ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66 ರ ಬೈಕಂಪಾಡಿಯಿಂದ KIOCL ಜಂಕ್ಷನ್ ವರೆಗೆ ಒಟ್ಟು 414.16 ಕೋಟಿ ರೂಪಾಯಿ ವೆಚ್ಚದಲ್ಲಿ ಎಲಿವೇಟೆಡ್ ಫ್ಲೈಓವರ್ ಮತ್ತು ಸರ್ವಿಸ್ ರಸ್ತೆ ನಿರ್ಮಾಣದ ಬೃಹತ್ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಈ ಮಹತ್ವದ ಯೋಜನೆಯ ಅನುಷ್ಠಾನಕ್ಕಾಗಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ಈಗಾಗಲೇ ಟೆಂಡರ್ ಪ್ರಕ್ರಿಯೆಯನ್ನು ಆರಂಭಿಸಿದೆ ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ತಿಳಿಸಿದ್ದಾರೆ.
ನವ ಮಂಗಳೂರು ಬಂದರಿಗೆ (NMPT) ನೇರ ಸಂಪರ್ಕವನ್ನು ಸುಧಾರಿಸುವ ನಿಟ್ಟಿನಲ್ಲಿ ಒಟ್ಟು 3.075 ಕಿಲೋ ಮೀಟರ್ ಉದ್ದದ ರಸ್ತೆ ಅಭಿವೃದ್ಧಿ ಕಾಮಗಾರಿ ಇದಾಗಿದ್ದು, ಈ ಪೈಕಿ 1.520 ಕಿಲೋ ಮೀಟರ್ ಉದ್ದದ ಅತ್ಯಾಧುನಿಕ 6 ಪಥದ ಎಲಿವೇಟೆಡ್ ಫ್ಲೈಓವರ್ ನಿರ್ಮಾಣಗೊಳ್ಳಲಿದೆ. ಇಪಿಸಿ (EPC) ಮಾದರಿಯಲ್ಲಿ ಅನುಷ್ಠಾನಗೊಳ್ಳಲಿರುವ ಈ ಯೋಜನೆಯಡಿ ಹೆದ್ದಾರಿಯ ಇಕ್ಕೆಲಗಳಲ್ಲಿ ಒಟ್ಟು 5.825 ಕಿಲೋ ಮೀಟರ್ ಉದ್ದದ ಸರ್ವಿಸ್ ರಸ್ತೆಯನ್ನು ನಿರ್ಮಿಸಲಾಗುತ್ತದೆ. ಈ ಯೋಜನೆಯ ಯಶಸ್ವಿ ಅನುಷ್ಠಾನಕ್ಕಾಗಿ ನವ ಮಂಗಳೂರು ಬಂದರು ಪ್ರಾಧಿಕಾರವು ಅಗತ್ಯವಿರುವ ಹೆಚ್ಚುವರಿ ಭೂಮಿ ಹಾಗೂ ಆರ್ಥಿಕ ಧನಸಹಾಯವನ್ನು ಹೆದ್ದಾರಿ ಪ್ರಾಧಿಕಾರಕ್ಕೆ ಒದಗಿಸಲಿದೆ.
ರಾಷ್ಟ್ರೀಯ ಹೆದ್ದಾರಿ 66ರ ಈ ಭಾಗವು ನವ ಮಂಗಳೂರು ಬಂದರಿಗೆ ನೇರ ಸಂಪರ್ಕ ಕಲ್ಪಿಸುವಲ್ಲಿ ಹಾಗೂ ರಫ್ತು-ಆಮದು ಸರಕುಗಳ ಸಾಗಣೆಗೆ ಅತ್ಯಂತ ನಿರ್ಣಾಯಕ ಕಾರಿಡಾರ್ ಆಗಿ ಕಾರ್ಯನಿರ್ವಹಿಸುತ್ತಿದೆ. ಈ ನೂತನ ಯೋಜನೆಯು ಹೆದ್ದಾರಿ ಸಂಚಾರ ಹಾಗೂ ಸ್ಥಳೀಯ ವಾಹನಗಳ ನಡುವಿನ ಓಡಾಟವನ್ನು ಪ್ರತ್ಯೇಕಿಸಿ, ಸುಗಮ ಸಂಚಾರಕ್ಕೆ ದಾರಿ ಮಾಡಿಕೊಡುವುದರ ಜೊತೆಗೆ ರಸ್ತೆ ಸುರಕ್ಷತೆಯನ್ನು ಖಾತ್ರಿಪಡಿಸಲಿದೆ. ಬೈಕಂಪಾಡಿ ಕೈಗಾರಿಕಾ ಪ್ರದೇಶ ಮತ್ತು KIOCL ವಲಯದ ರಸ್ತೆ ಅಭಿವೃದ್ಧಿಯು ಜಿಲ್ಲೆಯ ಕೈಗಾರಿಕಾ ಮತ್ತು ಆರ್ಥಿಕ ಬೆಳವಣಿಗೆಗೆ ಪ್ರಮುಖ ಪ್ರೇರಕ ಶಕ್ತಿಯಾಗಲಿದ್ದು, ಭವಿಷ್ಯದ ವಾಹನ ದಟ್ಟಣೆಯ ಅಗತ್ಯತೆಗಳನ್ನು ಪೂರೈಸಲು ಸಹಕಾರಿಯಾಗಲಿದೆ.
