image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ನವದುರ್ಗ ಲೇಖನ ಯಜ್ಞ ಮತ್ತು ನವಚಂಡಿ ಯಾಗ

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ನವದುರ್ಗ ಲೇಖನ ಯಜ್ಞ ಮತ್ತು ನವಚಂಡಿ ಯಾಗ

ಮಂಗಳೂರು: ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ನವದುರ್ಗ ಲೇಖನ ಯಜ್ಞ ಸಮಿತಿ  ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಮತ್ತು ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳ ತಾಲೂಕು ಸಮಿತಿಗಳ ಉದ್ಘಾಟನೆ ಮತ್ತು ಪದಗ್ರಹಣ ಸಮಾರಂಭ ಅಕ್ಟೋಬರ್ 11 ರಂದು ಸಂಜೆ 3 ಗಂಟೆಗೆ ಮಂಗಳೂರು ಅಡ್ಯಾರಿನಲ್ಲಿರುವ ವಿ.ಕೆ .ಶೆಟ್ಟಿ ಆಡಿಟೋರಿಯಂ ಅಡ್ಯಾರ್ ಗಾರ್ಡನ್‌ನಲ್ಲಿ ನಡೆಯಲಿದೆ ಎಂದು  ದಕ ಜಿಲ್ಲಾ ಸಮಿತಿಯ ಪ್ರಧಾನ ಸಂಚಾಲಕ ಚಂದ್ರಹಾಸ ಶೆಟ್ಟಿ ರಂಗೋಲಿ ತಿಳಿಸಿದರು. ಅವರು ನಗರದ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ 25 ರಿಂದ ಮಾರ್ಚ್ 5 ತನಕ ನಡೆಯುವ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ನವದುರ್ಗ ಲೇಖನ ಯಜ್ಞ ಮತ್ತು ನವಚಂಡಿ ಯಾಗ ನಡೆಸಲು ದೇವಿಯ ಅಭಯಯಾಗಿದೆ. 99999 ಮಂದಿ ಭಕ್ತರು ಈ ನವದುರ್ಗ ಲೇಖನ ಯಜ್ಞದಲ್ಲಿ ಅತ್ಯಂತ ಶ್ರದ್ಧೆ ಮತ್ತು ಭಕ್ತಿಯಿಂದ ಭಾಗವಹಿಸುವ ಅವಕಾಶ ಪಡೆಯಲಿದ್ದಾರೆ. ಈ ಕಾರ್ಯಕ್ರಮದ ಯಶಸ್ಸಿಗಾಗಿ ದಕ್ಷಿಣ ಕನ್ನಡ   ಜಿಲ್ಲಾ ಸಮಿತಿ ಹಾಗೂ 8 ವಿಧಾನಸಭಾ ಕ್ಷೇತ್ರಗಳ ತಲಾ 9 ಪುರುಷರು ಹಾಗೂ ಮಹಿಳೆಯರ ತಾಲೂಕು ಸಮಿತಿಗಳನ್ನು ರಚಿಸಲಾಗಿದೆ. 

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ  ವಾಸುದೇವ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ , ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷ  ರವಿ ಶೆಟ್ಟಿ , ಕಾರ್ಯಾಧ್ಯಕ್ಷರಾದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ನವದುರ್ಗ ಲೇಖನ ಯಜ್ಞ ಸಮಿತಿಯ ಅಧ್ಯಕ್ಷ ರಘುಪತಿ ಭಟ, ಕಾರ್ಯಾಧ್ಯಕ್ಷರುಗಳಾದ  ಕೃಷ್ಣ ಪ್ರಸಾದ್ ಅಡ್ಯಂತಾಯ ಮತ್ತು  ಮುನಿಯಾಲು ಉದಯ ಕುಮಾರ್ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಯೋಗೀಶ್ ಶೆಟ್ಟಿ ಭಾಗವಹಿಸಲಿದ್ದಾರೆ. ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಜೀರ್ಣೋದ್ಧಾರ ಕಾರ್ಯ 99 ಕೋಟಿ ರೂ ವೆಚ್ಚದಲ್ಲಿ ನಡೆಯುತ್ತಿದ್ದು, 50 ಕೋಟಿ ರೂ ಸಂಗ್ರಹವಾಗಿದೆ. 20 ಕೆಜಿ ಚಿನ್ನ ಹಾಗೂ 150 ಕೆ.ಜಿ ಬೆಳ್ಳಿ ಬಳಸಿ ಬಂಗಾರದ ಗದ್ದುಗೆ ನಿರ್ಮಿಸಲು ಉದ್ದೇಶಿಸಲಾಗಿದ್ದು, 10 ಕೆ.ಜಿ ಚಿನ್ನ ಹಾಗೂ 100 ಕೆಜಿ ಬೆಳ್ಳಿ ಈಗಾಗಲೇ ಭಕ್ತರಿಂದ ಸಂಗ್ರಹವಾಗಿದೆ ಎಂದು ಅವರು ಹೇಳಿದರು. 

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಮಿತಿಯ ಮುಖ್ಯ ಸಂಚಾಲಕ ಪುರುಷೋತ್ತಮ ಕೆ.ಭಂಡಾರಿ ಅಡ್ಯಾರ್, ಸಂಚಾಲಕರಾದ ಮಣೀಶ್ ರೈ, ಸಂತೋಷ್ ಶೆಟ್ಟಿ ಶೆಡ್ಡೆ, ಎ.ಕೃಷ್ಣ ಶೆಟ್ಟಿ ತಾರೆಮಾರ್, ಅಕ್ಷಿತ್ ಸುವರ್ಣ, ಬಾಲಕೃಷ್ಣ ಕೊಟ್ಟಾರಿ, ಪ್ರದೀಪ್ ಆಳ್ವ ಕದ್ರಿ ಮತ್ತು ಅಶ್ವತ್ಥಾಮ ಹೆಗ್ಡೆ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