image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ರೇಮಂಡ್ ಡಿಕುನ್ಹಾ ತಾಕೋಡೆ ಅವರ ಕೊಂಕಣಿ ಕವನ ಸಂಕಲನ “ಚುನ್ಯಾಚೊ ಫೊಂಡ್” ಬಿಡುಗಡೆ

ರೇಮಂಡ್ ಡಿಕುನ್ಹಾ ತಾಕೋಡೆ ಅವರ ಕೊಂಕಣಿ ಕವನ ಸಂಕಲನ “ಚುನ್ಯಾಚೊ ಫೊಂಡ್” ಬಿಡುಗಡೆ

ಮಂಗಳೂರು :ಹಿರಿಯ ಪತ್ರಕರ್ತ, “ಚಾರೋಳಿ ಕಿಂಗ್” ಹಾಗೂ ಬಹುಭಾಷಾ ಸಾಹಿತಿ ರೇಮಂಡ್ ಡಿಕುನ್ಹಾ ತಾಕೋಡೆ ಅವರ ಕೊಂಕಣಿ ಕವನ ಸಂಕಲನ “ಚುನ್ಯಾಚೊ ಫೊಂಡ್” ಮಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಅದ್ದೂರಿಯಾಗಿ ಬಿಡುಗಡೆಯಾಯಿತು. ಕನ್ನಡ ಹಾಗೂ ದೇವನಗರಿ ಲಿಪಿಯಲ್ಲಿ ಪ್ರಕಟಗೊಂಡಿರುವ ಈ ಕವನ ಸಂಕಲನವನ್ನು ಅನಿವಾಸಿ ಭಾರತೀಯ ಉದ್ಯಮಿ ಹಾಗೂ ಸಮಾಜಸೇವಕರಾದ ಮೈಕಲ್ ಡಿಸೋಜಾ ಅವರು ಬಿಡುಗಡೆಗೊಳಿಸಿದರು.

​ಪುಸ್ತಕ ಬಿಡುಗಡೆ ಬಳಿಕ ಮಾತನಾಡಿದ ಮೈಕಲ್ ಡಿಸೋಜಾ ಅವರು, ಬರಹಗಾರರನ್ನು ಪ್ರೋತ್ಸಾಹಿಸುವ ಮತ್ತು ಕೊಂಕಣಿ ಮಾತೃಭಾಷೆಯನ್ನು ಬೆಳೆಸುವ ಉದ್ದೇಶದಿಂದ “ಮೈಕಲ್ ಡಿಸೋಜಾ ವಿಷನ್ ಕೊಂಕಣಿ” (MDVK) ಯೋಜನೆಯನ್ನು ಆರಂಭಿಸಲಾಗಿದೆ ಎಂದು ತಿಳಿಸಿದರು. ಒಬ್ಬ ಹಿರಿಯ ಸಾಹಿತಿ ತಮ್ಮ ಸಾಹಿತ್ಯ ಕೃತಿಗಳು ಪ್ರಕಟವಾಗದಿದ್ದಾಗ ಪಟ್ಟ ಭಾವುಕ ನೋವನ್ನು ಸ್ಮರಿಸಿದ ಅವರು, ಒಂದು ಕೃತಿ ಪ್ರಕಟವಾಗಿ ಓದುಗರಿಗೆ ತಲುಪಿದಾಗ ಮಾತ್ರ ಲೇಖಕರ ಪರಿಶ್ರಮ ಸಾರ್ಥಕವಾಗುತ್ತದೆ ಎಂದರು. ಇಂತಹ ಬರಹಗಾರರಿಗೆ ಬೆಂಬಲ ನೀಡಿ, ಅವರ ಕೃತಿಗಳನ್ನು ಸಮಾಜದ ಮುಂದೆ ತರುವ ಉದ್ದೇಶದಿಂದಲೇ ಈ ಯೋಜನೆ ಆರಂಭಿಸಲಾಗಿದೆ ಎಂದು ವಿವರಿಸಿದ ಅವರು, ರೇಮಂಡ್ ಡಿಕುನ್ಹಾ ತಾಕೋಡೆ ಅವರು ಕೊಂಕಣಿ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಗೆ ನೀಡುತ್ತಿರುವ ಸೇವೆಯನ್ನು ಮತ್ತು ಪತ್ರಿಕೋದ್ಯಮ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿನ ಅವರ ಸಾಧನೆಯನ್ನು ಕೊಂಡಾಡಿದರು.

