ಉಳ್ಳಾಲ: ಇಲ್ಲಿನ ಕೋಟೆಪುರದ ಕಾರ್ಖಾನೆಯಿಂದ ಬಂದರಿಗೆ ಮೀನೆಣ್ಣೆ ಸಾಗಿಸುತ್ತಿದ್ದ ಕಂಟೈನರ್‌ನಿಂದ ತಾಂತ್ರಿಕ ದೋಷದ ಕಾರಣ ರಸ್ತೆ ತುಂಬೆಲ್ಲಾ ಎಣ್ಣೆ ಸೋರಿಕೆಯಾಗಿ, ಹಲವಾರು ದ್ವಿಚಕ್ರ ವಾಹನಗಳು ಸ್ಕಿಡ್ ಆಗಿ ಸವಾರರು ಗಾಯಗೊಂಡಿರುವ ಘಟನೆಗೆ ವಿಧಾನಸಭಾ ಸಭಾಧ್ಯಕ್ಷ ಯು.ಟಿ. ಖಾದರ್ ತೀವ್ರ ವಿಷಾದ ಹಾಗೂ ಕಳವಳ ವ್ಯಕ್ತಪಡಿಸಿದ್ದಾರೆ. ಅಬ್ಬಕ್ಕ ವೃತ್ತದಿಂದ ಉಳ್ಳಾಲ ಬೈಲ್ ವರೆಗಿನ ಮುಖ್ಯ ರಸ್ತೆಯಲ್ಲಿ ಸಂಭವಿಸಿದ ಈ ಅವಘಡದ ಹಿನ್ನೆಲೆಯಲ್ಲಿ ತಕ್ಷಣವೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅವರು ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಸಾರ್ವಜನಿಕರ ಜೀವಕ್ಕೆ ಕುತ್ತು ತರುವ ಇಂತಹ ನಿರ್ಲಕ್ಷ್ಯದ ಘಟನೆಗಳು ಮರುಕಳಿಸದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿರುವ ಯು.ಟಿ. ಖಾದರ್, ಈ ಬೇಜವಾಬ್ದಾರಿತನಕ್ಕೆ ಕಾರಣವಾದ ಕಂಟೈನರ್ ಹಾಗೂ ಸಂಬಂಧಪಟ್ಟ ಫಿಶ್ ಮಿಲ್ ಮಾಲಕರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಮಂಗಳೂರು ಪೊಲೀಸ್ ಕಮಿಷನರ್ ಅವರಿಗೆ ನೇರ ಸೂಚನೆ ನೀಡಿದ್ದಾರೆ. ಉಳ್ಳಾಲ ಭಾಗದಲ್ಲಿ ಕೈಗಾರಿಕಾ ಅಭಿವೃದ್ಧಿಗೆ ನಮ್ಮ ಸಂಪೂರ್ಣ ಬೆಂಬಲವಿದ್ದರೂ, ಸಾರ್ವಜನಿಕರ ಜನಜೀವನಕ್ಕೆ ತೊಂದರೆ ಉಂಟುಮಾಡುವ ಮತ್ತು ಜನರ ಸುರಕ್ಷತೆಗೆ ಧಕ್ಕೆ ತರುವ ಯಾವುದೇ ಚಟುವಟಿಕೆಗಳನ್ನು ಸಹಿಸಲು ಸಾಧ್ಯವಿಲ್ಲ ಎಂದು ಅವರು ಕಡಕ್ ಎಚ್ಚರಿಕೆ ನೀಡಿದ್ದಾರೆ.
ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ಸವಾರರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಕಂಟೈನರ್‌ಗೆ ಸಂಬಂಧಿಸಿದ ಫಿಶ್ ಮಿಲ್ ಮಾಲಕರುಗಳೇ ಭರಿಸಬೇಕು ಎಂದು ಒತ್ತಾಯಿಸಿರುವ ಸಭಾಧ್ಯಕ್ಷರು, ಗಾಯಾಳುಗಳು ಶೀಘ್ರವಾಗಿ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ಉಳ್ಳಾಲ ಬೈಲ್ ಬಳಿ ವಾಹನವನ್ನು ತಡೆದು ಪ್ರತಿಭಟನೆ ನಡೆಸಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ರಸ್ತೆಗೆ ಮಣ್ಣು ಹಾಗೂ ಧೂಳು ಹಾಕಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.