ಉಜಿರೆ: ಇಂದಿನ ಮತ್ತು ಮುಂದಿನ ದಿನಗಳಲ್ಲಿ ಕೌಶಲ್ಯ ಆಧಾರಿತ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವಿದ್ದು, ತಾಂತ್ರಿಕ ಜ್ಞಾನ ಹೊಂದಿದ ಯುವಕರಿಗೆ ಉದ್ಯೋಗ ಮಾರುಕಟ್ಟೆಯಲ್ಲಿ ಉತ್ತಮ ಅವಕಾಶಗಳು ಲಭ್ಯವಿವೆ ಎಂದು ಮುಂಬೈನ ಭಾರತೀಯ ರಿಸರ್ವ್ ಬ್ಯಾಂಕ್‌ನ ವಿಭಾಗೀಯ ಮಹಾ ಪ್ರಬಂಧಕರಾದ ಶ್ರೀಮತಿ ಕರ್ಪಗಮ್ ಅವರು ಅಭಿಪ್ರಾಯಪಟ್ಟರು.
ಸ್ಥಳೀಯ ರುಡ್‌ಸೆಟ್ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಟಿ.ವಿ ಟೆಕ್ನಿಷಿಯನ್ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ತರಬೇತಿ ಪಡೆದ ಯುವಕರು ಕೇವಲ ಜ್ಞಾನಕ್ಕೆ ಸೀಮಿತವಾಗದೆ, ತಮ್ಮ ಕೌಶಲ್ಯವನ್ನು ನಿರಂತರವಾಗಿ ನವೀಕರಿಸಿಕೊಳ್ಳಬೇಕು. ವೃತ್ತಿಜೀವನದಲ್ಲಿ ಪ್ರಾಮಾಣಿಕತೆ ಮತ್ತು ಶಿಸ್ತನ್ನು ಮೈಗೂಡಿಸಿಕೊಂಡರೆ ಮಾತ್ರ ಉನ್ನತ ಯಶಸ್ಸು ಸಾಧಿಸಲು ಸಾಧ್ಯ ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಇದೇ ಸಂದರ್ಭದಲ್ಲಿ ತರಬೇತಿ ಪೂರೈಸಿದ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಶುಭ ಹಾರೈಸಿದರು.
ಕಾರ್ಯಕ್ರಮದ ಆರಂಭದಲ್ಲಿ ರುಡ್‌ಸೆಟ್ ಸಂಸ್ಥೆಯ ನಿರ್ದೇಶಕರಾದ ಶ್ರೀ ಅಜಯ್ ಅವರು ಅತಿಥಿಗಳನ್ನು ಸ್ವಾಗತಿಸಿ, ತರಬೇತಿ ಕಾರ್ಯಕ್ರಮದ ರೂಪರೇಷೆ ಹಾಗೂ ಅದರ ಮಹತ್ವದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಉಪನ್ಯಾಸಕಿ ಶ್ರೀಮತಿ ಮಧುರಿ ಉಪಸ್ಥಿತರಿದ್ದರು. ಹಿರಿಯ ಉಪನ್ಯಾಸಕರಾದ ಶ್ರೀ ಅಬ್ರಹಾಂ ಜೇಮ್ಸ್ ಪಿ.ವಿ. ಕಾರ್ಯಕ್ರಮ ನಿರ್ವಹಿಸಿದರೆ, ಶ್ರೀ ಕೆ. ಕರುಣಾಕರ ಜೈನ್ ವಂದಿಸಿದರು.
ಕುಮಾರಿ ಪ್ರಭಾ ಹಾಗೂ ಕುಮಾರಿ ಪೂಜಾ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ತರಬೇತಿ ಪಡೆದ ಅಭ್ಯರ್ಥಿಗಳ ಪರವಾಗಿ ಶ್ರೀ ಬಸಯ್ಯ ಮತ್ತು ಕುಮಾರಿ ಸಾಂಡ್ರ ಡಿ’ಸೋಜಾ ತಮ್ಮ ಅನುಭವಗಳನ್ನು ಹಂಚಿಕೊಂಡು, ಸ್ವಾವಲಂಬಿ ಜೀವನಕ್ಕೆ ದಾರಿ ಮಾಡಿಕೊಟ್ಟ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.