ಮಂಗಳೂರು : ಕರಾವಳಿ ಭಾಗದ ಜನರ ಬಹುಕಾಲದ ಬೇಡಿಕೆಯಾಗಿರುವ ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಹೋರಾಟಕ್ಕೆ ಇದೀಗ ಮತ್ತೊಂದು ಮಹತ್ವದ ಆಡಳಿತಾತ್ಮಕ ಬಲ ಸಿಕ್ಕಿದೆ. ರಾಜ್ಯ ಸರ್ಕಾರವೇ ಅಧಿಕೃತವಾಗಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದು ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಲು ಸಿದ್ಧವಿರುವುದಾಗಿ ತಿಳಿಸಿದೆ ಎಂದು ಹೈಕೋರ್ಟ್ ಪೀಠ ಹೋರಾಟ ಸಮಿತಿಯ ಸಂಚಾಲಕ ಹಾಗೂ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ತಿಳಿಸಿದ್ದಾರೆ.
ನಗರದಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಕುರಿತ ಬೇಡಿಕೆ ಕೇವಲ ಬೇಡಿಕೆಯಾಗಿ ಉಳಿದಿಲ್ಲ, ಇದು ಕರಾವಳಿ ಭಾಗದ ಜನರ ನೈಜ ಹಕ್ಕಿನ ಹೋರಾಟವಾಗಿ ರೂಪುಗೊಂಡಿದೆ. ಈ ವಿಷಯ ವಿಧಾನಸಭೆ, ವಿಧಾನ ಪರಿಷತ್, ವಕೀಲರ ವಲಯ, ಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾಮಾನ್ಯ ಜನರ ಮಟ್ಟದಲ್ಲಿಯೂ ವ್ಯಾಪಕ ಚರ್ಚೆಗೆ ಒಳಪಟ್ಟಿದ್ದು, ಹೋರಾಟಗಳು ಮತ್ತು ಜಾಥಾಗಳು ಕೂಡ ನಡೆದಿವೆ ಎಂದರು. ಸುಮಾರು ಒಂದು ವರ್ಷದ ಹಿಂದೆಯೇ ಸರ್ಕಾರದ ಬಜೆಟ್‌ನಲ್ಲಿ ಹೈಕೋರ್ಟ್ ಪೀಠಕ್ಕೆ ಸಂಬಂಧಿಸಿದಂತೆ ಅನುದಾನ ಮೀಸಲಿಡುವ ವಿಚಾರ ಚರ್ಚೆಯಾಗಿತ್ತು. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಮನವಿ ಮಾಡಿದಾಗ, ಅವರು ಕೂಡ ಇದೊಂದು ನೈಜ ಬೇಡಿಕೆ ಎಂದು ಒಪ್ಪಿ ಮುಖ್ಯ ನ್ಯಾಯಮೂರ್ತಿಗಳ ಜೊತೆ ಚರ್ಚೆ ನಡೆಸುವುದಾಗಿ ಭರವಸೆ ನೀಡಿದ್ದರು. ನಂತರ ಸರ್ಕಾರದ ಮಟ್ಟದಲ್ಲಿ ಕಾನೂನು ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಸ್ಪೀಕರ್ ಹಾಗೂ ವಿವಿಧ ಪಕ್ಷಗಳ ಜನಪ್ರತಿನಿಧಿಗಳು ಭಾಗವಹಿಸಿ ಈ ಬೇಡಿಕೆಗೆ ಪಕ್ಷಾತೀತ ಬೆಂಬಲ ವ್ಯಕ್ತಪಡಿಸಿದ್ದರು.
ಕೆಲವರು ಈ ಪ್ರಕ್ರಿಯೆಯು ಕೇವಲ ಪ್ರಾಥಮಿಕ ಹಂತದಲ್ಲಿದೆ ಎಂದು ಹೇಳುತ್ತಿದ್ದರೂ, ಇದೀಗ ಸರ್ಕಾರದ ಅಧಿಕೃತ ಪತ್ರವೇ ಹೋರಾಟಕ್ಕೆ ದೊಡ್ಡ ಶಕ್ತಿಯನ್ನು ನೀಡಿದೆ. ಮಾಜಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಹಾಗೂ ಪ್ರಸ್ತುತ ಆಂಧ್ರ ಪ್ರದೇಶ ರಾಜ್ಯಪಾಲರಾಗಿರುವ ಅಬ್ದುಲ್ ನಝೀರ್ ಅವರನ್ನೂ ಭೇಟಿಯಾಗಿ ಮನವಿ ಮಾಡಲಾಗಿದ್ದು, ಅವರ ಸಹಕಾರದಿಂದ ಮುಖ್ಯ ನ್ಯಾಯಮೂರ್ತಿಗಳೊಂದಿಗೆ ಮಾತುಕತೆ ನಡೆಸುವ ಅವಕಾಶವೂ ದೊರಕಿತ್ತು. