image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ‘ಇನ್‌ಸ್ಟಿಟ್ಯೂಷನ್ಸ್ ಆಫ್ ಲೆಗಸಿ’ ಕಾಫಿ ಟೇಬಲ್ ಪುಸ್ತಕ ಲೋಕಾರ್ಪಣೆ

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ‘ಇನ್‌ಸ್ಟಿಟ್ಯೂಷನ್ಸ್ ಆಫ್ ಲೆಗಸಿ’ ಕಾಫಿ ಟೇಬಲ್ ಪುಸ್ತಕ ಲೋಕಾರ್ಪಣೆ

ಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳದ ಎಸ್‌ಡಿಎಂ ಸಂಸ್ಥೆಗಳ ಶೈಕ್ಷಣಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಪಯಣವನ್ನು ಅನಾವರಣಗೊಳಿಸುವ ‘ಇನ್‌ಸ್ಟಿಟ್ಯೂಷನ್ಸ್ ಆಫ್ ಲೆಗಸಿ’ (Institutions of Legacy) ಕಾಫಿ ಟೇಬಲ್ ಪುಸ್ತಕವು ಶ್ರೀ ಕ್ಷೇತ್ರದಲ್ಲಿ ಅದ್ಧೂರಿಯಾಗಿ ಬಿಡುಗಡೆಗೊಂಡಿತು. ಅಕಾಡೆಮಿಕ್ ಇನ್‌ಸೈಟ್ಸ್ (Academic Insights) ಸಂಸ್ಥೆಯು ಪ್ರಕಟಿಸಿರುವ ಈ ಮಹತ್ವದ ಕೃತಿಯನ್ನು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಲೋಕಾರ್ಪಣೆಗೊಳಿಸಿದರು.

ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ಡಾ. ವೀರೇಂದ್ರ ಹೆಗ್ಗಡೆಯವರು, ಶ್ರೀ ರತ್ನವರ್ಮ ಹೆಗ್ಗಡೆಯವರ ದೂರದೃಷ್ಟಿಯ ನಾಯಕತ್ವದಲ್ಲಿ ಆರಂಭವಾದ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳು ಕಳೆದ ಐದು ದಶಕಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅಪೂರ್ವ ಸಾಧನೆಗಳನ್ನು ಮಾಡಿವೆ. ಇಂದು ಇವು ರಾಜ್ಯದ ಮಾದರಿ ಶಿಕ್ಷಣ ಸಂಸ್ಥೆಗಳಾಗಿ ಗುರುತಿಸಿಕೊಂಡಿರುವುದಕ್ಕೆ ಸಂಸ್ಥೆಗಳ ಬೆಳವಣಿಗೆಯಲ್ಲಿ ಶ್ರಮಿಸಿದ ಸಿಬ್ಬಂದಿ, ಶಿಕ್ಷಕರು ಹಾಗೂ ಒಟ್ಟಾರೆ ತಂಡದ ಸದಸ್ಯರ ಸೇವೆಯೇ ಕಾರಣ ಎಂದು ಶ್ಲಾಘಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಶ್ರೀಮತಿ ಹೇಮಾವತಿ ವಿ. ಹೆಗ್ಗಡೆಯವರು, ಪುಸ್ತಕವು ಅತ್ಯಂತ ಆಕರ್ಷಕವಾಗಿ ಮೂಡಿಬಂದಿದ್ದು, ಅದರ ಸಂಪಾದಕೀಯ ಹಾಗೂ ನಿರ್ಮಾಣ ತಂಡದ ಪರಿಶ್ರಮ ಮೆಚ್ಚುವಂತದ್ದಾಗಿದೆ ಎಂದರು.

ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಅವರು ಪುಸ್ತಕದ ಕುರಿತು ಮಾಹಿತಿ ನೀಡಿ, ಈ ಕಾಫಿ ಟೇಬಲ್ ಪುಸ್ತಕವು ಶ್ರೀ ಕ್ಷೇತ್ರ ಧರ್ಮಸ್ಥಳದ ವಿವಿಧ ಕಾರ್ಯಕ್ಷೇತ್ರಗಳನ್ನು ಸಂಕ್ಷಿಪ್ತವಾಗಿ ಹಾಗೂ ಮನೋಜ್ಞ ಛಾಯಾಚಿತ್ರಗಳ ಮೂಲಕ ಪರಿಚಯಿಸುತ್ತದೆ. ಧರ್ಮಸ್ಥಳದ ‘ಚತುರ್ದಾನ’ ಪರಂಪರೆಯಿಂದ ಆರಂಭಗೊಂಡು ‘ವಿದ್ಯಾದಾನ’ದ ಮಹತ್ವವನ್ನು ಸಾರುವ ಶಿಕ್ಷಣ ಸಂಸ್ಥೆಗಳ ಸಮಗ್ರ ಮಾಹಿತಿ ಇದರಲ್ಲಿದೆ ಎಂದು ವಿವರಿಸಿದರು. ಈ ಕೃತಿಯಲ್ಲಿ ಧರ್ಮಸ್ಥಳದ ಅಭಿವೃದ್ಧಿ, ಸಾಮಾಜಿಕ ಸೇವೆ, ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಶಿಕ್ಷಣ ಕ್ಷೇತ್ರದ ಸಾಧನೆಗಳ ಸಮಗ್ರ ಚಿತ್ರಣವಿದೆ. ಇದರೊಂದಿಗೆ ಎಸ್‌ಕೆಡಿಆರ್‌ಡಿಪಿ, ಸಿರಿ, ರುಡ್‌ಸೆಟ್, ಎಸ್‌ಡಿಎಂ ಧರ್ಮೋತ್ಥಾನ ಟ್ರಸ್ಟ್ ಸೇರಿದಂತೆ ವಿವಿಧ ಸಂಸ್ಥೆಗಳ ಕಾರ್ಯಚಟುವಟಿಕೆಗಳು, ಸಾಧನೆಗಳು ಮತ್ತು ಇತಿಹಾಸವನ್ನು ದಾಖಲಿಸಲಾಗಿದೆ.

ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್, ಶ್ರೀಮತಿ ಸುಪ್ರಿಯಾ ಹರ್ಷೇಂದ್ರ ಕುಮಾರ್, ಪ್ರಾಂಶುಪಾಲರಾದ ಡಾ. ವಿಶ್ವನಾಥ್, ಡಾ. ಅಶೋಕ್ ಕುಮಾರ್, ಧನ್ಯಕುಮಾರ್, ಪ್ರಶಾಂತ್ ಬಿ.ಆರ್., ಅರವಿಂದ್ ಉಪಸ್ಥಿತರಿದ್ದರು. ಹಾಗೆಯೇ ಅಕಾಡೆಮಿಕ್ ಇನ್‌ಸೈಟ್ಸ್ ತಂಡದ ಪ್ರತಿನಿಧಿಗಳಾದ ಮೊನಿಶಾ ರಾಕೇಶ್, ಮೊಯಿನ್, ಅಗಸ್ಟಿನ್ ಎಸ್. ನಿಯೋಲ್ ಮತ್ತು ಮಧು ಅವರು ಭಾಗವಹಿಸಿದ್ದರು. ಒಟ್ಟಾರೆಯಾಗಿ ಈ ಕೃತಿಯು ಎಸ್‌ಡಿಎಂ ಸಂಸ್ಥೆಗಳ ಪರಂಪರೆ, ಸಾಧನೆ ಮತ್ತು ಸಮಾಜಮುಖಿ ಸೇವೆಯ ಅನನ್ಯ ದಾಖಲೆಯಾಗಿದ್ದು, ಮುಂದಿನ ಪೀಳಿಗೆಗಳಿಗೆ ಅತ್ಯುತ್ತಮ ಮಾರ್ಗದರ್ಶಕವಾಗಲಿದೆ ಎಂದು ಕಾರ್ಯಕ್ರಮದಲ್ಲಿ ಗಣ್ಯರು ಅಭಿಪ್ರಾಯಪಟ್ಟರು.

Category
ಕರಾವಳಿ ತರಂಗಿಣಿ