image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ನೇತ್ರಾವತಿ ನದಿಗೆ ಮರಳಿ ಬಂದ ಜೀವಕಳೆ: ಕರಾವಳಿಯ ಕುಡಿಯುವ ನೀರಿನ ಆತಂಕ ದೂರ

ನೇತ್ರಾವತಿ ನದಿಗೆ ಮರಳಿ ಬಂದ ಜೀವಕಳೆ: ಕರಾವಳಿಯ ಕುಡಿಯುವ ನೀರಿನ ಆತಂಕ ದೂರ

ದಕ್ಷಿಣ ಕನ್ನಡ : ಜಿಲ್ಲೆಯ ಜೀವನಾಡಿಯಾಗಿರುವ ನೇತ್ರಾವತಿ ನದಿಯಲ್ಲಿ ಕೆಲವು ವಾರಗಳ ಹಿಂದೆ ನೀರಿನ ಮಟ್ಟ ತೀವ್ರವಾಗಿ ಕುಸಿತ ಕಂಡಿದ್ದು ತೀವ್ರ ಆತಂಕಕ್ಕೆ ಕಾರಣವಾಗಿತ್ತು. ತೀವ್ರ ಬಿಸಿಲಿನ ತಾಪದಿಂದಾಗಿ ಬಂಟ್ವಾಳದ ಜಕ್ರಿಬೆಟ್ಟು ಡ್ಯಾಂನ ಕೆಳ ಭಾಗದಿಂದ ಪಾಣೆಮಂಗಳೂರು ನೂತನ ಸೇತುವೆವರೆಗೆ ನದಿಯ ಹಲವೆಡೆ ನೀರು ಸಂಪೂರ್ಣ ಬತ್ತಿ ಹೋಗಿ ಮರಳು ಹಾಗೂ ಕಲ್ಲುಬಂಡೆಗಳು ಎದ್ದು ಕಾಣಿಸುತ್ತಿದ್ದವು. ನದಿಗೆ ಒಳ ಹರಿವು ಸಹ ಸಂಪೂರ್ಣವಾಗಿ ಕಡಿಮೆಯಾಗಿದ್ದ ಹಿನ್ನೆಲೆಯಲ್ಲಿ ಬಂಟ್ವಾಳ ಮಾತ್ರವಲ್ಲದೆ, ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲೂ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಾಗುವ ಭೀತಿ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಪೂರೈಕೆ ಹಾಗೂ ಬಳಕೆ ಬಗ್ಗೆ ಅಧಿಕಾರಿಗಳು ಹೆಚ್ಚಿನ ಜಾಗ್ರತೆ ವಹಿಸುವಂತೆ ಬಂಟ್ವಾಳ ಶಾಸಕ ರಾಜೇಶ್‌ ನಾಯ್ಕ್‌ ಉಳಿಪ್ಪಾಡಿಗುತ್ತು ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.

​ಮಂಗಳೂರು ನಗರಕ್ಕೆ ನೀರಿನ ಕೊರತೆ ಉಂಟಾಗದಂತೆ ಜಿಲ್ಲಾಧಿಕಾರಿಗಳ ಕಚೇರಿಯೂ ಮಹತ್ವದ ಆದೇಶ ಹೊರಡಿಸಿತ್ತು. ಬೇಸಿಗೆಯಲ್ಲಿ ನೀರಿನ ಅಭಾವ ತಲೆದೋರದಂತೆ ಎಎಂಆರ್ ಡ್ಯಾಂನಿಂದ ತುಂಬೆ ಡ್ಯಾಂಗೆ 6 ಮೀಟರ್‌ವರೆಗೆ ನೀರನ್ನು ಬಿಡುಗಡೆಗೊಳಿಸುವಂತೆ ಸೂಚಿಸಲಾಗಿತ್ತು. ಇದರೊಂದಿಗೆ ಎಎಂಆರ್ ಅಣೆಕಟ್ಟಿನಲ್ಲಿ ಉಳಿದಿರುವ ನೀರನ್ನು ಇತರೆ ಯಾವುದೇ ವಾಣಿಜ್ಯ ಅಥವಾ ಕೃಷಿ ಉದ್ದೇಶಗಳಿಗೆ ಬಳಸದೆ ಕೇವಲ ಕುಡಿಯುವ ನೀರಿನ ಅಗತ್ಯಕ್ಕೆ ಮಾತ್ರ ಆದ್ಯತೆ ನೀಡುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿತ್ತು.

