ಮಂಗಳೂರು : ನಗರದ ನಾಲ್ಕು ಪ್ರಮುಖ ಸ್ಥಳಗಳಲ್ಲಿ ಏಕಕಾಲಕ್ಕೆ ನಾಲ್ಕು ಅತ್ಯಾಧುನಿಕ ಅದ್ದೂರಿ ಸಭಾಭವನಗಳ ಲೋಕಾರ್ಪಣೆ ಗೊಳ್ಳಲಿದೆ ಎಂದು ಮಾಜಿ ಸಚಿವ ಹಾಗೂ ವಿಕಾಸ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷ ಕೃಷ್ಣ ಜೆ ಪಾಲೆಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಲ್ಯಾಂಡ್ ಲಿಂಕ್ಸ್ ಸಂಸ್ಥೆಯ 45 ವರ್ಷಗಳ ಯಶಸ್ವಿ ಹಾದಿಯ ಸವಿನೆನಪಿಗಾಗಿ ಕರಾವಳಿ ಜನತೆಗೆ ವಿಶಿಷ್ಟ ಕೊಡುಗೆಯಾಗಿ ಈ ಸಭಾಂಗಣಗಳನ್ನು ನಿರ್ಮಿಸಲಾಗಿದೆ. ಕರಾವಳಿ ಭಾಗದಲ್ಲಿ ಕಳೆದ 45 ವರ್ಷಗಳಿಂದ ಪ್ರಾಮಾಣಿಕ ಉದ್ಯಮದ ಮೂಲಕ ಲಕ್ಷಾಂತರ ಜನರ ನಂಬಿಕೆ ಗಳಿಸಿರುವ ಲ್ಯಾಂಡ್ ಲಿಂಕ್ಸ್ ಸಂಸ್ಥೆಯು, ಪ್ರಥಮ ಬಾರಿಗೆ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ಈ ಭವ್ಯ ಸಭಾಭವನಗಳನ್ನು ಸಾರ್ವಜನಿಕರಿಗೆ ಮುಕ್ತಗೊಳಿಸುತ್ತಿದೆ ಎಂದರು.
ಈ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವದ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಂಧ್ರ ಪ್ರದೇಶದ ಗೌರವಾನ್ವಿತ ರಾಜ್ಯಪಾಲರಾದ ಜ| ಎಸ್. ಅಬ್ದುಲ್ ನಜೀರ್ ಅವರು ಆಗಮಿಸಿ, ನಾಲ್ಕೂ ಸಭಾಂಗಣಗಳನ್ನು ಅಧಿಕೃತವಾಗಿ ಲೋಕಾರ್ಪಣೆ ಮಾಡಲಿದ್ದಾರೆ. ಈ ಮಹಾ ಲೋಕಾರ್ಪಣಾ ಸಮಾರಂಭವು ಮೇ 23ರಂದು ಬೆಳಿಗ್ಗೆ 10 ಗಂಟೆಗೆ ಮಂಗಳೂರಿನ ಮೇರಿಹಿಲ್‌ನಲ್ಲಿರುವ ಪಾಲೆಮಾರ್ ಕನ್ವೆನ್ಸನ್ ಸೆಂಟರ್ ನಲ್ಲಿ ಅತ್ಯಂತ ವೈಭವದಿಂದ ಜರುಗಲಿದೆ. ಕಾರ್ಯಕ್ರಮದಲ್ಲಿ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವರಾದ ವಿ. ಸೋಮಣ್ಣ, ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಯು. ಟಿ. ಖಾದರ್, ಸಂಸದ ಬ್ರಿಜೇಶ್ ಚೌಟ, ಶಾಸಕರುಗಳಾದ ಡಾ. ವೈ. ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಉಮಾನಾಥ ಕೋಟ್ಯಾನ್ ಮತ್ತು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಸೇರಿದಂತೆ ಕರಾವಳಿ ಹಾಗೂ ರಾಜ್ಯ ಮಟ್ಟದ ಹಲವಾರು ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ.