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಕೂಡ ನ್ಯಾಯ ವ್ಯವಸ್ಥೆಯ ವಿಕೇಂದ್ರೀಕರಣದ ಅಗತ್ಯತೆಯನ್ನು ಪ್ರತಿಪಾದಿಸಿದ್ದು, ಕಡಿಮೆ ವೆಚ್ಚದಲ್ಲಿ ಹಾಗೂ ಕಡಿಮೆ ಸಮಯದಲ್ಲಿ ಜನರಿಗೆ ನ್ಯಾಯ ದೊರಕಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಮುಖ್ಯಮಂತ್ರಿಗಳಿಂದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಅಧಿಕೃತ ಪತ್ರ ರವಾನೆಯಾಗಿದ್ದು, ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಆರಂಭಿಸಲು ರಾಜ್ಯ ಸರ್ಕಾರ ಸಂಪೂರ್ಣ ಸಿದ್ಧವಿದೆ ಎಂದು ಸ್ಪಷ್ಟಪಡಿಸಲಾಗಿದೆ. ಮಂಗಳೂರಿನ ಹಳೆಯ ಡಿಸಿ ಕಚೇರಿ ಕಟ್ಟಡವನ್ನು ಹೈಕೋರ್ಟ್ ಕಾರ್ಯಾಚರಣೆಗೆ ಗುರುತಿಸಲಾಗಿದ್ದು, ಸುಮಾರು 50 ಸಾವಿರ ಚದರ್ ಅಡಿ ವಿಸ್ತೀರ್ಣದ ಈ ಕಟ್ಟಡವನ್ನು ತಕ್ಷಣ ಬಳಸಬಹುದಾಗಿದೆ ಎಂದು ಸರ್ಕಾರ ಪತ್ರದಲ್ಲಿ ತಿಳಿಸಿದೆ. ನ್ಯಾಯಮೂರ್ತಿಗಳ ವಸತಿ ವ್ಯವಸ್ಥೆಗಾಗಿ ಅಗತ್ಯ ಕ್ವಾಟ್ರಸ್ಗಳನ್ನು ಗುರುತಿಸಲಾಗಿದ್ದು, ಯಾವುದೇ ವಿಳಂಬವಿಲ್ಲದೆ ಕಾರ್ಯನಿರ್ವಹಣೆಗೆ ಬೇಕಾದ ಆಡಳಿತಾತ್ಮಕ, ಲಾಜಿಸ್ಟಿಕ್ ಹಾಗೂ ಮೂಲ ಸೌಕರ್ಯಗಳನ್ನು ಕಲ್ಪಿಸಲು ಸರ್ಕಾರ ಬದ್ಧವಾಗಿದೆ.
ಈ ಸಂಬಂಧ ಜಿಲ್ಲಾಧಿಕಾರಿಗಳ ಜೊತೆಗೂ ಚರ್ಚೆ ನಡೆಸಲಾಗಿದ್ದು, ಹೈಕೋರ್ಟ್ ಪೀಠಕ್ಕೆ ಬೇಕಾಗುವ ಸೌಕರ್ಯಗಳ ಬಗ್ಗೆ ಸ್ಥಳ ಪರಿಶೀಲನೆ ನಡೆಸಲಾಗಿದೆ. ಬೋಳಾರ ಹಾಗೂ ಬೊಕ್ಕಪಟ್ಣ ಭಾಗದಲ್ಲಿರುವ ಸರ್ಕಾರಿ ಕ್ವಾಟರ್ಸ್‌ಗಳನ್ನೂ ಪರಿಶೀಲಿಸಿದ್ದು, ಅಗತ್ಯವಿದ್ದರೆ ಹಳೆಯ ಕಟ್ಟಡಗಳನ್ನು ತೆರವುಗೊಳಿಸಿ ಹೊಸ ವಸತಿ ಸೌಲಭ್ಯ ನಿರ್ಮಿಸುವ ಬಗ್ಗೆ ಚರ್ಚಿಸಲಾಗಿದೆ. ಹೈಕೋರ್ಟ್ ಪೀಠಕ್ಕೆ ಸಂಬಂಧಿಸಿದ ಸೌಕರ್ಯಗಳ ಒದಗಿಸುವಿಕೆಗೆ ಪ್ರತ್ಯೇಕ ಅಧಿಕಾರಿಯನ್ನು ನೇಮಿಸಿ, ಎಲ್ಲಾ ಕೆಲಸಗಳನ್ನು ವೇಗವಾಗಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿದೆ.
ಅಕ್ಟೋಬರ್ ಒಳಗೆ ಮಂಗಳೂರಿನಲ್ಲಿ ಸರ್ಕ್ಯೂಟ್ ಬೆಂಚ್ ಕಾರ್ಯಾರಂಭ ಮಾಡಬೇಕು ಎಂಬುದು ಹೋರಾಟ ಸಮಿತಿಯ ಆಶಯವಾಗಿದ್ದು, ಮುಖ್ಯ ನ್ಯಾಯಮೂರ್ತಿಗಳು ಮೇ ಅಂತ್ಯ ಅಥವಾ ಜೂನ್ ಮೊದಲ ವಾರದಲ್ಲಿ ಮಂಗಳೂರಿಗೆ ಭೇಟಿ ನೀಡಿ ಮೂಲಸೌಕರ್ಯಗಳನ್ನು ಪರಿಶೀಲಿಸುವ ಸಾಧ್ಯತೆ ಇದೆ. ಮುಂದಿನ ಹಂತದಲ್ಲಿ ಇದನ್ನು ಶಾಶ್ವತ ಹೈಕೋರ್ಟ್ ಶಾಖೆಯನ್ನಾಗಿ ಅಭಿವೃದ್ಧಿಪಡಿಸುವ ಉದ್ದೇಶವಿದ್ದು, ಹಳೆಯ ಜೈಲು ಪ್ರದೇಶ ಹಾಗೂ ಇತರೆ ಸರ್ಕಾರಿ ಕಟ್ಟಡಗಳನ್ನು ಭವಿಷ್ಯದ ವಿಸ್ತರಣೆಗೆ ಬಳಸುವ ಸಾಧ್ಯತೆಗಳನ್ನೂ ಪರಿಗಣಿಸಲಾಗುತ್ತಿದೆ ಎಂದು ಐವನ್ ಡಿಸೋಜ ಮಾಹಿತಿ ನೀಡಿದ್ದಾರೆ.