image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪುನೀತ್ ಹೃದಯ ಜ್ಯೋತಿ ಯೋಜನೆ ಶೀಘ್ರದಲ್ಲೇ ರಾಜ್ಯದ ಎಲ್ಲಾ ತಾಲೂಕುಗಳಿಗೂ ವಿಸ್ತರಣೆ: ಸಚಿವ ದಿನೇಶ್ ಗುಂಡೂರಾವ್

ಪುನೀತ್ ಹೃದಯ ಜ್ಯೋತಿ ಯೋಜನೆ ಶೀಘ್ರದಲ್ಲೇ ರಾಜ್ಯದ ಎಲ್ಲಾ ತಾಲೂಕುಗಳಿಗೂ ವಿಸ್ತರಣೆ: ಸಚಿವ ದಿನೇಶ್ ಗುಂಡೂರಾವ್

ಮಂಗಳೂರು: ರಾಜ್ಯದಲ್ಲಿ ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥ ಅನುಷ್ಠಾನಗೊಳಿಸಿರುವ ‘ಪುನೀತ್ ಹೃದಯ ಜ್ಯೋತಿ’ ಯೋಜನೆಯನ್ನು ಶೀಘ್ರದಲ್ಲೇ ರಾಜ್ಯದ ಎಲ್ಲಾ ತಾಲೂಕುಗಳಿಗೂ ವಿಸ್ತರಣೆ ಮಾಡಲಾಗುವುದು ಎಂದು ರಾಜ್ಯ ಆರೋಗ್ಯ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ದಿನೇಶ್ ಗುಂಡೂರಾವ್ ಅವರು ತಿಳಿಸಿದ್ದಾರೆ. ನಗರದ ಕುದ್ದುಲ್ ರಂಗರಾವ್ ಪುರಭವನದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಆರೋಗ್ಯ ಇಲಾಖೆಯ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಹಠಾತ್ ಹೃದಯಾಘಾತದ ನಂತರದ ನಿರ್ಣಾಯಕ ಅವಧಿಯಲ್ಲಿ ತ್ವರಿತ ಚಿಕಿತ್ಸೆ ಒದಗಿಸುವ ಉದ್ದೇಶದಿಂದ ಜಾರಿಗೆ ಬಂದಿರುವ ಈ ಯೋಜನೆಯಡಿ ನೀಡಲಾಗುವ ‘ಟೆನೆಕ್ಟೆಪ್ಲೇಸ್’ (Tenecteplase) ಎಂಬ ದುಬಾರಿ ಇಂಜೆಕ್ಷನ್ ಅನ್ನು ಸರ್ಕಾರದಿಂದ ಉಚಿತವಾಗಿ ನೀಡುವ ಜೊತೆಗೆ ಅಗತ್ಯ ಶಸ್ತ್ರಚಿಕಿತ್ಸೆ ಹಾಗೂ ಇತರ ಚಿಕಿತ್ಸೆಯನ್ನು ಒದಗಿಸಲಾಗುತ್ತಿದೆ ಎಂದು ಅವರು ವಿವರಿಸಿದರು. ಸದ್ಯ ರಾಜ್ಯದಲ್ಲಿ ಒಟ್ಟು 78 ಪುನೀತ್ ಹೃದಯ ಜ್ಯೋತಿ ಕೇಂದ್ರಗಳು ರೋಗಿಗಳ ಜೀವ ರಕ್ಷಕವಾಗಿ ಕಾರ್ಯನಿರ್ವಹಿಸುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಮೂರು ಕೇಂದ್ರಗಳ ಮೂಲಕ ಈ ವರ್ಷ ಒಟ್ಟು 450 ಜೀವ ಉಳಿಸುವ ಮಹತ್ತರ ಕಾರ್ಯವಾಗಿದೆ ಎಂದು ಅವರು ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಸಂತ್ರಸ್ತರಿಗೆ ಸೇವೆ ನೀಡಲು ಸದ್ಯ ಎರಡು ಪಾಲನಾ ಕೇಂದ್ರಗಳಿದ್ದು, ಕಳೆದ ಆರು ವರ್ಷಗಳಿಂದ ಕೇಳಿಬರುತ್ತಿದ್ದ ಹೆಚ್ಚುವರಿ ಪಾಲನಾ ಕೇಂದ್ರಗಳ ಬೇಡಿಕೆಯಂತೆ ಸರ್ಕಾರವು 4 ಹೊಸ ಪಾಲನಾ ಕೇಂದ್ರಗಳನ್ನು ಮಂಜೂರು ಮಾಡಿದೆ. ಪುತ್ತೂರು ತಾಲೂಕಿನ ಪಾಣಾಜೆ, ಬೆಳ್ತಂಗಡಿಯ ಕಣಿಯೂರು, ಬಂಟ್ವಾಳದ ವಿಟ್ಲ ಹಾಗೂ ಸುಳ್ಯದ ಬೆಳ್ಳಾರೆಯಲ್ಲಿ ಇವುಗಳನ್ನು ಮಂಜೂರು ಮಾಡಲಾಗಿದ್ದು, 2026-27ನೇ ಸಾಲಿಗೆ ಈ ಹೊಸ ನಾಲ್ಕು ಪಾಲನಾ ಕೇಂದ್ರಗಳ ನಿರ್ವಹಣೆಗೆ ಸರ್ಕಾರವು 1.26 ಕೋಟಿ ರೂಪಾಯಿ ಅನುದಾನವನ್ನು ಮೀಸಲಿಟ್ಟಿದೆ. ಜೂನ್ 1ರಿಂದ ಈ ಕೇಂದ್ರಗಳು ಕಾರ್ಯಾರಂಭ ಮಾಡಲಿವೆ ಎಂದು ಸಚಿವರು ಪ್ರಕಟಿಸಿದರು.