ಲೋಕಾರ್ಪಣೆಗೊಳ್ಳಲಿರುವ ಸಭಾಭವನಗಳಲ್ಲಿ ಮೊದಲನೆಯದಾದ ಮೇರಿಹಿಲ್‌ನ 'ಪಾಲೆಮಾರ್ ಕನ್ವೆನ್ಸನ್ ಸೆಂಟರ್' ಅದ್ದೂರಿತನ ಮತ್ತು ಸಾಂಪ್ರದಾಯಿಕತೆಯ ಅದ್ಭುತ ಸಮ್ಮಿಲನವಾಗಿದ್ದು, ಮರದ ಕರಕುಶಲತೆಯ ಭವ್ಯ ಒಳಾಂಗಣ ವಿನ್ಯಾಸದೊಂದಿಗೆ ಸಾಂಪ್ರದಾಯಿಕ ಹಾಗೂ ಕಾರ್ಪೊರೇಟ್ ಕಾರ್ಯಕ್ರಮಗಳಿಗೆ ಸೂಕ್ತವಾಗಿದೆ. ಎರಡನೆಯದಾದ ಮೊರ್ಗನ್ಸ್ ಗೇಟ್‌ನ 'ಪಾಲೆಮಾರ್ ಗಾರ್ಡನ್' ಸುಂದರ ಹೊರಾಂಗಣ ಈಜುಕೊಳ, ವಿಶಾಲ ಪಾರ್ಕಿಂಗ್ ಮತ್ತು ಬೃಹತ್ ಹಸಿರು ಮೈದಾನದೊಂದಿಗೆ ಪಾರಂಪರಿಕ ಕಟ್ಟಡಗಳ ವಿಶೇಷತೆ ಹೊಂದಿದೆ. ಮೂರನೆಯದಾದ ಸುರತ್ಕಲ್ ಸಮೀಪದ 'ಪಾಲೆಮಾರ್ ಫಾರ್ಮ್ಸ್' ನಗರದ ಗದ್ದಲದಿಂದ ದೂರವಿದ್ದು, 20 ಎಕರೆ ವಿಶಾಲ ಜಾಗದಲ್ಲಿ ನಿಸರ್ಗದ ತಂಪಾದ ವಾತಾವರಣದಲ್ಲಿ ಆಪ್ತ ಸಮಾರಂಭಗಳು ಹಾಗೂ ಹೊರಾಂಗಣ ಪಾರ್ಟಿಗಳಿಗೆ ಸಿದ್ದಗೊಂಡಿದೆ. ನಾಲ್ಕನೆಯ ಸಭಾಂಗಣವು ಜೆಪ್ಪಿನಮೊಗರಿನ ಕಡೆಕಾರ್‌ನಲ್ಲಿ ನೇತ್ರಾವತಿ ನದಿಯ ದಡದಲ್ಲಿ ತಲೆಯೆತ್ತಿದ್ದು, ನದಿಯ ತಣ್ಣನೆ ಗಾಳಿ ಮತ್ತು ಪುರಾತನ ದೇವಸ್ಥಾನದ ಸಾನ್ನಿಧ್ಯದೊಂದಿಗೆ ದೈವಿಕ ಕಳೆಯನ್ನು ಹೊಂದಿದೆ. ಇದನ್ನು ಕಡಿಮೆ ದರದಲ್ಲಿ ಜನಸಾಮಾನ್ಯರಿಗೂ ಅನುಕೂಲವಾಗುವಂತೆ ವಿವಾಹ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗಾಗಿ ನಿರ್ಮಿಸಲಾಗಿದೆ.
