ಮಂಗಳೂರು : ಪ್ರೆಸ್ ಕ್ಲಬ್‌ನ 2025-26ನೇ ಸಾಲಿನ ಪ್ರತಿಷ್ಠಿತ ‘ಮಂಗಳೂರು ಪ್ರೆಸ್ ಕ್ಲಬ್ ಗೌರವ ಸನ್ಮಾನ’ಕ್ಕೆ ಐವರು ಹಿರಿಯ ಪತ್ರಕರ್ತರನ್ನು ಆಯ್ಕೆ ಮಾಡಲಾಗಿದೆ. ಪತ್ರಿಕೋದ್ಯಮ ಮತ್ತು ದೃಶ್ಯ ಮಾಧ್ಯಮ ರಂಗದಲ್ಲಿ ಸುದೀರ್ಘ ಸೇವೆ ಸಲ್ಲಿಸಿರುವ ಬಾಲಸುಬ್ರಹ್ಮಣ್ಯ ಕಾಯಾರ, ವಿಜಯ ಕರ್ನಾಟಕ ಪತ್ರಿಕೆಯ ರಾಮಣ್ಣ ವೈ., ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಹರ್ಷ, ಪಿಂಗಾರ ಪತ್ರಿಕೆಯ ರೇಮಂಡ್ ಡಿಕೂನಾ ಹಾಗೂ ಕಲೈಂಜರ್ ಟಿ.ವಿ.ಯ ಆರ್.ಎಂ. ರಾಜೇಂದ್ರನ್ ಈ ಬಾರಿಯ ಗೌರವ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಈ ಗೌರವ ಪುರಸ್ಕಾರವು ಹತ್ತು ಸಾವಿರ ರೂಪಾಯಿ ನಗದು ಬಹುಮಾನ, ಪ್ರಶಸ್ತಿ ಫಲಕ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ ಎಂದು ಪ್ರೆಸ್ ಕ್ಲಬ್‌ನ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಅವರು ತಮ್ಮ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮೇ 24 ರಂದು ಬೆಳಗ್ಗೆ 11 ಗಂಟೆಗೆ ಮಂಗಳೂರು ನಗರದ ರೆಡ್ ಕ್ರಾಸ್ ಶತಮಾನೋತ್ಸವ ಭವನದ ‘ಪ್ರೇರಣಾ ಸಭಾಂಗಣ’ದಲ್ಲಿ ಹಮ್ಮಿಕೊಳ್ಳಲಾಗಿರುವ ‘ಮಂಗಳೂರು ಪ್ರೆಸ್ ಕ್ಲಬ್ ದಿನಾಚರಣೆ’ ಕಾರ್ಯಕ್ರಮದಲ್ಲಿ ಈ ಐವರು ಸಾಧಕರಿಗೆ ಸನ್ಮಾನಿಸಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ವಿವರಿಸಿದೆ.