ಮಂಗಳೂರು : ಕರಾವಳಿ ಕರ್ನಾಟಕ ಭಾಗದ ದಶಕಗಳ ಹಿಂದಿನ ಪ್ರಮುಖ ಬೇಡಿಕೆಯಾದ ಕರಾವಳಿ ಹೈಕೋರ್ಟ್ ಸಂಚಾರಿ ಪೀಠದ ಸ್ಥಾಪನೆಗೆ ಕೊನೆಗೂ ಮಹತ್ವದ ಚಾಲನೆ ದೊರೆತಿದೆ. ಈ ಸಂಬಂಧ ಹೈಕೋರ್ಟ್ ಸಂಚಾರಿ ಪೀಠದ ಸಂಚಾಲಕರೂ ಹಾಗೂ ವಿಧಾನ ಪರಿಷತ್ ಶಾಸಕರೂ ಆದ ಐವನ್ ಡಿ'ಸೋಜಾ ಅವರ ನೇತೃತ್ವದಲ್ಲಿ 15ಕ್ಕೂ ಹೆಚ್ಚು ಪ್ರಮುಖ ಸಂಘ-ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ವಿಶೇಷ ಸಮಾಲೋಚನಾ ಸಭೆಯನ್ನು ಆಯೋಜಿಸಲಾಗಿತ್ತು. ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾಗಬೇಕೆಂದು ಕೆನರಾ ಚೇಂಬರ್ಸ್ ಅಸೋಸಿಯೇಷನ್ ಸೇರಿದಂತೆ ಹಲವು ಸಂಘಟನೆಗಳು ದೀರ್ಘ ಕಾಲದಿಂದ ಮನವಿ ಸಲ್ಲಿಸುತ್ತಾ ಬಂದಿದ್ದವು. ಈ ಬೇಡಿಕೆಯನ್ನು ಈಡೇರಿಸಲು ಏಳು ವರ್ಷಗಳ ಹಿಂದೆಯೇ ಐವನ್ ಡಿ'ಸೋಜಾ ಅವರ ನೇತೃತ್ವದಲ್ಲಿ ಹೋರಾಟ ಸಮಿತಿಯನ್ನು ರಚಿಸಿ ನಿರಂತರ ಹೋರಾಟಗಳನ್ನು ನಡೆಸಲಾಗಿತ್ತು. ಈ ಹಿಂದೆ ಯಾವುದೇ ಅಂತಿಮ ತೀರ್ಮಾನ ಕೈಗೊಳ್ಳದ ಹಿನ್ನೆಲೆಯಲ್ಲಿ, ಪ್ರಸ್ತುತ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚರ್ಚಿಸಿದಾಗ ಅವರು ಈ ಬಾರಿ ಹೈಕೋರ್ಟ್ ಪೀಠ ಸ್ಥಾಪನೆಗೆ ಹಸಿರು ನಿಶಾನೆ ತೋರಿಸಿದ್ದಾರೆ. ಅಲ್ಲದೆ, ಮಾನ್ಯ ಮುಖ್ಯ ನ್ಯಾಯಾಧೀಶರುಗಳು ಸಹ ಈ ವಿಷಯದ ಬಗ್ಗೆ ಸಕಾರಾತ್ಮಕ ಒಲವು ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಲ್ಲಿ ಹೈಕೋರ್ಟ್ ಪೀಠದ ರಚನೆಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯಾಧೀಶರುಗಳು ಇಲ್ಲಿಗೆ ಭೇಟಿ ನೀಡುವ ಸಂದರ್ಭದಲ್ಲಿ ಅಗತ್ಯವಿರುವ ಎಲ್ಲಾ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲು ಮತ್ತು ಪೂರ್ಣ ಪ್ರಮಾಣದ ಸಲಹೆ ಹಾಗೂ ಸಹಕಾರವನ್ನು ನೀಡಲು ಸಭೆಯಲ್ಲಿದ್ದ ಎಲ್ಲಾ ಸಂಘಟನೆಗಳು ಒಮ್ಮತದಿಂದ ನಿರ್ಧರಿಸಿವೆ. ಪ್ರಸ್ತುತ ಕರಾವಳಿ ಭಾಗದಲ್ಲಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಉಳಿದಿದ್ದು, ಈ ಭಾಗದ ಒಟ್ಟು ಕೇಸುಗಳ ಪೈಕಿ ನಾಲ್ಕನೇ ಒಂದು ಭಾಗದಷ್ಟು ಪ್ರಕರಣಗಳು ಇತ್ಯರ್ಥವಾಗದೇ ಬಾಕಿ ಇವೆ. ಕರಾವಳಿ ಭಾಗದ ಜನರು