image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಂಗಳೂರಿನಲ್ಲಿ ಏಕಕಾಲಕ್ಕೆ ನಾಲ್ಕು ಅತ್ಯಾಧುನಿಕ ಸಭಾಂಗಣಗಳ ಉದ್ಘಾಟನೆ: ಸಾಮಾಜಿಕ ಸೌಹಾರ್ದತೆ ಮತ್ತು ಶಿಕ್ಷಣಕ್ಕೆ ಪಾಲೆಮಾರ್ ಕೊಡುಗೆ ಶ್ಲಾಘನೀಯ-ಜ| ಎಸ್. ಅಬ್ದುಲ್ ನಜೀರ್

ಮಂಗಳೂರಿನಲ್ಲಿ ಏಕಕಾಲಕ್ಕೆ ನಾಲ್ಕು ಅತ್ಯಾಧುನಿಕ ಸಭಾಂಗಣಗಳ ಉದ್ಘಾಟನೆ: ಸಾಮಾಜಿಕ ಸೌಹಾರ್ದತೆ ಮತ್ತು ಶಿಕ್ಷಣಕ್ಕೆ ಪಾಲೆಮಾರ್ ಕೊಡುಗೆ ಶ್ಲಾಘನೀಯ-ಜ| ಎಸ್. ಅಬ್ದುಲ್ ನಜೀರ್

ಮಂಗಳೂರು: ಕರಾವಳಿಯ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಮಾಜಿ ಸಚಿವ ಹಾಗೂ ವಿಕಾಸ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಕೃಷ್ಣ ಜೆ. ಪಾಲೆಮಾರ್ ಅವರ ನೇತೃತ್ವದಲ್ಲಿ ನಿರ್ಮಾಣಗೊಂಡಿರುವ ನಾಲ್ಕು ಅತ್ಯಾಧುನಿಕ ಸಭಾಭವನಗಳು ಶನಿವಾರ ನಗರದ ಮೇರಿಹಿಲ್‌ನಲ್ಲಿರುವ 'ಪಾಲೆಮಾರ್ ಕನ್ವೆನ್ಶನ್ ಸೆಂಟರ್'ನಲ್ಲಿ ಅದ್ಧೂರಿಯಾಗಿ ಲೋಕಾರ್ಪಣೆಗೊಂಡವು.

ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೇರಿಹಿಲ್‌ನ ಪಾಲೆಮಾರ್ ಕನ್ವೆನ್ಶನ್ ಸೆಂಟರ್, ಮೊರ್ಗನ್ಸ್ ಗೇಟ್‌ನ ಪಾಲೆಮಾರ್ ಗಾರ್ಡನ್, ಸುರತ್ಕಲ್‌ನ ಪಾಲೆಮಾರ್ ಫಾರ್ಮ್ಸ್ ಹಾಗೂ ಜೆಪ್ಪಿನಮೊಗರುವಿನ ನೇತ್ರಾವತಿ ಸಭಾಂಗಣಗಳನ್ನು ಏಕಕಾಲದಲ್ಲಿ ಉದ್ಘಾಟಿಸಿ ಮಾತನಾಡಿದ ಆಂಧ್ರಪ್ರದೇಶದ ರಾಜ್ಯಪಾಲ ಜ| ಎಸ್. ಅಬ್ದುಲ್ ನಜೀರ್ ಅವರು, ಈ ನೂತನ ಸಭಾಂಗಣಗಳು ಕೇವಲ ಮಂಗಳ ಕಾರ್ಯಕ್ರಮಗಳಿಗಷ್ಟೇ ಸೀಮಿತವಾಗದೆ, ಸಮುದಾಯದ ಶಿಕ್ಷಣ, ಸಂಸ್ಕೃತಿ, ಯುವಜನರ ಕೌಶಲ್ಯಾಭಿವೃದ್ಧಿ ಹಾಗೂ ಸಾಮಾಜಿಕ ಸೌಹಾರ್ದತೆಯ ಚಟುವಟಿಕೆಗಳ ಕೇಂದ್ರಗಳಾಗಿ ಬಳಕೆಯಾಗಲಿ ಎಂದು ಆಶಿಸಿದರು.