​ಕಾರ್ಯಕ್ರಮದಲ್ಲಿ ಮಾತನಾಡಿದ ಹೆನ್ರಿ ಮೆಂಡೋನ್ಸಾ (ಹೆಚ್.ಎಂ. ಪೆರ್ನಾಲ್), ಮೈಕಲ್ ಡಿಸೋಜಾ ಅವರು ಕೊಂಕಣಿ ಸಾಹಿತ್ಯಕ್ಕೆ ದೊಡ್ಡ ಆಸ್ತಿಯಾಗಿದ್ದಾರೆ ಎಂದು ಬಣ್ಣಿಸಿದರು. ಇದೇ ವೇಳೆ MDVK ಸಮಿತಿ ಮುಖ್ಯಸ್ಥರು ಮಾತನಾಡಿ, “ಚುನ್ಯಾಚೊ ಫೊಂಡ್” ಸೇರಿ ಇದುವರೆಗೆ MDVK ಯೋಜನೆಯಡಿ 46 ಪುಸ್ತಕಗಳು ಪ್ರಕಟಗೊಂಡಿದ್ದು, ಮುಂದಿನ ಐದು ವರ್ಷಗಳಲ್ಲಿ 100 ಪುಸ್ತಕಗಳನ್ನು ಪ್ರಕಟಿಸುವ ಗುರಿ ನಿಶ್ಚಿತವಾಗಿ ನೆರವೇರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕೊಂಕಣಿ ಸಾಹಿತ್ಯದಲ್ಲಿ ಆಸಕ್ತಿ ಹೊಂದಿರುವ ಬರಹಗಾರರು ತಮ್ಮ ಅಂತಿಮ ಪಿಡಿಎಫ್ ಪ್ರತಿಯನ್ನು vissionkonkani@gmail.com ಗೆ ಕಳುಹಿಸಬಹುದು ಅಥವಾ ರಾಹುಲ್ ಅಡ್ವರ್ಟೈಸರ್ಸ್ ಕಚೇರಿಗೆ ಹಾರ್ಡ್ ಕಾಪಿಯನ್ನು ಸಲ್ಲಿಸಬಹುದು ಎಂದು ಮನವಿ ಮಾಡಿದ ಅವರು, ಇದು ಪ್ರತಿಯೊಬ್ಬ ಕೊಂಕಣಿ ಬರಹಗಾರರಿಗೆ ದೊರೆತಿರುವ ಉತ್ತಮ ಅವಕಾಶ ಎಂದರು.

​ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಪುಷ್ಪರಾಜ್ ಬಿ.ಎನ್. ಮಾತನಾಡಿ, ಯಾವುದೇ ಪ್ರತಿಫಲವನ್ನು ನಿರೀಕ್ಷಿಸದೆ ಒಳ್ಳೆಯ ಕೆಲಸ ಮಾಡುವ ವ್ಯಕ್ತಿಯ ಜೀವಂತ ಉದಾಹರಣೆ ಮೈಕಲ್ ಡಿಸೋಜಾ ಅವರಾಗಿದ್ದಾರೆ ಎಂದರು. ವ್ಯಕ್ತಿ ಸಾಯಬಹುದು, ಆದರೆ ಸಾಹಿತ್ಯ ಎಂದಿಗೂ ಸಾಯುವುದಿಲ್ಲ ಎಂಬುದನ್ನು ರೇಮಂಡ್ ಡಿಕುನ್ಹಾ ಅವರು ತಮ್ಮ ಸಾಹಿತ್ಯ ಕೃತಿಗಳ ಮೂಲಕ ಸಾಬೀತುಪಡಿಸಿದ್ದಾರೆ ಎಂದು ಹೇಳಿದ ಅವರು, ಜಗತ್ತಿನ ಅತ್ಯಂತ ಶ್ರೀಮಂತ ಭಾಷೆ ಮೌನವಾಗಿದ್ದು, ಸಾಹಿತ್ಯ ಮತ್ತು ಕಲೆ ಭಾಷೆಯ ಗಡಿಗಳನ್ನು ಮೀರಿ ಮಾನವ ಮನಸ್ಸನ್ನು ಸ್ಪರ್ಶಿಸುವ ಶಕ್ತಿ ಹೊಂದಿವೆ, ಆ ದಾರಿಯಲ್ಲಿ ಮೈಕಲ್ ಡಿಸೋಜಾ ಅದ್ಭುತ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

​ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿದ ರೇಮಂಡ್ ಡಿಕುನ್ಹಾ ತಾಕೋಡೆ ಅವರು, ಸಹಾಯಧನ ನೀಡುವುದು ದೊಡ್ಡ ವಿಷಯವಲ್ಲ; ಆ ನೆರವು ಸರಿಯಾದ ಉದ್ದೇಶಕ್ಕೆ ಬಳಕೆಯಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಇನ್ನಷ್ಟು ಮುಖ್ಯ ಎಂದರು. ತಮ್ಮ 60ರ ವಯಸ್ಸಿನಲ್ಲಿಯೂ ಬರವಣಿಗೆಯನ್ನು ಮುಂದುವರಿಸಿರುವುದು ಸುತ್ತಮುತ್ತಲಿನವರ ಪ್ರೋತ್ಸಾಹ ಮತ್ತು ಬೆಂಬಲದಿಂದಲೇ ಎಂದು ಕೃತಜ್ಞತೆ ಸಲ್ಲಿಸಿದ ಅವರು, ಕನ್ನಡ ಹಾಗೂ ದೇವನಾಗರಿ ಲಿಪಿಯಲ್ಲಿ ಪ್ರಕಟಗೊಂಡಿರುವ ಈ ಕೃತಿಯನ್ನು ಶೀಘ್ರದಲ್ಲೇ ಗೋವಾದಲ್ಲಿಯೂ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

​ಇದೇ ಸಂದರ್ಭದಲ್ಲಿ ಮೈಕಲ್ ಡಿಸೋಜಾ ಅವರನ್ನು ಗಣ್ಯರು ಶಾಲು ಹೊದಿಸಿ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ MDVK ಸಮಿತಿ ಸದಸ್ಯರಾದ ಮೆಲ್ವಿನ್ ರೊಡ್ರಿಗಸ್, ಟೈಟಸ್ ನೊರೊನ್ಹಾ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಶ್ ಪೂಜಾರಿ ಉಪಸ್ಥಿತರಿದ್ದರು. ಹಿರಿಯ ಪತ್ರಕರ್ತ ಭಾಸ್ಕರ್ ರೈ ಕಟ್ಟ ಕಾರ್ಯಕ್ರಮ ನಿರೂಪಿಸಿದರು ಮತ್ತು ರಿಯಾನಾ ಡಿಕುನ್ಹಾ ವಂದಿಸಿದರು.

Category
ಕರಾವಳಿ ತರಂಗಿಣಿ