ನ್ಯಾಯ ಪಡೆಯುವುದಕ್ಕಾಗಿ ಸುಮಾರು 400 ಕಿಲೋಮೀಟರ್ ದೂರ ಪ್ರಯಾಣಿಸಬೇಕಾದ ಅನಿವಾರ್ಯತೆ ಇರುವುದರಿಂದ, ಸಾರ್ವಜನಿಕರಿಗೆ ಇದು ಅತ್ಯಂತ ಕಷ್ಟಸಾಧ್ಯವಾಗಿದ್ದು ಹಣದ ವ್ಯಯವೂ ಆಗುತ್ತಿದೆ. ಈ ಎಲ್ಲಾ ಸಮಸ್ಯೆಗಳನ್ನು ಮನಗಂಡು, ಜಿಲ್ಲಾ ಉಸ್ತುವಾರಿ ಸಚಿವರು ಮಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಂಚಾರಿ ಪೀಠದ ಸ್ಥಾಪನೆಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ತಕ್ಷಣವೇ ಒದಗಿಸುವಂತೆ ಜಿಲ್ಲಾಧಿಕಾರಿಯವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದು ಐವನ್ ಡಿ'ಸೋಜಾ ಅವರು ಸಭೆಗೆ ಮಾಹಿತಿ ನೀಡಿದ್ದಾರೆ.
ಈ ಮಹತ್ವದ ಸಮಾಲೋಚನಾ ಸಭೆಯಲ್ಲಿ ಕೆನರಾ ಚೇಂಬರ್ಸ್ ಆಫ್ ಕಾಮರ್ಸ್ ಅಧ್ಯಕ್ಷರಾದ ಮುದಸಿರ್ ಹಾಗೂ ಎಸ್. ರಸೀದ್ ಹಾಜ್, ಎಸ್‌ಡಿಎಂ ಲಾ ಕಾಲೇಜಿನ ಪ್ರಾಂಶುಪಾಲರಾದ ಡಾ. ತಾರಾನಾಥ್, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಕಾರ್ಯದರ್ಶಿ ಡಾ. ಜೂಲಿಯಾನ ಸಾಲ್ದಾನ, ಡಾಕ್ಟರ್ಸ್ ಅಸೋಸಿಯೇಷನ್‌ನ ಡಾ. ಜಿ.ಕೆ. ಭಟ್ ಉಪಸ್ಥಿತರಿದ್ದರು. ಅವರೊಂದಿಗೆ ಕ್ಯಾಥೋಲಿಕ್ ಸಭೆಯ ಅಧ್ಯಕ್ಷ ಸಂತೋಷ್ ಡಿಸೋಜ, ಕೊಂಕಣಿ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಅಲ್ವಾರಿಸ್, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್, ಕ್ರೆಡೈ ಅಧ್ಯಕ್ಷ ವಿನೋದ್, ಬಿಲ್ಡರ್ಸ್ ಅಸೋಸಿಯೇಷನ್ ಅಧ್ಯಕ್ಷ ಅರುಣ್ ರಾಜ್, ನಿವೃತ್ತ ಸರ್ಕಾರಿ ಉದ್ಯೋಗಿಗಳ ಸಂಘದ ಅಧ್ಯಕ್ಷ ಬಿ.ಎಂ. ರಾಜ್ ಗೋಪಾಲ್, ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ ರಾವ್, ಅಮುಕ್ತ ಅಧ್ಯಕ್ಷ ಡಾ. ಪುರುಷೋತ್ತಮ್ ಕೆ.ಡಿ., ಐಎನ್‌ಟಿಯುಸಿ (INTUC) ಅಧ್ಯಕ್ಷ ಮನೋಹರ್ ಶೆಟ್ಟಿ, ಕಾರ್ಮಿಕ ಪರಿಷತ್ ಕಾರ್ಯದರ್ಶಿ ದಯಾನಂದ್ ರೈ ಹಾಗೂ ಆಟೋರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ರಾಜೇಶ್ ಮತ್ತು ಅನಿಲ್ ಲೋಬೋ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದು ಸಂಚಾರಿ ಪೀಠದ ರಚನೆಗೆ ಸಂಪೂರ್ಣ ಬೆಂಬಲ ಪ್ರಕಟಿಸಿದರು.