image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಂಗಳೂರು ಜಂಕ್ಷನ್‌ ರೈಲ್ವೆ ನಿಲ್ದಾಣಕ್ಕೆ ಕೇಂದ್ರ ಸಚಿವ ವಿ. ಸೋಮಣ್ಣ ಭೇಟಿ: ನವೀಕರಣ ಕಾಮಗಾರಿಗಳ ಪರಿಶೀಲನೆ

ಮಂಗಳೂರು ಜಂಕ್ಷನ್‌ ರೈಲ್ವೆ ನಿಲ್ದಾಣಕ್ಕೆ ಕೇಂದ್ರ ಸಚಿವ ವಿ. ಸೋಮಣ್ಣ ಭೇಟಿ: ನವೀಕರಣ ಕಾಮಗಾರಿಗಳ ಪರಿಶೀಲನೆ

ಮಂಗಳೂರು : ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರು ಶನಿವಾರ ಮಂಗಳೂರು ಜಂಕ್ಷನ್‌ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ, ‘ಅಮೃತ್‌ ಭಾರತ್‌ ಸ್ಟೇಷನ್‌ ಯೋಜನೆ’ಯಡಿ ಪ್ರಗತಿಯಲ್ಲಿರುವ ರೈಲ್ವೆ ನಿಲ್ದಾಣದ ನವೀಕರಣ ಕಾಮಗಾರಿಗಳ ಪರಿಶೀಲನೆ ನಡೆಸಿದರು. ನಿಲ್ದಾಣದ ಮೂಲಸೌಕರ್ಯ ಹಾಗೂ ಪ್ರಯಾಣಿಕರ ಸೌಲಭ್ಯಗಳಿಗೆ ಸಂಬಂಧಿಸಿದ ಕಾಮಗಾರಿಗಳನ್ನು ವೀಕ್ಷಿಸಿದ ಸಚಿವರು, ಇದೇ ವೇಳೆ ರೈಲು ಪ್ರಯಾಣಿಕರೊಂದಿಗೆ ಸಂವಾದ ನಡೆಸಿ, ಈಗ ಇರುವ ಸೌಕರ್ಯಗಳು ಮತ್ತು ನೂತನ ಅಭಿವೃದ್ಧಿ ಕಾರ್ಯಗಳ ಬಗ್ಗೆ ಗಣನೀಯ ಪ್ರತಿಕ್ರಿಯೆ ಹಾಗೂ ಸಲಹೆಗಳನ್ನು ಪಡೆದುಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಾಮಗಾರಿಯ ಎಲ್ಲಾ ಹಂತಗಳಲ್ಲೂ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಆಧುನಿಕ ಮತ್ತು ಪ್ರಗತಿಪರ ಭಾರತೀಯ ರೈಲ್ವೆಯ ಆಶಯಕ್ಕೆ ಅನುಗುಣವಾಗಿ, ಪ್ರಯಾಣಿಕರ ಸೌಕರ್ಯದಲ್ಲಿ ಜಾಗತಿಕ ಗುಣಮಟ್ಟವನ್ನು ಬಿಂಬಿಸುವಂತೆ ಮತ್ತು ರಾಷ್ಟ್ರದ ಹೆಮ್ಮೆಯ ಸಂಕೇತವಾಗಿ ಇದನ್ನು ನಿರ್ಮಿಸಬೇಕು ಎಂದು ಗುತ್ತಿಗೆದಾರರು ಹಾಗೂ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಅಂದಾಜು 19.62 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಈ ನವೀಕರಣ ಯೋಜನೆಯು ಮಂಗಳೂರು ಜಂಕ್ಷನ್‌ ನಿಲ್ದಾಣವನ್ನು ಆಧುನಿಕ ವಾಸ್ತುಶಿಲ್ಪ, ಸುಧಾರಿತ ಸೌಲಭ್ಯಗಳು ಹಾಗೂ ಸುಸ್ಥಿರ ಮೂಲಸೌಕರ್ಯಗಳನ್ನು ಒಳಗೊಂಡ ವಿಶ್ವದರ್ಜೆಯ ನಿಲ್ದಾಣವನ್ನಾಗಿ ಪರಿವರ್ತಿಸುವ ಗುರಿಯನ್ನು ಹೊಂದಿದೆ ಎಂದು ಸಚಿವರು ತಿಳಿಸಿದರು. ಕಾಮಗಾರಿಯನ್ನು ವ್ಯವಸ್ಥಿತವಾಗಿ ಮುನ್ನಡೆಸುತ್ತಿರುವ ಪಾಲಕ್ಕಾಡ್‌ ವಿಭಾಗದ ಅಧಿಕಾರಿಗಳ ಶ್ರಮವನ್ನು ಶ್ಲಾಘಿಸಿದ ರೈಲ್ವೆ ಸಚಿವರು, ಯೋಜನೆಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ನಿರಂತರ ನಿಗಾ ವಹಿಸುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್‌ ಬ್ರಿಜೇಶ್ ಚೌಟ, ಪಾಲಕ್ಕಾಡ್‌ ವಿಭಾಗದ ರೈಲ್ವೆ ವ್ಯವಸ್ಥಾಪಕರಾದ (ಡಿಆರ್‌ಎಂ) ಮಧುಕರ್ ರೋತ್, ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಸೇರಿದಂತೆ ರೈಲ್ವೆ ವಿಭಾಗದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