image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ‘ಸ್ವಚ್ಛ ಸಂಕಲ್ಪ’ ಸ್ವಚ್ಛತಾ ಅಭಿಯಾನ

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ‘ಸ್ವಚ್ಛ ಸಂಕಲ್ಪ’ ಸ್ವಚ್ಛತಾ ಅಭಿಯಾನ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ನಮ್ಮ ಮೂಡುಬಿದಿರೆ, ನೇತಾಜಿ ಬ್ರಿಗೇಡ್, ಜೆಸಿಐ ಹಾಗೂ ಮೂಡುಬಿದಿರೆ ಬಂಟರ ಮಹಿಳಾ ಸಂಘದ ಜಂಟಿ ಆಶ್ರಯದಲ್ಲಿ ಭಾನುವಾರ ವಿದ್ಯಾಗಿರಿ-ಹನ್ಡೇಲು ಮತ್ತು ವಿದ್ಯಾಗಿರಿ-ಪುತ್ತಿಗೆ ಪರಿಸರದ 5.5 ಕಿಲೋಮೀಟರ್ ವ್ಯಾಪ್ತಿಯಲ್ಲಿ ‘ಸ್ವಚ್ಛ ಸಂಕಲ್ಪ’ ಎಂಬ ಬೃಹತ್ ಸ್ವಚ್ಛತಾ ಅಭಿಯಾನವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮಕ್ಕೆ ಶುಭ ಹಾರೈಸಿದ ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಷನ್‌ನ ಅಧ್ಯಕ್ಷ ಅಶೋಕ ಅಡ್ಯಂತಾಯ ಅವರು, ಸ್ವಚ್ಛತೆಯೇ ಆರೋಗ್ಯಕರ ಸಮಾಜದ ಅಡಿಪಾಯವಾಗಿದ್ದು, ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಮೂಡುಬಿದಿರೆಯ ವಿವಿಧ ಸಂಘ-ಸಂಸ್ಥೆಗಳು ಕೈಜೋಡಿಸಿ ಇಂತಹ ಮಹತ್ವದ ಅಭಿಯಾನ ನಡೆಸಿರುವುದು ಶ್ಲಾಘನೀಯ ಎಂದರು.

ನಂತರ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಅವರು, ಆಳ್ವಾಸ್ ಸಂಸ್ಥೆಯು ಕಳೆದ 12 ವರ್ಷಗಳಿಂದ ಅಳಿವೆ ಪ್ರದೇಶಗಳಲ್ಲಿ ನಿರಂತರವಾಗಿ ಸ್ವಚ್ಛತಾ ಕಾರ್ಯ ಕೈಗೊಳ್ಳುತ್ತಾ ಬಂದಿದೆ ಎಂದು ಸ್ಮರಿಸಿದರು. ನಂದಿನಿ ಹಾಗೂ ಫಾಲ್ಗುಣಿ ನದಿಗಳಿಗೆ ಸಂಪರ್ಕ ಕಲ್ಪಿಸುವ ಚರಂಡಿಗಳ ಮೂಲಕ ಪ್ಲಾಸ್ಟಿಕ್ ಸೇರಿದಂತೆ ವಿವಿಧ ತ್ಯಾಜ್ಯಗಳು ನದಿ ಹಾಗೂ ಸಮುದ್ರ ಸೇರುವ ಅಪಾಯವಿದೆ. ಮಳೆಗಾಲ ಆರಂಭವಾಗಲಿರುವ ಈ ಸಂದರ್ಭದಲ್ಲಿ ರಸ್ತೆ ಬದಿ ಹಾಗೂ ಚರಂಡಿಗಳನ್ನು ಸ್ವಚ್ಛಗೊಳಿಸುವುದು ಅತಿ ಅಗತ್ಯವಾಗಿದೆ. ಪಶ್ಚಿಮಘಟ್ಟ ಮತ್ತು ಸಮುದ್ರ ತೀರದ ಮಧ್ಯೆ ಇರುವ ಈ ಸೂಕ್ಷ್ಮ ಪರಿಸರ ವಲಯವನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, 'ನಮ್ಮ ಊರು–ನಮ್ಮ ಜವಾಬ್ದಾರಿ' ಎಂಬ ಮನೋಭಾವದಿಂದ ಎಲ್ಲರೂ ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಈ ಮಹತ್ವಾಕಾಂಕ್ಷಿ ಅಭಿಯಾನದಲ್ಲಿ ಆಳ್ವಾಸ್ ಸಂಸ್ಥೆಯ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಂಡರು. ಇವರೆಲ್ಲರ ಶ್ರಮದ ಫಲವಾಗಿ ಪರಿಸರದಲ್ಲಿದ್ದ ಸುಮಾರು 700ಕ್ಕೂ ಅಧಿಕ ಚೀಲಗಳಷ್ಟು ಕಸಕಡ್ಡಿ ಹಾಗೂ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿ, ಯಶಸ್ವಿಯಾಗಿ ವಿಲೇವಾರಿ ಮಾಡಲಾಯಿತು. ಕಾರ್ಯಕ್ರಮದಲ್ಲಿ ರಾಮಕೃಷ್ಣ ಮಿಷನ್‌ನ ರಂಜನ್ ಬೆಳ್ಳರ್ಪಾಡಿ, ನಮ್ಮ ಮೂಡುಬಿದಿರೆಯ ಅಕ್ಷಯ ಜೈನ್, ನೇತಾಜಿ ಬ್ರಿಗೇಡ್‌ನ ರಾಹುಲ್, ಬಂಟರ ಮಹಿಳಾ ಘಟಕದ ಶೋಭಾ ಹೆಗ್ಡೆ, ಪರ್ಯಾವರಣ ಗತಿವಿಧಿಯ ವೆಂಕಟೇಶ್, ಕೇಶವ, ಚಂದ್ರಹಾಸ, ಮಂಜುನಾಥ ಶೆಟ್ಟಿ ಹಾಗೂ ಪ್ರಮುಖರಾದ ಯಾಸಿರ್, ಸಂಪತ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು ಶ್ರಮದಾನ ಮಾಡಿದರು.

Category
ಕರಾವಳಿ ತರಂಗಿಣಿ