ಉಜಿರೆ: ಧರ್ಮಸ್ಥಳ ಗ್ರಾಮದ ನಿವಾಸಿಯಾದ ಪ್ರತಿಭಾವಂತ ಬಾಲಕಿ ಕುಮಾರಿ ಎಸ್.ವಿ. ಶೌರ್ಯ ಬರೆದಿರುವ “ಪ್ರೀತಿ ಏಕೆ ಭೂಮಿ ಮೇಲಿದೆ?” ಎಂಬ ನೂತನ ಪುಸ್ತಕವು ಇತ್ತೀಚೆಗೆ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಸನ್ನಿಧಿಯಲ್ಲಿ ಲೋಕಾರ್ಪಣೆಗೊಂಡಿತು. ಧರ್ಮಸ್ಥಳದ ಧರ್ಮಾಧಿಕಾರಿಗಳು ಹಾಗೂ ರಾಜ್ಯಸಭಾ ಸದಸ್ಯರಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ತಮ್ಮ ನಿವಾಸವಾದ ‘ಬೀಡು’ವಿನಲ್ಲಿ ಈ ಕೃತಿಯನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದರು.
ಪುಸ್ತಕವನ್ನು ಮುಖಪುಟ ವೀಕ್ಷಿಸಿ ಬಿಡುಗಡೆ ಮಾಡಿದ ವೀರೇಂದ್ರ ಹೆಗ್ಗಡೆಯವರು, ಸಣ್ಣ ವಯಸ್ಸಿನಲ್ಲೇ ಕುಮಾರಿ ಶೌರ್ಯ ತೋರಿರುವ ಸಾಹಿತ್ಯಾಸಕ್ತಿ ಮತ್ತು ಸೃಜನಶೀಲತೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಇಂದಿನ ಆಧುನಿಕ ಯುಗದಲ್ಲಿ ಮಕ್ಕಳು ಸಾಹಿತ್ಯದ ಕಡೆಗೆ ಒಲವು ತೋರುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿ ಎಂದು ಅಭಿಪ್ರಾಯಪಟ್ಟ ಅವರು, ಲೇಖಕಿ ಶೌರ್ಯ ಅವರಿಗೆ ಮುಂದಿನ ದಿನಗಳಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವಂತಾಗಲಿ ಎಂದು ಹರಸಿ, ಶುಭ ಹಾರೈಸಿದರು.
ಈ ಅರ್ಥಪೂರ್ಣ ಕೃತಿ ಬಿಡುಗಡೆ ಸಮಾರಂಭದಲ್ಲಿ ಲೇಖಕಿ ಕುಮಾರಿ ಶೌರ್ಯ ಎಸ್.ವಿ. ಅವರೊಂದಿಗೆ ಅವರ ಕುಟುಂಬಸ್ಥರು ಹಾಗೂ ಹಿತೈಷಿಗಳಾದ ಕುಸುಮ, ಸುದರ್ಶನ ಕನ್ಯಾಡಿ, ಮಮತಾ, ಚಂದ್ರಾವತಿ ಮತ್ತು ಪೃಥ್ವೀಶ್ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಕಿರಿಯ ವಯಸ್ಸಿನಲ್ಲೇ ವೈವಿಧ್ಯಮಯ ಆಲೋಚನೆಗಳೊಂದಿಗೆ ಮೂಡಿಬಂದಿರುವ ಈ ಪುಸ್ತಕವು ಓದುಗರ ಮನಗೆಲ್ಲುವ ಭರವಸೆ ಮೂಡಿಸಿದೆ.