ಮೂಡುಬಿದಿರೆ: ರೋಗಿಗಳ ನೋವನ್ನು ಹಂಚಿಕೊಂಡು, ಅವರಿಗೆ ಮಾನಸಿಕ ಧೈರ್ಯ ನೀಡುವುದು ಹಾಗೂ ಚಿಕಿತ್ಸಾ ಪ್ರಕ್ರಿಯೆಯಲ್ಲಿ ನಿರಂತರ ಬೆಂಬಲ ನೀಡುವುದು ದಾದಿಯರ ಪ್ರಮುಖ ಕರ್ತವ್ಯ ಎಂದು ಕಾರ್ಕಳ ತಾಲೂಕು ಆಸ್ಪತ್ರೆಯ ನರ್ಸಿಂಗ್ ಅಧೀಕ್ಷಕಿ ಕಮಲಾ ಪಿ.ಜೆ. ನುಡಿದರು. ಅವರು ಆಳ್ವಾಸ್ ಹೆಲ್ತ್ ಸೆಂಟರ್ ಹಾಗೂ ಕಾಲೇಜ್ ಆಫ್ ನರ್ಸಿಂಗ್ ಸಹಯೋಗದಲ್ಲಿ ನಡೆದ ಅಂತರರಾಷ್ಟ್ರೀಯ ದಾದಿಯರ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು. ನರ್ಸಿಂಗ್ ಸಿಬ್ಬಂದಿ ಸದಾ ಕರುಣೆ, ಸಹಾನುಭೂತಿ ಮತ್ತು ಶಿಸ್ತಿನೊಂದಿಗೆ ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕು. ನರ್ಸಿಂಗ್ ವೃತ್ತಿಯು ಅತ್ಯಂತ ಶ್ರೇಷ್ಠ ಹಾಗೂ ಮಾನವೀಯ ಸೇವೆಯ ವೃತ್ತಿಯಾಗಿದ್ದು, ಪ್ರತಿಯೊಬ್ಬ ದಾದಿಯರು ತಮ್ಮ ವೃತ್ತಿಯನ್ನು ಗೌರವದಿಂದ ನಿರ್ವಹಿಸಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಆಳ್ವಾಸ್ ಹೆಲ್ತ್ ಸೆಂಟರ್‌ನ ನರ್ಸಿಂಗ್ ಅಧೀಕ್ಷಕಿ ಜುಲೇಖಾ ಖಾನ್, ಭಾರತದಲ್ಲಿ ನರ್ಸಿಂಗ್ ಕ್ಷೇತ್ರವು ಕಳೆದ ಹಲವು ವರ್ಷಗಳಲ್ಲಿ ಬಹುಬೇಡಿಕೆಯ ವೃತ್ತಿಯಾಗಿದ್ದು, ಆಧುನಿಕ ಆರೋಗ್ಯ ಸೇವಾ ವ್ಯವಸ್ಥೆಯಲ್ಲಿ ನರ್ಸಿಂಗ್ ವೃತ್ತಿಗೆ ಹೆಚ್ಚಿನ ಗೌರವ ಮತ್ತು ಬೇಡಿಕೆ ಇದೆ ಎಂದರು. ವಿದೇಶಗಳಲ್ಲಿಯೂ ಭಾರತೀಯ ನರ್ಸಿಂಗ್ ವೃತ್ತಿಪರರಿಗೆ ಹೆಚ್ಚಿನ ಬೇಡಿಕೆ ಇದ್ದು, ಅಮೆರಿಕ, ಕೆನಡಾ, ಆಸ್ಟ್ರೇಲಿಯಾ, ಯುಕೆ ಹಾಗೂ ಮಧ್ಯಪ್ರಾಚ್ಯ ದೇಶಗಳಲ್ಲಿ ಭಾರತೀಯ ದಾದಿಯರು ತಮ್ಮ ಸೇವಾ ಮನೋಭಾವ, ಶಿಸ್ತು ಮತ್ತು ವೃತ್ತಿಪರತೆಯಿಂದ ಉತ್ತಮ ಹೆಸರು ಗಳಿಸಿದ್ದಾರೆ. ಉತ್ತಮ ಶಿಕ್ಷಣ, ಭಾಷಾ ಕೌಶಲ್ಯ ಹಾಗೂ ವೃತ್ತಿಪರ ನೈಪುಣ್ಯ ಹೊಂದಿರುವ ನರ್ಸಿಂಗ್ ವಿದ್ಯಾರ್ಥಿಗಳು ವಿಶ್ವದ ಯಾವುದೇ ಭಾಗದಲ್ಲಿ ಯಶಸ್ವಿಯಾಗಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಬಹುದು ಎಂದು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಕಾರ್ಕಳ ತಾಲೂಕು ಆಸ್ಪತ್ರೆಯ ನರ್ಸಿಂಗ್ ಅಧೀಕ್ಷಕಿ ಕಮಲಾ ಪಿ.ಜೆ. ಹಾಗೂ ಆಳ್ವಾಸ್ ಹೆಲ್ತ್ ಸೆಂಟರ್‌ನ ಹಿರಿಯ ಶುಶ್ರೂಕಿ ಪುಷ್ಪ ರೈಯವರನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ನರ್ಸಿಂಗ್ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮನರಂಜನಾ ಆಟಗಳನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಡಾ. ಹನ ಶೆಟ್ಟಿ, ಆಳ್ವಾಸ್ ಕಾಲೇಜ್ ಆಫ್ ನರ್ಸಿಂಗ್‌ನ ಪ್ರಾಂಶುಪಾಲರಾದ ಡಾ. ಯತಿಕುಮಾರಸ್ವಾಮಿ ಗೌಡ ಉಪಸ್ಥಿತರಿದ್ದರು. ಅಲೆಶ್ಶಿಯಾ ಡಿಸೋಜಾ ಹಾಗೂ ಅರಂಟಾ ರೇನು ಕಾರ್ಯಕ್ರಮ ನಿರೂಪಿಸಿದರೆ, ನಿಕ್ಸಿ ಎನ್.ಎಮ್. ವಂದನಾರ್ಪಣೆ ಮಾಡಿದರು.