಕಾರಿಗಳಿಂದ ಮಾಹಿತಿ ಪಡೆದು ಚರ್ಚೆ ನಡೆಸಲಿದೆ.
ಮಧ್ಯಾಹ್ನದ ಊಟದ ಬಳಿಕ ಅಪರಾಹ್ನ 2:00 ಗಂಟೆಯಿಂದ 5:30 ರವರೆಗೆ ಸಮಿತಿಯು ಮಂಗಳೂರು ನಗರದ ಸಾರ್ವಜನಿಕರಿಗೆ ತೊಂದರೆಯಾಗಿರುವ ಹಾಗೂ ಲೋಪದೋಷಗಳಿರುವ ಸುಮಾರು ಏಳು ಪ್ರಮುಖ ಸ್ಥಳಗಳಿಗೆ ಭೇಟಿ ನೀಡಲಿದೆ. ಸುರತ್ಕಲ್ ಎಸ್‌ಟಿಪಿ-ಖಂಡಿಗೆ, ಇಡ್ಯಾ ವೆಟ್‌ವೆಲ್, ಅಡ್ಯಾರ್ ಎಸ್‌ಟಿಪಿ, ಬಿಜೈ ಆನೆಗುಂಡಿ, ಅಳಕೆ ಮತ್ತು ಕಾವೂರು ಎಸ್‌ಟಿಪಿ ಮುಂತಾದ ಕಡೆಗಳಲ್ಲಿ ಸಮಿತಿಯು ಸ್ಥಳ ವೀಕ್ಷಣೆ ನಡೆಸಲಿದೆ. ಮುಖ್ಯವಾಗಿ ನಂದಿನಿ ನದಿಯಲ್ಲಿ ಉಂಟಾಗಿರುವ ವಾಯು ಮಾಲಿನ್ಯ ಮತ್ತು ಪರಿಸರ ಮಾಲಿನ್ಯದ ಕುರಿತು ಅಧಿಕಾರಿಗಳೊಂದಿಗೆ ಗಂಭೀರ ಚರ್ಚೆ ನಡೆಸಲಾಗುವುದು. ಈ ಸ್ಥಳ ವೀಕ್ಷಣೆ ಹಾಗೂ ಚರ್ಚೆಯ ಸಂದರ್ಭದಲ್ಲಿ ಪತ್ರಿಕಾ ಪ್ರತಿನಿಧಿಗಳೂ ಭಾಗವಹಿಸುವಂತೆ ಕೋರಲಾಗಿದೆ.
ಮಂಗಳೂರು ಮಹಾನಗರ ಪಾಲಿಕೆಯು 60 ವಾರ್ಡ್‌ಗಳನ್ನು ಹೊಂದಿದ್ದು, 2011ರ ಜನಗಣತಿಯಂತೆ 4,88,487 ಜನಸಂಖ್ಯೆ ಇತ್ತು. ಇತ್ತೀಚಿನ ವರ್ಷಗಳಲ್ಲಿ ವಾರ್ಷಿಕ ಸರಾಸರಿ ಶೇಕಡಾ 2 ರಷ್ಟು ಜನಸಂಖ್ಯೆ ಹೆಚ್ಚುತ್ತಿದ್ದು, ಬಹುಮಹಡಿ ಕಟ್ಟಡಗಳ ನಿರ್ಮಾಣವೂ ಹೆಚ್ಚಾಗಿದೆ. ನಗರದಲ್ಲಿ ಒಳಚರಂಡಿ ವ್ಯವಸ್ಥೆಗಾಗಿ 2003 ರಿಂದ ಇಲ್ಲಿಯವರೆಗೆ ಒಟ್ಟು 448.58 ಕೋಟಿ ರೂಪಾಯಿಗಳ ಅನುದಾನದಲ್ಲಿ 473 ಕಿಲೋಮೀಟರ್ ಒಳಚರಂಡಿ ಕೊಳವೆ ಜಾಲವನ್ನು ಅಭಿವೃದ್ಧಿಪಡಿಸಲಾಗಿದ್ದು, ಇದು ನಗರದ ಶೇಕಡಾ 26.72 ರಷ್ಟು ಪ್ರದೇಶವನ್ನು ಮಾತ್ರ ಒಳಗೊಂಡಿದೆ.
ಇದರ ವಿವರಗಳನ್ನು ನೋಡುವುದಾದರೆ, ಕುಂಡ್ಸೆಪ್ ಯೋಜನೆಯಡಿ (2003-2014) 218 ಕೋಟಿ ರೂ. ವೆಚ್ಚದಲ್ಲಿ 360 ಕಿ.ಮೀ ಕೊಳವೆ ಜಾಲ, 20 ಹೊಸ ವೆಟ್‌ವೆಲ್ ಹಾಗೂ ತ್ಯಾಜ್ಯ ಸಂಸ್ಕರಣಾ ಘಟಕ (STP) ನಿರ್ಮಿಸಲಾಗಿದೆ. ಅಮೃತ್ 1.0 ಯೋಜನೆಯಡಿ (2018-2026) 150.58 ಕೋಟಿ ರೂ. ವೆಚ್ಚದಲ್ಲಿ 61.29 ಕಿ.ಮೀ ಕೊಳವೆ ಜಾಲ ಮತ್ತು 1 ವೆಟ್‌ವೆಲ್ ನಿರ್ಮಿಸಲಾಗಿದೆ. ಇದರೊಂದಿಗೆ ರಾಜ್ಯ ಸರ್ಕಾರದ ಅನುದಾನದ ಕ್ವಿಮಿಪ್ ಯೋಜನೆಯಡಿ (2020-2026) 80 ಕೋಟಿ ರೂ. ವೆಚ್ಚದಲ್ಲಿ 52 ಕಿ.ಮೀ ಒಳಚರಂಡಿ ಜಾಲ, 14 ಕಿ.ಮೀ ಏರುಕೊಳವೆ, 3 ವೆಟ್‌ವೆಲ್‌ಗಳು ಮತ್ತು 1.5 ಎಂಎಲ್‌ಡಿ ಸಾಮರ್ಥ್ಯದ ಎಸ್‌ಟಿಪಿ ನಿರ್ಮಿಸಲಾಗುತ್ತಿದೆ. ಪ್ರಸ್ತುತ ಅಮೃತ್ 1.0 ಮತ್ತು ಕ್ವಿಮಿಪ್ ಯೋಜನೆಗಳ ಮೂಲಕ ಶೇಕಡಾ 14.24 ರಷ್ಟು ಹೆಚ್ಚುವರಿ ಪ್ರದೇಶಕ್ಕೆ ಒಳಚರಂಡಿ ಜಾಲ ವಿಸ್ತರಿಸಲಾಗಿದ್ದು, ಒಟ್ಟು 14,605 ಹೊಸ ಮನೆಗಳಿಗೆ ಒಳಚರಂಡಿ ಸಂಪರ್ಕ ಕಲ್ಪಿಸಲಾಗಿದೆ. ಆದಾಗ್ಯೂ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿರುವ ಲೋಪದೋಷಗಳ ದೂರುಗಳ ಹಿನ್ನೆಲೆಯಲ್ಲಿ ಈ ಜಂಟಿ ತಪಾಸಣೆ ಅತ್ಯಂತ ಮಹತ್ವ ಪಡೆದುಕೊಂಡಿದೆ.