ಎಲ್ಲ ನಾಲ್ಕು ಸಭಾಭವನಗಳನ್ನು ನಗರದ ಪ್ರಮುಖ ಮುಖ್ಯ ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿಯೇ ನಿರ್ಮಿಸಿರುವುದರಿಂದ ದೂರದ ಊರುಗಳಿಂದ ಬರುವ ಅತಿಥಿಗಳು ಸುಲಭವಾಗಿ ತಲುಪಬಹುದಾಗಿದೆ. ವಾಹನ ಪಾರ್ಕಿಂಗ್ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ನಾಲ್ಕೂ ಭವನಗಳಲ್ಲಿ ಅತ್ಯಂತ ವಿಶಾಲವಾದ, ನೂರಾರು ವಾಹನಗಳು ಏಕಕಾಲದಲ್ಲಿ ನಿಲ್ಲಿಸಬಹುದಾದ ವ್ಯವಸ್ಥಿತ ಜಾಗವನ್ನು ಕಲ್ಪಿಸಲಾಗಿದೆ. ಕಾರ್ಪೊರೇಟ್ ಶೈಲಿಯ ಅದ್ದೂರಿ ಈವೆಂಟ್‌ಗಳಿಂದ ಹಿಡಿದು ಜನಸಾಮಾನ್ಯರ ಸಣ್ಣ ಬಜೆಟ್‌ನ ಕಾರ್ಯಕ್ರಮಗಳವರೆಗೆ, ಪ್ರತಿಯೊಬ್ಬರ ಆರ್ಥಿಕ ಶಕ್ತಿಗೆ ತಕ್ಕಂತೆ ಇಲ್ಲಿ ಸಭಾಂಗಣಗಳು ಲಭ್ಯವಿವೆ. ಇದು ಯಾವುದೇ ಒಂದು ವರ್ಗಕ್ಕೆ ಸೀಮಿತವಾಗದೇ ಎಲ್ಲಾ ಧರ್ಮ, ಜಾತಿ, ಸಮುದಾಯ ಹಾಗೂ ಎಲ್ಲಾ ಆರ್ಥಿಕ ಹಂತದ ಕುಟುಂಬಗಳಿಗೆ ಸಮಾನ ಅವಕಾಶ ಒದಗಿಸುವ ಮೂಲಕ ಮದುವೆ ಮತ್ತು ಸಾಮಾಜಿಕ ಕಾರ್ಯಕ್ರಮಗಳ ಕ್ಷೇತ್ರದಲ್ಲಿ ಸಮಾನತೆ ಪರಿಚಯಿಸುವ ಐತಿಹಾಸಿಕ ಸಾಮಾಜಿಕ ಚಳವಳಿಯಾಗಿದೆ.
ಈ ಬೃಹತ್ ಯೋಜನೆಯಿಂದಾಗಿ ಕರಾವಳಿಯ ಡೆಕೋರೇಶನ್, ಕ್ಯಾಟರಿಂಗ್, ಫೋಟೋಗ್ರಾಫಿ, ಲೈಟಿಂಗ್ಸ್ ಸೇರಿದಂತೆ ವಿವಿಧ ಕ್ಷೇತ್ರಗಳ ಸ್ಥಳೀಯ ಯುವಕರಿಗೆ ವ್ಯಾಪಕ ಉದ್ಯೋಗ ಮತ್ತು ಸ್ವಯಂ ಉದ್ಯೋಗದ ಅವಕಾಶಗಳು ಸೃಷ್ಟಿಯಾಗಲಿದ್ದು, ಸ್ಥಳೀಯ ಆರ್ಥಿಕತೆಗೆ ಮಹತ್ತರ ಕೊಡುಗೆ ನೀಡಲಿವೆ. ಇದೇ ಮೊದಲ ಬಾರಿಗೆ ಮಂಗಳೂರಿನ ಸಮುದ್ರ ತೀರದಲ್ಲಿ ಅದ್ದೂರಿ, ಭವ್ಯ ಸಮಾರಂಭಗಳನ್ನು ನಡೆಸಲು ಸುಜ್ಜಿತ ತೆರೆದ ಸಭಾಂಗಣವೂ ಸಿದ್ದಗೊಳ್ಳುತ್ತಿದ್ದು, ಶೀಘ್ರದಲ್ಲೇ ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂದು ಪಾಲೆಮಾರ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ವಿಕಾಸ ಎಜುಕೇಶನ್ ಟ್ರಸ್ಟ್ ನ ಟ್ರಸ್ಟಿಗಳಾದ ಜೆ.ಕೆ.ರಾವ್, ಕೊರಗಪ್ಪ, ಸೂರಜ್ ಕುಮಾರ್ ಕಲ್ಯ, ಜೆ.ಸಂತೋಷ್ ಕುಮಾರ್ ಹಾಗೂ ಲ್ಯಾಂಡ್ ಲಿಂಕ್ಸ್ ನ ಉಪಾಧ್ಯಕ್ಷ ಪ್ರದೀಪ್ ಪಾಲೆಮಾರ್ ಉಪಸ್ಥಿತರಿದ್ದರು.