ಮಂಗಳೂರು: ಗೇರು ಬೆಳೆಯನ್ನು ಪ್ರೋತ್ಸಾಹಿಸುವ ಮತ್ತು ರೈತರಲ್ಲಿ ಹೊಸ ಉತ್ಸಾಹ ತುಂಬುವ ಉದ್ದೇಶದಿಂದ, ಗೇರು ಅಭಿವೃದ್ಧಿ ನಿಗಮದ ವತಿಯಿಂದ ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಎರಡು ದಿನಗಳ ಬೃಹತ್ 'ಗೇರು ಮೇಳ' ಮತ್ತು ಮಾಹಿತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದ್ದು, ನಿಗಮವು ಆರಂಭವಾಗಿ 48 ವರ್ಷಗಳನ್ನು ಪೂರೈಸುತ್ತಿರುವ ಸಂಭ್ರಮದ ಅಂಗವಾಗಿ ಈ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ನಿಗಮದ ಅಧ್ಯಕ್ಷರಾದ ಮಮತಾ ಗಟ್ಟಿ ತಿಳಿಸಿದ್ದಾರೆ. ಅವರು ನಗರದಲ್ಲಿರುವ ನಿಗಮದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ,
ಇತ್ತೀಚಿನ ದಿನಗಳಲ್ಲಿ ಗೇರು ಬೆಳೆ ಕಡಿಮೆಯಾಗುತ್ತಿರುವುದನ್ನು ಗಮನಿಸಿ, ಅದಕ್ಕೆ ಮರುಜೀವ ನೀಡಲು ಹಾಗೂ ರೈತರಿಗೆ ಗೇರು ಕೃಷಿ ಲಾಭದಾಯಕ ವಾಣಿಜ್ಯ ಬೆಳೆಯಾಗಬಲ್ಲದು ಎಂಬ ಅರಿವು ಮೂಡಿಸಲು ಈ ಮೇಳ ಸಹಕಾರಿಯಾಗಲಿದೆ. ಮೇ 17 ರಂದು ಈಶ್ವರ್ ಖಂಡ್ರೆ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮವು ಉದ್ಘಾಟನೆಗೊಳ್ಳಲಿದ್ದು, ಕಾರ್ಯಕ್ರಮದ ಘನ ಉಪಸ್ಥಿತಿಯನ್ನು ಶ್ರೀ ಯು.ಟಿ. ಖಾದರ್ ಫರೀದ್ ಅವರು ಹಾಗೂ ಗೌರವ ಉಪಸ್ಥಿತಿಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು ವಹಿಸಲಿದ್ದಾರೆ ಎಂದರು.
ಈ ಮೇಳದಲ್ಲಿ 'ಮನೆಗೊಂದು ಗೇರು ಗಿಡ' ಎಂಬ ವಿನೂತನ ಪರಿಕಲ್ಪನೆಯನ್ನು ಪರಿಚಯಿಸಲಾಗುತ್ತಿದ್ದು, ಉಲ್ಲಾಳ ಮತ್ತು ಭಾಸ್ಕರ ಸೇರಿದಂತೆ ಹಲವು ಸುಧಾರಿತ ತಳಿಗಳ ಗಿಡಗಳನ್ನು ರೈತರಿಗೆ ವಿತರಿಸಲಾಗುವುದು. ಮೇಳದ ಅಂಗವಾಗಿ ಬೆಳಿಗ್ಗೆ ಕದ್ರಿ ಪಾರ್ಕ್‌ನಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ ಹಾಗೂ ಮಕ್ಕಳಿಗೆ ಭಾಷಣ ಮತ್ತು ಚಿತ್ರಕಲಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಮಧ್ಯಾಹ್ನದ ನಂತರ ನಡೆಯಲಿರುವ ತಾಂತ್ರಿಕ ಕಾರ್ಯಾಗಾರದಲ್ಲಿ ತಜ್ಞರಾದ ದಿನಕರ್ ಅಡಿಗ, ಈರಣ್ಣ ಜೆ.ಎಲ್. ಗೌಡ, ಕಡಮಜಲು ಸುಭಾಷ್ ರೈ, ವಿಶ್ವಕೇಶವ್, ನಲ್ಬಾವಿ ಪ್ರಕಾಶ್ ರಾವ್, ಡಾ. ವೆಂಕಟೇಶ್ ಎನ್. ಹುಬ್ಬಳ್ಳಿ, ಡಾ. ಸಿ. ಸುನಿಲ್ ಮತ್ತು ಕೊಚ್ಚಿಯ ಗೇರು ಅಭಿವೃದ್ಧಿ ನಿರ್ದೇಶನಾಲಯದ ಅಧಿಕಾರಿಗಳು ಭಾಗವಹಿಸಿ, ಗೇರು ಬೇಸಾಯದಲ್ಲಿ ಆಧುನಿಕ ತಂತ್ರಜ್ಞಾನ, ಮೌಲ್ಯವರ್ಧನೆ ಮತ್ತು ಗೇರು ಕೃಷಿಯ ಯೋಜನೆಗಳ ಬಗ್ಗೆ ರೈತರಿಗೆ ಸಂಪೂರ್ಣ ಮಾಹಿತಿ ನೀಡಲಿದ್ದಾರೆ. ಗೇರು ಬೆಳೆಯು ರೈತರಿಗೆ ತಕ್ಷಣದ ನಗದು ತಂದುಕೊಡುವ (ರೆಡಿ ಕ್ಯಾಶ್) ಉತ್ತಮ ಬೆಳೆಯಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿಸಿದರು.