image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ವೆನ್ಲಾಕ್ ಆಸ್ಪತ್ರೆಗೆ ರೋಹನ್ ಕಾರ್ಪೊರೇಷನ್ ವತಿಯಿಂದ ₹10 ಲಕ್ಷ ಮೌಲ್ಯದ ಮಲ್ಟಿಪ್ಯಾರ ಮಾನಿಟರ್ ಕೊಡುಗೆ

ವೆನ್ಲಾಕ್ ಆಸ್ಪತ್ರೆಗೆ ರೋಹನ್ ಕಾರ್ಪೊರೇಷನ್ ವತಿಯಿಂದ ₹10 ಲಕ್ಷ ಮೌಲ್ಯದ ಮಲ್ಟಿಪ್ಯಾರ ಮಾನಿಟರ್ ಕೊಡುಗೆ

ಮಂಗಳೂರು: ನಗರದ ಪ್ರತಿಷ್ಠಿತ ರೋಹನ್ ಕಾರ್ಪೊರೇಷನ್ ಸಂಸ್ಥೆಯು ತನ್ನ ಸಿಎಸ್ಆರ್ (CSR) ನಿಧಿಯ ಅಡಿಯಲ್ಲಿ ಇಲ್ಲಿನ ಸರ್ಕಾರಿ ವೆನ್ಲಾಕ್ ಆಸ್ಪತ್ರೆಗೆ ₹10 ಲಕ್ಷ ಮೌಲ್ಯದ ಅತ್ಯಾಧುನಿಕ ಮಲ್ಟಿಪ್ಯಾರ ಮಾನಿಟರ್ ಅನ್ನು ಕೊಡುಗೆಯಾಗಿ ನೀಡಿದೆ. ನಗರದ ಓಶಿಯನ್ ಪರ್ಲ್ ಸಭಾಂಗಣದಲ್ಲಿ ರವಿವಾರ ನಡೆದ ವಿಶೇಷ ಕಾರ್ಯಕ್ರಮದಲ್ಲಿ ರೋಹನ್ ಕಾರ್ಪೊರೇಷನ್ ಸಂಸ್ಥೆಯ ಅಧ್ಯಕ್ಷರಾದ ಡಾ. ರೋಹನ್ ಮೊಂತೆರೊ ಅವರು ವೆನ್ಲಾಕ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಶಿವಪ್ರಕಾಶ್ ಅವರಿಗೆ ಈ ಉಪಕರಣವನ್ನು ಹಸ್ತಾಂತರಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮಂಗಳೂರು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರು, ಡಾ. ರೋಹನ್ ಮೊಂತೆರೊ ಅವರು ತಮ್ಮ ಬದ್ಧತೆ ಮತ್ತು ಕಠಿಣ ಪರಿಶ್ರಮದ ಮೂಲಕ ಮಂಗಳೂರಿನ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದಾರೆ. ಬಡ ರೋಗಿಗಳಿಗೆ ಆಸರೆಯಾಗಿರುವ ವೆನ್ಲಾಕ್ ಆಸ್ಪತ್ರೆಗೆ ತಮ್ಮ ಆದಾಯದ ಒಂದು ಪಾಲನ್ನು ಸಿಎಸ್ಆರ್ ನಿಧಿಯ ಮೂಲಕ ವಿನಿಯೋಗಿಸಿ ಅಗತ್ಯ ಸಲಕರಣೆ ಒದಗಿಸಿರುವ ಅವರ ಸಾಮಾಜಿಕ ಕಳಕಳಿ ನಿಜಕ್ಕೂ ಶ್ಲಾಘನೀಯ ಎಂದು ಪ್ರಶಂಸಿಸಿದರು.

ಕೊಡುಗೆಯನ್ನು ಸ್ವೀಕರಿಸಿ ಮಾತನಾಡಿದ ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಶಿವಪ್ರಕಾಶ್, ವೆನ್ಲಾಕ್ ಆಸ್ಪತ್ರೆಗೆ ಸುಮಾರು ₹10 ಲಕ್ಷ ವೆಚ್ಚದ ಮಲ್ಟಿಪ್ಯಾರ ಮಾನಿಟರ್ ಸಿಕ್ಕಿರುವುದರಿಂದ ಇಲ್ಲಿಗೆ ಚಿಕಿತ್ಸೆಗೆ ಬರುವ ಬಡ ರೋಗಿಗಳಿಗೆ ತುಂಬಾ ಅನುಕೂಲವಾಗಲಿದೆ. ಈ ಮಹತ್ಕಾರ್ಯಕ್ಕಾಗಿ ಆಸ್ಪತ್ರೆಯ ಪರವಾಗಿ ರೋಹನ್ ಕಾರ್ಪೊರೇಷನ್ ಸಂಸ್ಥೆಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಇದೇ ವೇಳೆ ಮಾತನಾಡಿದ ಡಾ. ರೋಹನ್ ಮೊಂತೆರೊ ಅವರು, ಸಾರ್ವಜನಿಕರಿಗೆ ಮತ್ತು ಬಡವರಿಗೆ ಉತ್ತಮ ಆರೋಗ್ಯ ಸೌಲಭ್ಯಗಳನ್ನು ನೀಡುತ್ತಿರುವ ವೆನ್ಲಾಕ್ ಆಸ್ಪತ್ರೆಗೆ ಈ ಮಾನಿಟರ್ ಒದಗಿಸಿರುವುದು ನಮಗೆ ಸಂತಸ ತಂದಿದೆ. ಇದು ಬಡ ರೋಗಿಗಳ ಚಿಕಿತ್ಸೆಗೆ ನೆರವಾಗಲಿದೆ ಎಂಬ ನಂಬಿಕೆ ನಮ್ಮದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ರೋಹನ್ ಕಾರ್ಪೊರೇಷನ್ ನಿರ್ದೇಶಕರಾದ ಡಿಯೋನ್ ಮೊಂತೆರೊ ವಂದಿಸಿದರು. ಸಾಹಿಲ್ ಝಾಹಿರ್ ಕಾರ್ಯಕ್ರಮವನ್ನು ನಿರೂಪಿಸಿದರು.

Category
ಕರಾವಳಿ ತರಂಗಿಣಿ