image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಆಸ್ಪತ್ರೆಗಳ ಖಾಸಗೀಕರಣ ನೀತಿ ವಿರೋಧಿಸಿ ಮೇ 26ರಂದು ಮಂಗಳೂರಿನಲ್ಲಿ ಸಿಪಿಐಎಂನಿಂದ ದುಂಡು ಮೇಜಿನ ಸಭೆ

ಆಸ್ಪತ್ರೆಗಳ ಖಾಸಗೀಕರಣ ನೀತಿ ವಿರೋಧಿಸಿ ಮೇ 26ರಂದು ಮಂಗಳೂರಿನಲ್ಲಿ ಸಿಪಿಐಎಂನಿಂದ ದುಂಡು ಮೇಜಿನ ಸಭೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳನ್ನು ಖಾಸಗಿ ವೈದ್ಯಕೀಯ ಕಾಲೇಜು ಹಾಗೂ ಕಾರ್ಪೊರೇಟ್ ಆರೋಗ್ಯ ಲಾಬಿಗಳ ವಶಕ್ಕೆ ಹಸ್ತಾಂತರಿಸಲು ಮುಂದಾಗಿರುವ ಸರ್ಕಾರದ ನೀತಿಯನ್ನು ವಿರೋಧಿಸಿ ಮತ್ತು ಮುಂದಿನ ಹೋರಾಟವನ್ನು ರೂಪಿಸಲು ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು ಮೇ 26ರಂದು ಸಂಜೆ 4 ಗಂಟೆಗೆ ನಗರದ ಸಹೋದಯ ಸಭಾಂಗಣದಲ್ಲಿ ದುಂಡು ಮೇಜಿನ ಸಭೆಯನ್ನು ಆಯೋಜಿಸಿದೆ.

ಜಿಲ್ಲಾ ಪ್ರವಾಸದಲ್ಲಿದ್ದ ಆರೋಗ್ಯ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹಾಗೂ ಸ್ಪೀಕರ್ ಯು.ಟಿ. ಖಾದರ್ ಅವರು ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳನ್ನು ಖಾಸಗಿ ಮೆಡಿಕಲ್ ಲಾಬಿಗಳಿಗೆ ಹಸ್ತಾಂತರಿಸುವುದನ್ನು ಸಮರ್ಥಿಸಿರುವುದು ಮತ್ತು ಇದರ ವಿರುದ್ಧ ನಡೆಯುತ್ತಿರುವ ಹೋರಾಟವನ್ನು ಕೆಟ್ಟದಾಗಿ ಚಿತ್ರಿಸಲು ಯತ್ನಿಸಿರುವುದನ್ನು ಸಿಪಿಐಎಂ ತೀವ್ರವಾಗಿ ಖಂಡಿಸಿದೆ. ಜನರ ಆರೋಗ್ಯ ರಕ್ಷಣೆಯ ಜವಾಬ್ದಾರಿಯಿಂದ ಸರ್ಕಾರ ನುಣುಚಿಕೊಳ್ಳುವುದು ಮತ್ತು ಖಾಸಗಿ ವೈದ್ಯಕೀಯ ಸಂಸ್ಥೆಗಳ ಏಕಸ್ವಾಮ್ಯಕ್ಕೆ ಅವಕಾಶ ಮಾಡಿಕೊಡುವುದನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಎಂದು ಸಮಿತಿ ಹೇಳಿದೆ. ಇಂತಹ ಜನವಿರೋಧಿ ತೀರ್ಮಾನವನ್ನು ಸಮರ್ಥಿಸುವುದು ಜನದ್ರೋಹಿ ರಾಜಕಾರಣವಾಗಿದ್ದು, ಜಿಲ್ಲೆಯ ಪ್ರಸ್ತುತ ರಾಜಕಾರಣವು ಖಾಸಗಿ ವೈದ್ಯಕೀಯ ಕಾಲೇಜುಗಳ ಲಾಬಿಗೆ ಪೂರ್ಣ ಶರಣಾಗಿದೆ ಎಂದು ಆರೋಪಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಆಯೋಜಿಸಲಾಗಿರುವ ದುಂಡು ಮೇಜಿನ ಸಭೆಯಲ್ಲಿ ಸರ್ಕಾರಿ ಆಸ್ಪತ್ರೆಗಳ ಬಲವರ್ಧನೆ, ಖಾಸಗಿ ಆರೋಗ್ಯ ಸಂಸ್ಥೆಗಳ ನಿಯಂತ್ರಣ ಹಾಗೂ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳ ಖಾಸಗೀಕರಣ ಆದೇಶ ರದ್ದತಿಗಾಗಿ ಹೋರಾಟವನ್ನು ಹಂತ ಹಂತವಾಗಿ ವಿಸ್ತರಿಸುವ ಕುರಿತು ಚರ್ಚಿಸಿ ತೀರ್ಮಾನಿಸಲಾಗುವುದು. ಈ ಸಭೆಯಲ್ಲಿ ಎಡಪಕ್ಷಗಳು, ರೈತ, ದಲಿತ, ಕಾರ್ಮಿಕ, ಯುವಜನ ಮತ್ತು ಮಹಿಳಾ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಬರಹಗಾರರು, ಚಿಂತಕರು ಭಾಗವಹಿಸಲಿದ್ದಾರೆ ಎಂದು ಸಿಪಿಐಎಂ ಜಿಲ್ಲಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

Category
ಕರಾವಳಿ ತರಂಗಿಣಿ