​ಮಂಗಳೂರು ನಗರಕ್ಕೆ ನೇತ್ರಾವತಿ ನದಿಯ ತುಂಬೆ ಕಿಂಡಿ ಅಣೆಕಟ್ಟಿನಿಂದ ನೀರು ಪೂರೈಕೆಯಾಗುತ್ತಿದ್ದು, ಅದರ ಗರಿಷ್ಠ ಸಂಗ್ರಹಣಾ ಸಾಮರ್ಥ್ಯ 10.41 ಎಂಸಿಎಂ ಆಗಿದೆ. ಏಪ್ರಿಲ್ 21ರ ಮಾಹಿತಿಯಂತೆ ತುಂಬೆ ಡ್ಯಾಂನಲ್ಲಿ 4.71 ಮೀಟರ್ ಹಾಗೂ ಎಎಂಆರ್ ಡ್ಯಾಂನಲ್ಲಿ 18.62 ಮೀಟರ್ ನೀರಿನ ಮಟ್ಟ ದಾಖಲಾಗಿತ್ತು. ಇದು ನಗರದ ಸುಮಾರು 22 ದಿನಗಳ ಅವಶ್ಯಕತೆಗೆ ಮಾತ್ರ ಸಾಕಾಗುವಷ್ಟು ನೀರಿನ ಲಭ್ಯತೆಯಾಗಿದ್ದರಿಂದ ಆಡಳಿತ ಮಂಡಳಿ ತಲೆಕೆಡಿಸಿಕೊಂಡಿತ್ತು.

​ಆದರೆ ಇದೀಗ ವರುಣದೇವನ ಕೃಪೆಯಿಂದ ಕರಾವಳಿ ನಿವಾಸಿಗಳು ನಿಟ್ಟುಸಿರು ಬಿಡುವಂತಾಗಿದೆ. ಕಳೆದ ಮೂರು-ನಾಲ್ಕು ದಿನಗಳಿಂದ ಘಟ್ಟ ಪ್ರದೇಶ ಹಾಗೂ ತಪ್ಪಲು ಭಾಗಗಳಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಪರಿಣಾಮ ನೇತ್ರಾವತಿ ನದಿಗೆ ಒಳಹರಿವು ಗಣನೀಯವಾಗಿ ಹೆಚ್ಚಾಗಿದೆ. ಜಿಲ್ಲಾಧಿಕಾರಿಗಳ ಆದೇಶದಂತೆ ಶಂಭೂರು ಎಎಂಆರ್ ಡ್ಯಾಂನಿಂದ ನೀರು ಬಿಡುಗಡೆಗೊಳಿಸಿರುವುದರಿಂದ ನೇತ್ರಾವತಿ ನದಿ ಮತ್ತೆ ತುಂಬಿ ಹರಿಯಲು ಆರಂಭಿಸಿದೆ. ಬಿಸಿಲಿನ ತಾಪಕ್ಕೆ ಬತ್ತಿ ಹೋಗಿ ಕಲ್ಲುಬಂಡೆಗಳು ಕಾಣಿಸುತ್ತಿದ್ದ ನದಿಯು ಈಗ ಜಲಾವೃತಗೊಂಡು ಮರಳಿ ಜೀವ ಕಳೆ ಪಡೆದುಕೊಂಡಿದೆ.

​ಅತ್ತ ಜಕ್ರಿಬೆಟ್ಟು ಡ್ಯಾಂ ಕೂಡ ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ಕೆಳ ಭಾಗಕ್ಕೆ ಹರಿಯಬಿಡಲಾಗಿದೆ. ಇದೀಗ ತುಂಬೆ ಡ್ಯಾಂ ಸಹ ಸಂಪೂರ್ಣ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ನೇತ್ರಾವತಿ ನದಿ ಹಸಿರಾಗಿ ಕಂಗೊಳಿಸುತ್ತಿದೆ. ಸದ್ಯ ತುಂಬೆಯವರೆಗೆ ನದಿಯಲ್ಲಿ ಸಮರ್ಪಕ ಪ್ರಮಾಣದ ನೀರು ಲಭ್ಯವಿರುವುದರಿಂದ ಮಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಕ್ಷೀಣಿಸಿದೆ. ಇನ್ನು ಕೆಲವು ದಿನಗಳು ಇದೇ ರೀತಿ ಮಳೆಯಾದರೆ, ಮುಂದಿನ ದಿನಗಳಲ್ಲಿ ಮುಂಗಾರು ಮಳೆ ಸ್ವಲ್ಪ ವಿಳಂಬವಾದರೂ ಕರಾವಳಿಯಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗುವುದಿಲ್ಲ ಎಂಬ ಆಶಾವಾದ ವ್ಯಕ್ತವಾಗಿದೆ.

Category
ಕರಾವಳಿ ತರಂಗಿಣಿ