image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ನೇತ್ರಾವತಿ ನದಿ ತೀರದಲ್ಲಿ ಎಸ್‌ಐಟಿ ಮತ್ತು ಎಫ್‌ಎಸ್‌ಎಲ್ ತಂಡದಿಂದ ಮಹಜರು ಪ್ರಕ್ರಿಯೆ ಪುನರಾವರ್ತನೆ

ನೇತ್ರಾವತಿ ನದಿ ತೀರದಲ್ಲಿ ಎಸ್‌ಐಟಿ ಮತ್ತು ಎಫ್‌ಎಸ್‌ಎಲ್ ತಂಡದಿಂದ ಮಹಜರು ಪ್ರಕ್ರಿಯೆ ಪುನರಾವರ್ತನೆ

ಬೆಳ್ತಂಗಡಿ: ಧರ್ಮಸ್ಥಳದ ಬಹುಚರ್ಚಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದರಲ್ಲಿ, ತನಿಖೆ ನಡೆಸುತ್ತಿರುವ ಎಸ್‌ಐಟಿ (ವಿಶೇಷ ತನಿಖಾ ತಂಡ) ಅಧಿಕಾರಿಗಳು ಧರ್ಮಸ್ಥಳದ ನೇತ್ರಾವತಿ ನದಿಯ ಬಂಗೇರಗುಡ್ಡೆಯಲ್ಲಿ ಮತ್ತೆ ಕಾರ್ಯಾಚರಣೆಗೆ ಇಳಿದಿದ್ದಾರೆ. ಪ್ರಕರಣದಲ್ಲಿ ಸಾಕ್ಷಿ ಹಾಗೂ ದೂರುದಾರರಾಗಿ ಗುರುತಿಸಿಕೊಂಡಿರುವ ಚಿನ್ನಯ್ಯ ಅವರು ಆರಂಭದಲ್ಲಿ ನ್ಯಾಯಾಲಯಕ್ಕೆ ತಂದಿದ್ದ ಮಾನವನ ತಲೆಬುರುಡೆಯನ್ನು ಬಂಗೇರಗುಡ್ಡೆಯಲ್ಲಿ ಪತ್ತೆಹಚ್ಚಲಾಗಿತ್ತು ಎನ್ನಲಾದ ಸ್ಥಳಕ್ಕೆ ಅಧಿಕಾರಿಗಳ ತಂಡ ಭೇಟಿ ನೀಡಿದೆ. ಈ ಹಿಂದೆ ಈ ತಲೆಬುರುಡೆಯನ್ನು ತೆಗೆದು ಅದರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ತನಿಖೆ ಚುರುಕುಗೊಂಡಿದೆ.

​ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ನೇತ್ರಾವತಿ ಬಂಗೇರಗುಡ್ಡೆಯಲ್ಲಿ ಸೌಜನ್ಯಾಳ ಮಾವ ವಿಠಲ ಗೌಡ ಮತ್ತು ಬಂಟ್ವಾಳ ನಿವಾಸಿ ಪ್ರದೀಪ್ ಕುಲಾಲ್ ಎಂಬುವರು ತಲೆಬುರುಡೆ ತೆಗೆದ ಸ್ಥಳದಲ್ಲಿ ವಿಡಿಯೋ ಮಾಡಿ ವೈರಲ್ ಮಾಡಿದ್ದ ಘಟನೆಯ ಮರುಸೃಷ್ಟಿಗಾಗಿ (ಕ್ರೈಂ ಸೀನ್ ರಿಕನ್ಸ್ಟ್ರಕ್ಷನ್) ಈ ವಿಶೇಷ ಕಾರ್ಯಾಚರಣೆ ನಡೆಸಲಾಯಿತು. ಈ ಸ್ಥಳವನ್ನು ಖಚಿತಪಡಿಸಿಕೊಂಡು ಎಸ್‌ಐಟಿಗೆ ವರದಿ ನೀಡಲು ಬೆಂಗಳೂರಿನಿಂದ ಆಗಮಿಸಿದ ವಿಧಿವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ತಜ್ಞರು ಮತ್ತು ಸೋಕೋ (SOCO) ತಂಡದವರ ಜೊತೆಗೂಡಿ ಎಸ್‌ಐಟಿ ಅಧಿಕಾರಿಗಳು ಮೇ 21ರಂದು ಅಪರಾಹ್ನ 2:40ಕ್ಕೆ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈ ಪ್ರಕರಣದ ಪ್ರಮುಖ ಸಾಕ್ಷಿಯಾಗಿರುವ ಪ್ರದೀಪ್ ಕುಲಾಲ್‌ನನ್ನು ತನಿಖಾ ತಂಡವು ಸ್ಥಳಕ್ಕೆ ಕರೆದುಕೊಂಡು ಬಂದು ಮಹಜರು ಕಾರ್ಯವನ್ನು ಆರಂಭಿಸಿದೆ. ಆರಂಭದಲ್ಲಿ ನಡೆಸಲಾಗಿದ್ದ ಮಹಜರು ಪ್ರಕ್ರಿಯೆಯು ಸಮರ್ಪಕವಾಗಿ ನಡೆದಿಲ್ಲ ಎಂಬ ಕಾರಣಕ್ಕೆ, ಇದೀಗ ಮತ್ತೊಮ್ಮೆ ಅತ್ಯಂತ ಸೂಕ್ಷ್ಮವಾಗಿ ಹಾಗೂ ವೈಜ್ಞಾನಿಕವಾಗಿ ಮಹಜರು ಪ್ರಕ್ರಿಯೆಯನ್ನು ನಡೆಸಲಾಗುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

Category
ಕರಾವಳಿ ತರಂಗಿಣಿ