image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಜೋಕಟ್ಟೆ ನಾಗರಿಕರ ಧರಣಿ : ಶಾಸಕ ಉಮಾನಾಥ ಕೋಟ್ಯಾನ್ ತರಾಟೆಗೆ ತೆಗೆದುಕೊಂಡ ಪ್ರತಿಭಟನಾಕಾರರು

ಜೋಕಟ್ಟೆ ನಾಗರಿಕರ ಧರಣಿ : ಶಾಸಕ ಉಮಾನಾಥ ಕೋಟ್ಯಾನ್ ತರಾಟೆಗೆ ತೆಗೆದುಕೊಂಡ ಪ್ರತಿಭಟನಾಕಾರರು

ಸುರತ್ಕಲ್ : ಸುರತ್ಕಲ್‌ನ ಎಂಆರ್‌ಪಿಎಲ್ ಕೋಕ್ ಸಲ್ಫರ್ ಘಟಕದಿಂದ ಗಂಭೀರ ಮಾಲಿನ್ಯ ಸಮಸ್ಯೆಯನ್ನು ಎದುರಿಸುತ್ತಿರುವ ಜನವಸತಿ ಪ್ರದೇಶದಲ್ಲಿ ಹಸಿರು ವಲಯ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ಮತ್ತು ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ಕಾರ್ಯವನ್ನು ಶೀಘ್ರದಲ್ಲಿ ನಡೆಸಬೇಕೆಂದು ಆಗ್ರಹಿಸಿ ಜೋಕಟ್ಟೆ, ಕೆಂಜಾರು, ಕಳವಾರು ಗ್ರಾಮಸ್ಥರು ಎಂಆರ್‌ಪಿಎಲ್ ಕೋಕ್ ಸಲ್ಫರ್ ಘಟಕದ ಮುಂಭಾಗ ನಡೆಸುತ್ತಿರುವ ಹಗಲು ರಾತ್ರಿ ಧರಣಿಯು ಯಶಸ್ವಿಯಾಗಿ 4ನೇ ದಿನಕ್ಕೆ ಕಾಲಿಟ್ಟಿದೆ.

ಮೂಲ್ಕಿ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಅವರು ಧರಣಿ ಮಂಟಪಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ ಮಾತನಾಡಿದ ಶಾಸಕರು, ಮುಂಬರುವ ಸೋಮವಾರದಂದು ಜಿಲ್ಲಾಧಿಕಾರಿಗಳು, ಎಂಆರ್‌ಪಿಎಲ್ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಹೋರಾಟ ಸಮಿತಿಯ ಮುಖಂಡರೊಂದಿಗೆ ವಿಶೇಷ ಸಭೆ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. ಈ ಸಭೆಯಲ್ಲಿ ಸಮಸ್ಯೆಯ ಕುರಿತು ಸುದೀರ್ಘವಾಗಿ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು, ಆದ್ದರಿಂದ ತಕ್ಷಣದಿಂದಲೇ ಈ ಧರಣಿಯನ್ನು ಹಿಂಪಡೆಯಬೇಕೆಂದು ಅವರು ಮನವಿ ಮಾಡಿದರು.

ಆದರೆ ಶಾಸಕರ ಈ ಮಾತಿಗೆ ತೀವ್ರವಾಗಿ ಪ್ರತಿಕ್ರಿಯಿಸಿದ ಧರಣಿ ನಿರತರು, ಈವರೆಗೆ ಹಲವು ಬಾರಿ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಇಂತಹ ಸಭೆಗಳನ್ನು ನಡೆಸಲಾಗಿದ್ದರೂ ಪ್ರತಿ ಬಾರಿಯೂ ನಮಗೆ ಕೇವಲ ಭರವಸೆಯನ್ನಷ್ಟೇ ನೀಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದುವರೆಗೆ ನೀಡಿರುವ ಯಾವುದೇ ಒಂದು ಭರವಸೆಯನ್ನು ಈಡೇರಿಸುವ ಬಗ್ಗೆ ಜನಪ್ರತಿನಿಧಿಗಳಾಗಲಿ ಅಥವಾ ಜಿಲ್ಲಾಡಳಿತವಾಗಲಿ ಕನಿಷ್ಠ ಪ್ರಯತ್ನವನ್ನೂ ಮಾಡಿಲ್ಲ. ಹಾಗಾಗಿ ಯಾವುದೇ ಕಾರಣಕ್ಕೂ ನಮಗೆ ಇನ್ನು ಮುಂದೆ ಬರೀ ಭರವಸೆಗಳನ್ನು ನೀಡುವುದು ಬೇಡ ಹಾಗೂ ಆ ಭರವಸೆಯನ್ನು ಒಪ್ಪಿಕೊಂಡು ಯಾವುದೇ ಕಾರಣಕ್ಕೂ ಧರಣಿ ನಿಲ್ಲಿಸುವುದಿಲ್ಲ ಎಂದು ಶಾಸಕ ಉಮಾನಾಥ ಕೋಟ್ಯಾನ್ ಅವರನ್ನು ತರಾಟೆಗೆ ತೆಗೆದುಕೊಂಡರು.

ಜೋಕಟ್ಟೆ ನಾಗರಿಕ ಹೋರಾಟ ಸಮಿತಿ ನಡೆಸುತ್ತಿರುವ ಈ ಅಹೋರಾತ್ರಿ ಧರಣಿಗೆ ಸಂತ್ರಸ್ತ ಮಹಿಳೆಯರು ಧರಣಿ ಮಂಟಪದಲ್ಲೇ ಬೀಡುಬಿಡುವ ಮೂಲಕ ತಮ್ಮ ಪೂರ್ಣ ಬೆಂಬಲವನ್ನು ಸೂಚಿಸಿದ್ದಾರೆ. ಈ ಸಂದರ್ಭದಲ್ಲಿ ಜೋಕಟ್ಟೆ ನಾಗರಿಕ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ಜೋಕಟ್ಟೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಬಾವಾ ಸೇರಿದಂತೆ ಹೋರಾಟ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಜೋಕಟ್ಟೆ, ಕೆಂಜಾರು, ಕಳವಾರು ಭಾಗದ ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