image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕೇಂದ್ರ ರೈಲ್ವೆ ಸಚಿವ ವಿ. ಸೋಮಣ್ಣ ಅವರಿಗೆ ಜೆಡಿಎಸ್ ನಿಯೋಗದಿಂದ ರೈಲ್ವೆ ಸಮಸ್ಯೆಗಳ ಕುರಿತು ಸಮಗ್ರ ಮನವಿ ಸಲ್ಲಿಕೆ

ಕೇಂದ್ರ ರೈಲ್ವೆ ಸಚಿವ ವಿ. ಸೋಮಣ್ಣ ಅವರಿಗೆ ಜೆಡಿಎಸ್ ನಿಯೋಗದಿಂದ ರೈಲ್ವೆ ಸಮಸ್ಯೆಗಳ ಕುರಿತು ಸಮಗ್ರ ಮನವಿ ಸಲ್ಲಿಕೆ

ಮಂಗಳೂರು : ಜನತಾದಳ (ಜಾತ್ಯತೀತ) ಪಕ್ಷದ ದ.ಕ. ಜಿಲ್ಲಾ ಯುವ ಘಟಕದ ಅಧ್ಯಕ್ಷ ಅಕ್ಷಿತ್ ಸುವರ್ಣ ನೇತೃತ್ವದ ನಿಯೋಗವು ಶನಿವಾರ ಮಂಗಳೂರಿನಲ್ಲಿ ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಅವರನ್ನು ಭೇಟಿ ಮಾಡಿ, ಮಂಗಳೂರು ಮತ್ತು ಕರಾವಳಿ ಕರ್ನಾಟಕ ಭಾಗದ ಬಹುಕಾಲದ ಪ್ರಮುಖ ರೈಲ್ವೆ ಸಮಸ್ಯೆಗಳ ಕುರಿತು ಸಮಗ್ರ ಮನವಿಪತ್ರ ಸಲ್ಲಿಸಿತು. ಕರಾವಳಿ ಭಾಗದ ಜನರ ಬಹುಕಾಲದ ಬೇಡಿಕೆಯಾದ ಪ್ರತ್ಯೇಕ ಮಂಗಳೂರು ರೈಲ್ವೆ ವಿಭಾಗ ರಚನೆಗೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಈ ವೇಳೆ ಆಗ್ರಹಿಸಲಾಯಿತು. ಪಾಲಕ್ಕಾಡ್ ರೈಲ್ವೆ ವಿಭಾಗದ ಅಧೀನದಲ್ಲಿ ಮಂಗಳೂರು ಇರುವುದರಿಂದ ಆಡಳಿತಾತ್ಮಕ ವಿಳಂಬಗಳು ಉಂಟಾಗುತ್ತಿದ್ದು, ಕರಾವಳಿ ಭಾಗದ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಪ್ರಯಾಣಿಕರ ಅಗತ್ಯತೆಗಳಿಗೆ ಸಮರ್ಪಕ ಆದ್ಯತೆ ಸಿಗುತ್ತಿಲ್ಲ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಪ್ರತ್ಯೇಕ ಮಂಗಳೂರು ರೈಲ್ವೆ ವಿಭಾಗ ಸ್ಥಾಪನೆಯಾದರೆ ರೈಲ್ವೆ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ಸಿಗುವುದರ ಜೊತೆಗೆ ಪ್ರಯಾಣಿಕರ ಸೌಲಭ್ಯ, ಕಾರ್ಯಾಚರಣಾ ದಕ್ಷತೆ ಮತ್ತು ಹೊಸ ಯೋಜನೆಗಳ ಅನುಷ್ಠಾನ ಸುಗಮವಾಗಲಿದೆ ಎಂದು ನಿಯೋಗವು ಸಚಿವರಿಗೆ ತಿಳಿಸಿತು.