ಬಡತನ ನಿರ್ಮೂಲನೆಗೆ ಮತ್ತು ಮಾನವ ಸಂಪನ್ಮೂಲದ ಬೆಳವಣಿಗೆಗೆ ಶಿಕ್ಷಣವೇ ಪ್ರಮುಖ ಸಾಧನವಾಗಿದ್ದು, ಪಾಲೆಮಾರ್ ಅವರು ಶೈಕ್ಷಣಿಕ ಕ್ಷೇತ್ರದಲ್ಲಿ ಮಾಡುತ್ತಿರುವ ಸೇವೆ ಶ್ಲಾಘನೀಯ ಎಂದ ಅವರು, ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಜೀವನ ನಮಗೆಲ್ಲರಿಗೂ ಆದರ್ಶ ಎಂದರು.

ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಅವರು ಮಾತನಾಡಿ, ಒಬ್ಬ ವ್ಯಕ್ತಿ ತನ್ನ ಕಠಿಣ ಪರಿಶ್ರಮದಿಂದ ಗಳಿಸಿದ ಸಂಪತ್ತನ್ನು ಸಮಾಜದ ಏಳಿಗೆಗಾಗಿ ವಿನಿಯೋಗಿಸುತ್ತಿರುವುದು ಹೆಮ್ಮೆಯ ವಿಚಾರ. ನಾಲ್ಕು ಭವ್ಯ ಸಭಾಂಗಣಗಳನ್ನು ಕೊಡುಗೆಯಾಗಿ ನೀಡಿರುವ ಪಾಲೆಮಾರ್ ಅವರು ಸಮಾಜಕ್ಕೆ 'ಕೋಟಿಗೊಬ್ಬ' ನಾಯಕರಾಗಿದ್ದಾರೆ ಎಂದು ಪ್ರಶಂಸಿಸಿದರು.

ಇದೇ ಸಂದರ್ಭದಲ್ಲಿ ಕರಾವಳಿ ಜನತೆಗೆ ಮಹತ್ವದ ಸುದ್ದಿಯೊಂದನ್ನು ನೀಡಿದ ಸಚಿವರು, ಮುಂದಿನ ಒಂದು ತಿಂಗಳೊಳಗೆ ಬೆಂಗಳೂರು-ಮಂಗಳೂರು ನಡುವೆ ಬಹುನಿರೀಕ್ಷಿತ 'ವಂದೇ ಭಾರತ್' ರೈಲು ಸಂಚಾರ ಆರಂಭವಾಗಲಿದೆ ಎಂದು ಪ್ರಕಟಿಸಿದರು. ಕೊಂಕಣ ರೈಲ್ವೆಯು ದೇಶದ ಪ್ರಗತಿಯ ಇಂಜಿನ್ ಆಗಿದ್ದು, ಪ್ರಧಾನಮಂತ್ರಿಯವರು ಮಂಗಳೂರಿನ ಅಭಿವೃದ್ಧಿಯನ್ನು ಎಂದಿಗೂ ಕಡೆಗಣಿಸುವುದಿಲ್ಲ ಎಂದು ಭರವಸೆ ನೀಡಿದರು.

ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಮಾತನಾಡಿ, ಈ ಸಭಾಂಗಣಗಳು ಕರಾವಳಿಯ ಸೌಂದರ್ಯಕ್ಕೆ ಕಿರೀಟ ಪ್ರಾಯವಾಗಿದ್ದು, ಈ ಭಾಗದ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಗೆ ಪೂರಕವಾಗಿವೆ. ಎಲ್ಲರನ್ನೂ ಗೌರವದಿಂದ ಕಾಣುವ ಸ್ನೇಹಪರ ವ್ಯಕ್ತಿತ್ವದ ಪಾಲೆಮಾರ್ ಅವರು ಉತ್ತಮ ಭಾರತೀಯನಿಗೆ ಪ್ರಕಟ ರೂಪವಾಗಿದ್ದಾರೆ. ಅವರ ಶ್ರಮದಾಯಕ ಜೀವನದ ಹಾದಿ ಇತರರಿಗೆ ಮಾದರಿಯಾಗಿದ್ದು, ಅವರ ಆತ್ಮಕಥೆ ಶೀಘ್ರದಲ್ಲೇ ಬಿಡುಗಡೆಯಾಗಬೇಕು ಎಂದು ಆಶಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೃಷ್ಣ ಜೆ. ಪಾಲೆಮಾರ್ ಅವರು ಮಾತನಾಡಿ, ಸಾಮಾನ್ಯ ಜನರಿಗೂ ಕೈಗೆಟುಕುವ ದರದಲ್ಲಿ ಈ ಸಭಾಂಗಣಗಳನ್ನು ನಿರ್ಮಿಸಲಾಗಿದೆ. ಈ ಕೇಂದ್ರಗಳಿಂದ ಬರುವ ಆದಾಯದ ಸಿಂಹಪಾಲನ್ನು ವಿಕಾಸ ಎಜುಕೇಶನ್ ಟ್ರಸ್ಟ್ ಮೂಲಕ ಬಡ ವಿದ್ಯಾರ್ಥಿಗಳ ಶಿಕ್ಷಣ ಹಾಗೂ ಶೈಕ್ಷಣಿಕ ಪ್ರೋತ್ಸಾಹಕ್ಕಾಗಿ ವಿನಿಯೋಗಿಸಲಾಗುವುದು ಎಂದು ಪ್ರಕಟಿಸಿದರು.

ಸಮಾರಂಭದಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರುಗಳಾದ ಡಾ. ವೈ. ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹಾಗೂ ಟ್ರಸ್ಟಿಗಳಾದ ಜೆ.ಕೆ. ರಾವ್, ಕೊರಗಪ್ಪ, ಸೂರಜ್ ಕುಮಾರ್ ಕಲ್ಯ, ಜೆ. ಸಂತೋಷ್ ಪಾಲೆಮಾರ್, ಪ್ರದೀಪ್ ಪಾಲೆಮಾರ್ ಮತ್ತು ಪ್ರಸನ್ನ ಪಾಲೆಮಾರ್ ಉಪಸ್ಥಿತರಿದ್ದು ಅತಿಥಿಗಳನ್ನು ಸ್ವಾಗತಿಸಿದರು.

ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಇದೇ ವೇದಿಕೆಯಲ್ಲಿ ಸಾನಿಧ್ಯ ಸಂಸ್ಥೆ, ಸೇವಾಶ್ರಮದ ಗೀತಾ ಶೆಟ್ಟಿ, ಸಮಾಜ ಸೇವಕಿ ತಬುಸ್ಸಮ್, ವಿಶೇಷ ಚೇತನ ಕಲಾವಿದ ಕೌಶಿಕ್ ಆಚಾರ್ಯ, ಪ್ರತಿಭಾವಂತರಾದ ಮಹಾಲಕ್ಷ್ಮಿ ಪೈ, ಮಹಾಲಕ್ಷ್ಮಿ ಭಾರ್ಗವ್, ದೀಶಾ ಪೂಜಾರಿ ಹಾಗೂ ಸಭಾಂಗಣ ನಿರ್ಮಾಣದ ಇಂಜಿನಿಯರ್‌ಗಳಾದ ಪ್ರವೀಣ್ ಕುಮಾರ್ ಮತ್ತು ಕೊರಗಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

Category
ಕರಾವಳಿ ತರಂಗಿಣಿ