ಈ ಹಿಂದೆ ಎನ್‌ಎಂಪಿಟಿ ಭಾಗದ ಈ ರಸ್ತೆಯು 'ರಾಷ್ಟ್ರೀಯ ಹೆದ್ದಾರಿ ಸರಕು ಸಾಗಣೆ ನಿರ್ವಹಣೆ ಲಿಮಿಟೆಡ್' ವ್ಯಾಪ್ತಿಯಲ್ಲಿದ್ದು, ನಿರ್ದಿಷ್ಟ ಏಜೆನ್ಸಿ ಇಲ್ಲದಿರುವುದು ಹಾಗೂ ನಿಧಿಯ ಕೊರತೆಯಿಂದಾಗಿ ಹೆದ್ದಾರಿ ಅಭಿವೃದ್ಧಿಗೆ ತೀವ್ರ ತಾಂತ್ರಿಕ ಸವಾಲುಗಳು ಎದುರಾಗಿದ್ದವು. ಈ ಬಗ್ಗೆ ಸತತ ಪ್ರಯತ್ನ ನಡೆಸಿ, ಎದುರಾಗಿದ್ದ ಎಲ್ಲಾ ಅಡಚಣೆಗಳನ್ನು ಬಗೆಹರಿಸಿ ಪೋರ್ಟ್ ವ್ಯಾಪ್ತಿಯ ರಸ್ತೆಯನ್ನು ಸಂಪೂರ್ಣವಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರಿಸುವಲ್ಲಿ ಸಂಸದರು ಯಶಸ್ವಿಯಾಗಿದ್ದರು. ಇದರ ಮುಂದುವರಿದ ಭಾಗವಾಗಿ, ಬೈಕಂಪಾಡಿ ಮತ್ತು ಕೂಳೂರು ಜಂಕ್ಷನ್ ಬಳಿ ಈಗಾಗಲೇ 11.63 ಕೋಟಿ ರೂಪಾಯಿ ವೆಚ್ಚದ ಅಂಡರ್‌ಪಾಸ್ ನಿರ್ಮಾಣ ಯೋಜನೆಗೆ ಅನುಮೋದನೆ ದೊರೆತು ಪ್ರಕ್ರಿಯೆ ಚಾಲ್ತಿಯಲ್ಲಿದೆ.
ಇದೀಗ 414.16 ಕೋಟಿ ರೂಪಾಯಿ ವೆಚ್ಚದ ಫ್ಲೈಓವರ್‌ಗೂ ಹಸಿರು ನಿಶಾನೆ ಸಿಕ್ಕಿರುವುದರಿಂದ ಬಂದರು ವ್ಯಾಪ್ತಿಯ ಹೆದ್ದಾರಿ ವಲಯ ಸಂಪೂರ್ಣವಾಗಿ ಅತ್ಯಾಧುನಿಕ ಮಟ್ಟಕ್ಕೆ ಮೇಲ್ದರ್ಜೆಗೇರಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಹೆದ್ದಾರಿಗಳ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕೆ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿರುವ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು, ಕರಾವಳಿ ಭಾಗದ ಆರ್ಥಿಕ ನಾಡಿಮಿಡಿತವಾಗಿರುವ ಈ ರಸ್ತೆಯ ಮೇಲ್ದರ್ಜೆಗೇರಿಸಲು ಅನುಮೋದನೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಸರ್ಬಾನಂದ ಸೋನೋವಾಲ್ ಹಾಗೂ ನವ ಮಂಗಳೂರು ಬಂದರು ಪ್ರಾಧಿಕಾರಕ್ಕೆ ಜಿಲ್ಲೆಯ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.