ಇದೇ ಸಂದರ್ಭದಲ್ಲಿ ಪಾಂಡೇಶ್ವರ ರೈಲ್ವೆ ಲೆವೆಲ್ ಕ್ರಾಸಿಂಗ್‌ನಿಂದ ಉಂಟಾಗುತ್ತಿರುವ ಭಾರಿ ಟ್ರಾಫಿಕ್ ದಟ್ಟಣೆ ಸಮಸ್ಯೆಯನ್ನು ಸಚಿವರ ಗಮನಕ್ಕೆ ತರಲಾಯಿತು. ಬಂದರ್ ಯಾರ್ಡ್‌ಗೆ ರೈಲು ಸಂಚಾರಕ್ಕಾಗಿ ದಿನದಲ್ಲಿ ಅನೇಕ ಬಾರಿ ಗೇಟ್ ಮುಚ್ಚಲಾಗುತ್ತಿರುವುದರಿಂದ ವಾಹನ ಸವಾರರು, ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ತುರ್ತು ಸೇವಾ ವಾಹನಗಳಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರವಾಗಿ ಮೇಲ್ಸೇತುವೆ ಅಥವಾ ಅಂಡರ್‌ಪಾಸ್ ನಿರ್ಮಾಣಕ್ಕೆ ಅನುಮೋದನೆ ನೀಡುವಂತೆ ಜೆಡಿಎಸ್ ಮುಖಂಡರು ಒತ್ತಾಯಿಸಿದರು. ಜೊತೆಗೆ, ಬೆಂಗಳೂರು-ಮಂಗಳೂರು ರೈಲ್ವೆ ಸಂಪರ್ಕದ ಸುಧಾರಣೆಯ ಅಗತ್ಯತೆಯನ್ನು ವಿವರಿಸಿದ ನಿಯೋಗವು, ಶಿರಾದಿ ಘಾಟ್ ವಿಭಾಗದಲ್ಲಿನ ತೀವ್ರ ತಿರುವುಗಳು ಹಾಗೂ ಏರುಪೇರುಗಳಿಂದ ರೈಲುಗಳ ವೇಗ ಕುಂಠಿತವಾಗುತ್ತಿದ್ದು ಪ್ರಯಾಣ ಸಮಯ ಹೆಚ್ಚುತ್ತಿದೆ ಎಂದು ತಿಳಿಸಿತು. ಹಾಸನ-ಮಂಗಳೂರು ರೈಲ್ವೆ ಮಾರ್ಗದಲ್ಲಿ ಸಂಪೂರ್ಣ ಡಬಲ್ ಟ್ರ್ಯಾಕ್ ಮತ್ತು ಪೂರ್ಣ ವಿದ್ಯುದೀಕರಣದ ಕೊರತೆಯಿಂದ ಹೆಚ್ಚುವರಿ ರೈಲು ಸೇವೆಗಳಿಗೆ ಅಡಚಣೆ ಉಂಟಾಗುತ್ತಿದೆ ಎಂದು ವಿವರಿಸಲಾಯಿತು.

ಬೆಂಗಳೂರು-ಮಂಗಳೂರು ನಡುವೆ ಇನ್ನಷ್ಟು ನೇರ, ವೇಗದ ಹಾಗೂ ಪ್ರಯಾಣಿಕ ಸ್ನೇಹಿ ಸಮಯದ ರೈಲು ಸೇವೆಗಳನ್ನು ಆರಂಭಿಸುವಂತೆ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಇತ್ತೀಚೆಗೆ ಆರಂಭವಾದ ಕೆಲವು ವೇಗದ ರೈಲು ಸೇವೆಗಳು ಮಂಗಳೂರಿಗೆ ಸಮರ್ಪಕವಾಗಿ ಸಂಪರ್ಕ ಕಲ್ಪಿಸದಿರುವುದು ಕರಾವಳಿ ಭಾಗದ ಜನರಲ್ಲಿ ನಿರಾಶೆ ಮೂಡಿಸಿದೆ ಎಂದು ನಿಯೋಗವು ತಿಳಿಸಿತು. ಈ ನಿಯೋಗದಲ್ಲಿ ರಾಜ್ಯ ಮೀನುಗಾರ ಘಟಕದ ಅಧ್ಯಕ್ಷ ರತ್ನಾಕರ್ ಸುವರ್ಣ, ಜಿಲ್ಲಾ ಕಾರ್ಯದರ್ಶಿ ವಸಂತ್ ಪೂಜಾರಿ, ಇಕ್ಬಾಲ್ ಅಹಮ್ಮದ್ ಮುಲ್ಕಿ, ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಯೋಗೀಶ್ ಶೆಟ್ಟಿ ಜೆಪ್ಪು, ಸೇವಾದಳದ ಮಾಜಿ ಅಧ್ಯಕ್ಷ ನಝೀರ್ ಸಾಮಾನಿಗೆ, ಯುವ ಘಟಕದ ಪ್ರಧಾನ ಕಾರ್ಯದರ್ಶಿ ಹಿತೇಶ್ ರೈ, ಯುವ ಮುಖಂಡರಾದ ಸುಷಾಂತ್, ಪ್ರಶಾಂತ್ ಭಟ್ ಕಡಬ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