image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬೈಕಂಪಾಡಿ ಹಾಗೂ ಕೂಳೂರು ಜಂಕ್ಷನ್‌ ಬಳಿ ಅಂಡರ್‌ಪಾಸ್ ನಿರ್ಮಾಣಕ್ಕೆ ₹11.63 ಕೋಟಿ ಅನುದಾನ ಮಂಜೂರು: ಸಂಸದ ಕ್ಯಾ. ಬ್ರಿಜೇಶ್ ಚೌಟ

ಬೈಕಂಪಾಡಿ ಹಾಗೂ ಕೂಳೂರು ಜಂಕ್ಷನ್‌ ಬಳಿ ಅಂಡರ್‌ಪಾಸ್ ನಿರ್ಮಾಣಕ್ಕೆ ₹11.63 ಕೋಟಿ ಅನುದಾನ ಮಂಜೂರು: ಸಂಸದ ಕ್ಯಾ. ಬ್ರಿಜೇಶ್ ಚೌಟ

​ಮಂಗಳೂರು : ನಗರದ ಹೊರವಲಯದ ಪ್ರಮುಖ ಹೆದ್ದಾರಿ ಜಂಕ್ಷನ್‌ಗಳಾದ ಬೈಕಂಪಾಡಿ ಮತ್ತು ಕೂಳೂರು ಬಳಿ ಸುಗಮ ಸಂಚಾರ ಹಾಗೂ ಅಪಘಾತ ಮುಕ್ತ ವಲಯ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದಿಂದ ಮಹತ್ವದ ಕಾಮಗಾರಿಗಳಿಗೆ ಅನುಮೋದನೆ ದೊರೆತಿದ್ದು, ಒಟ್ಟು 11.63 ಕೋಟಿ ರೂಪಾಯಿಗೂ ಅಧಿಕ ಅನುದಾನ ಮಂಜೂರಾಗಿದೆ ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬರುವ ಈ ಎರಡು ಪ್ರಮುಖ ಜಂಕ್ಷನ್‌ಗಳಲ್ಲಿ ವಾಹನಗಳ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಈ ಮಹತ್ವದ ನಿರ್ಧಾರ ಕೈಗೊಂಡಿದೆ.

​ಈ ಯೋಜನೆಯಡಿ ಸಾರ್ವಜನಿಕ ವಲಯದಲ್ಲಿ ತೀವ್ರ ಅಪಘಾತ ವಲಯ (ಬ್ಲ್ಯಾಕ್ ಸ್ಪಾಟ್) ಆಗಿ ಮಾರ್ಪಟ್ಟಿದ್ದ ಬೈಕಂಪಾಡಿ ಜಂಕ್ಷನ್‌ನಲ್ಲಿ ಸುಗಮ ಹಾಗೂ ಸುರಕ್ಷಿತ ವಾಹನ ಸಂಚಾರಕ್ಕಾಗಿ ಮತ್ತು ಬೈಕಂಪಾಡಿ ಕೈಗಾರಿಕಾ ಪ್ರದೇಶಕ್ಕೆ ತೆರಳುವ ವಾಹನಗಳ ಅನುಕೂಲಕ್ಕಾಗಿ 7.09 ಕೋಟಿ ರೂ. ವೆಚ್ಚದಲ್ಲಿ ಲಘು ವಾಹನ ಕೆಳಸೇತುವೆ (LVUP) ನಿರ್ಮಾಣಕ್ಕೆ ಹೆದ್ದಾರಿ ಸಚಿವಾಲಯವು ಅನುಮೋದನೆ ನೀಡಿದೆ. ಇದರಿಂದಾಗಿ ವಾಹನಗಳು ಹೆದ್ದಾರಿಯಲ್ಲಿ ಅಪಾಯಕಾರಿಯಾಗಿ ತಿರುವು ಪಡೆಯುವುದು ತಪ್ಪಲಿದ್ದು, ಮಂಗಳೂರು-ಉಡುಪಿ ನಡುವೆ ಸಂಚರಿಸುವ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಇದರೊಂದಿಗೆ ರಾಷ್ಟ್ರೀಯ ಹೆದ್ದಾರಿ-66ರ ಕೆ.ಐ.ಒ.ಸಿ.ಎಲ್ (KIOCL) ಜಂಕ್ಷನ್ ಮತ್ತು ಕೂಳೂರು ಸೇತುವೆ ಬಳಿ 4.54 ಕೋಟಿ ರೂ. ವೆಚ್ಚದಲ್ಲಿ ಅಂಡರ್‌ಪಾಸ್ ಕಾಮಗಾರಿಗೆ ಅನುಮೋದನೆ ಸಿಕ್ಕಿದ್ದು, ತಣ್ಣೀರುಬಾವಿ ಬೀಚ್ ಹಾಗೂ ಎಂ.ಎಸ್.ಇ.ಝೆಡ್ (MSEZ) ಕಡೆಗೆ ಚಲಿಸುವ ವಾಹನಗಳ ದಟ್ಟಣೆಯನ್ನು ನಿವಾರಿಸಲು ಇದು ಅತ್ಯಂತ ಸಹಕಾರಿಯಾಗಲಿದೆ.

​ದಕ್ಷಿಣ ಕನ್ನಡ ಜಿಲ್ಲೆಯ ಹೆದ್ದಾರಿ ಮೂಲಸೌಕರ್ಯದ ದೀರ್ಘಕಾಲದ ಬೇಡಿಕೆಯನ್ನು ಈಡೇರಿಸಿ, ಈ ಮಹತ್ವದ ಕಾಮಗಾರಿಗಳಿಗೆ ತಕ್ಷಣವೇ ಅನುದಾನ ಒದಗಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಜಿಲ್ಲೆಯ ಸಮಸ್ತ ಜನತೆಯ ಪರವಾಗಿ ಧನ್ಯವಾದ ಸಲ್ಲಿಸಿದ್ದಾರೆ. ಈ ಹಿಂದೆ ಎನ್‌ಎಂಪಿಟಿ ಭಾಗದ ರಸ್ತೆಯು ರಾಷ್ಟ್ರೀಯ ಹೆದ್ದಾರಿ ಸರಕು ಸಾಗಣೆ ನಿರ್ವಹಣೆ ಲಿಮಿಟೆಡ್ ವ್ಯಾಪ್ತಿಯಲ್ಲಿದ್ದಾಗ ಎದುರಾಗಿದ್ದ ತಾಂತ್ರಿಕ ಅಡಚಣೆಗಳನ್ನು ನಿವಾರಿಸಿ, ಪೋರ್ಟ್ ವ್ಯಾಪ್ತಿಯ ರಸ್ತೆಯನ್ನು ಸಂಪೂರ್ಣವಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (NHAI) ಹಸ್ತಾಂತರಿಸುವಲ್ಲಿ ಯಶಸ್ವಿಯಾಗಿದ್ದು, ಇದೀಗ ಅನುದಾನವೂ ದೊರೆತಿರುವುದರಿಂದ ನಿಗದಿತ ಕಾಲಮಿತಿಯೊಳಗೆ ಈ ಎರಡು ಅಂಡರ್‌ಪಾಸ್‌ಗಳ ಕಾಮಗಾರಿ ಮುಗಿಸುವುದಕ್ಕೆ ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ಭರವಸೆ ನೀಡಿದ್ದಾರೆ.

Category
ಕರಾವಳಿ ತರಂಗಿಣಿ