image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮೂಡುಬಿದಿರೆ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಮೂರು ವಿಭಾಗಗಳಿಗೆ ಸತತ ಮೂರನೇ ಬಾರಿ ಎನ್‌ಬಿಎ ಮಾನ್ಯತೆಯ ಗರಿ

ಮೂಡುಬಿದಿರೆ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಮೂರು ವಿಭಾಗಗಳಿಗೆ ಸತತ ಮೂರನೇ ಬಾರಿ ಎನ್‌ಬಿಎ ಮಾನ್ಯತೆಯ ಗರಿ

ಮೂಡುಬಿದಿರೆ: ಇಲ್ಲಿನ ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್ ಹಾಗೂ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗಗಳಿಗೆ ಈ ಹಿಂದೆ ಲಭಿಸಿದ್ದ ರಾಷ್ಟ್ರೀಯ ಮಾನ್ಯತಾ ಮಂಡಳಿ (ಎನ್‌ಬಿಎ) ಮಾನ್ಯತೆಯನ್ನು ಮುಂದಿನ ಮೂರು ಶೈಕ್ಷಣಿಕ ವರ್ಷಗಳಿಗೆ ವಿಸ್ತರಿಸಲಾಗಿದೆ. ಇದರೊಂದಿಗೆ, ಇನ್ಫರ್ಮೇಶನ್ ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್ ವಿಭಾಗಕ್ಕೂ ಮೊದಲ ಬಾರಿಗೆ ಮುಂದಿನ ಮೂರು ಶೈಕ್ಷಣಿಕ ವರ್ಷಗಳ ಅವಧಿಗೆ ಎನ್‌ಬಿಎ ಮಾನ್ಯತೆ ದೊರೆತಿದೆ. ಆಳ್ವಾಸ್ ಸಂಸ್ಥೆಗೆ ಸತತ ಮೂರನೇ ಬಾರಿ ಈ ಗೌರವ ದೊರೆತಿರುವುದು ಶಿಕ್ಷಣದ ಗುಣಮಟ್ಟ, ಆಧುನಿಕ ಪ್ರಯೋಗಾಲಯ ಸೌಲಭ್ಯ, ಅನುಭವಸಂಪನ್ನ ಬೋಧಕ ವೃಂದ ಹಾಗೂ ಕೈಗಾರಿಕಾ ಸಂಪರ್ಕಗಳ ಶ್ರೇಷ್ಠತೆಗೆ ಹಿಡಿದ ಕೈಗನ್ನಡಿಯಾಗಿದೆ.

​ಕಂಪ್ಯೂಟರ್ ಸೈನ್ಸ್ ಹಾಗೂ ಎಲೆಕ್ಟ್ರಾನಿಕ್ಸ್ ವಿಭಾಗಗಳಿಗೆ 2025ರ ಜುಲೈ 1ರಿಂದ 2028ರ ಡಿಸೆಂಬರ್ 31ರವರೆಗೆ ಮಾನ್ಯತೆ ನೀಡಲಾಗಿದ್ದು, ಇನ್ಫರ್ಮೇಶನ್ ಸೈನ್ಸ್ ವಿಭಾಗಕ್ಕೆ 2026ರ ಜನವರಿ 1ರಿಂದ 2028ರ ಡಿಸೆಂಬರ್ 31ರವರೆಗೆ ಈ ಮಾನ್ಯತೆ ಅನ್ವಯವಾಗಲಿದೆ. ಇತ್ತೀಚೆಗೆ ದೆಹಲಿಯ ಎನ್‌ಬಿಎ ತಜ್ಞರ ತಂಡವು ಕಾಲೇಜಿಗೆ ಭೇಟಿ ನೀಡಿ, ಮೂಲಸೌಕರ್ಯ, ಬೋಧನೆ ಮತ್ತು ಕಲಿಕೆಯ ವಿಧಾನಗಳು, ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳು, ಪ್ರಕಟಣೆಗಳು, ಉದ್ಯಮಶೀಲ ಅಭಿವೃದ್ಧಿ, ವಿವಿಧ ರಾಜ್ಯ ಮತ್ತು ಕೇಂದ್ರ ಹಣಕಾಸು ಸಂಸ್ಥೆಗಳ ಅನುದಾನಗಳು ಹಾಗೂ ಕೈಗಾರಿಕೆಗಳೊಂದಿಗಿನ ಒಡಂಬಡಿಕೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಈ ಮೌಲ್ಯಮಾಪನ ನಡೆಸಿದೆ.

​ತಾಂತ್ರಿಕ ಶಿಕ್ಷಣದ ಗುಣಮಟ್ಟವನ್ನು ಅಳೆಯುವ ಪ್ರಮುಖ ಮಾನದಂಡವಾಗಿರುವ ಎನ್‌ಬಿಎ ಮಾನ್ಯತೆಯು, ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳು, ಉನ್ನತ ಶಿಕ್ಷಣ ಹಾಗೂ ವಿದೇಶಿ ವಿಶ್ವವಿದ್ಯಾಲಯಗಳ ಪ್ರವೇಶದಲ್ಲಿ ಹೆಚ್ಚುವರಿ ಆದ್ಯತೆ ನೀಡುತ್ತದೆ. ಸಂಸ್ಥೆಯ ಈ ಅಮೋಘ ಸಾಧನೆಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಟ್ರಸ್ಟಿ ವಿವೇಕ್ ಆಳ್ವ ಮತ್ತು ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ಫೆರ್ನಾಂಡಿಸ್ ಹರ್ಷ ವ್ಯಕ್ತಪಡಿಸಿ, ಸಂಬಂಧಪಟ್ಟ ವಿಭಾಗಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

Category
ಕರಾವಳಿ ತರಂಗಿಣಿ