ಗ್ರಾಮೀಣ ಮಟ್ಟದ ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ಮತ್ತು ನುರಿತ ತಜ್ಞ ವೈದ್ಯರ ಸೇವೆಯನ್ನು ಉಚಿತವಾಗಿ ಒದಗಿಸುವ ಉದ್ದೇಶದಿಂದ ತಾಲೂಕು ಆಸ್ಪತ್ರೆ ಬಂಟ್ವಾಳವನ್ನು ಎಜೆ ವೈದ್ಯಕೀಯ ಕಾಲೇಜಿನೊಂದಿಗೆ, ಸಮುದಾಯ ಆರೋಗ್ಯ ಕೇಂದ್ರ ಮೂಡಬಿದ್ರೆಯನ್ನು ಆಳ್ವಾಸ್ ವೈದ್ಯಕೀಯ ಕಾಲೇಜಿನ ಜೊತೆಗೆ ಹಾಗೂ ಸಮುದಾಯ ಆರೋಗ್ಯ ಕೇಂದ್ರ ವಿಟ್ಲವನ್ನು ಯೆನೆಪೋಯ ವೈದ್ಯಕೀಯ ಕಾಲೇಜಿನ ಜೊತೆ ಒಡಂಬಡಿಕೆ ಮಾಡಲಾಗಿದೆ. ಖಾಸಗಿ ಆಸ್ಪತ್ರೆಗಳ ಜೊತೆ ಒಡಂಬಡಿಕೆಯಾದ ನಂತರ ಬಂಟ್ವಾಳದಲ್ಲಿ ಉಚಿತವಾಗಿ ಎರಡು ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಗಿದ್ದು, ಇದರಿಂದ ಬಡ ರೋಗಿಗಳಿಗೆ ತುಂಬಾ ಅನುಕೂಲವಾಗುತ್ತದೆ. ಜನರಿಗೆ ಯಾವ ರೀತಿಯಲ್ಲೂ ತೊಂದರೆ ಇಲ್ಲದಿದ್ದಾಗ ಯಾವ ವಿಷಯಕ್ಕೆ ಕೆಲವರು ಈ ಬಗ್ಗೆ ವಿರೋಧ, ಟೀಕೆ ಮಾಡುತ್ತಿದ್ದಾರೋ ಅರ್ಥವಾಗುತ್ತಿಲ್ಲ. ಮಾಹಿತಿ ಕೊರತೆ ಇದ್ದಲ್ಲಿ ಬಂದು ಚರ್ಚಿಸಿ ಎಂದು ಇದೇ ವೇಳೆ ಟೀಕಾಕಾರರಿಗೆ ಸಚಿವರು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ವಿದ್ಯುತ್ ಸರಬರಾಜು ಕಂಪನಿಯ ಅಧ್ಯಕ್ಷ ಕೆ. ಹರೀಶ್ ಕುಮಾರ್, ರಾಜ್ಯ ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಾಹಿದ್ ತೆಕಿಲ್, ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣದ ಸಂಸ್ಥೆ ಅಧ್ಯಕ್ಷೆ ಲಾವಣ್ಯ ಬಲ್ಲಾಳ್ ಜೈನ್, ಮೂಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಅಧ್ಯಕ್ಷೆ ಶಾಲೆಟ್ ಲವೀನಾ ಪಿಂಟೋ, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್. ಗಟ್ಟಿ, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಆಲ್ವಾರಿಸ್, ಕರ್ನಾಟಕ ಗಾಣಿಗ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ಲೇಡಿಗೋಷನ್ ಆಸ್ಪತ್ರೆಯ ಅಧೀಕ್ಷಕ ಡಾ. ದುರ್ಗಾಪ್ರಸಾದ್, ಎಂಆರ್‌ಪಿಎಲ್‌ನ ಪ್ರಕಾಶ್ ಶಂಕರ್, ಪ್ರಶಾಂತ್ ಬಾಳಿಗಾ ಮತ್ತು ಕೆಎಂಸಿ ಡೀನ್ ಉನ್ನಿಕೃಷ್ಣನ್ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