ಮಂಗಳೂರು : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯಲ್ಲಿ ಭಾರೀ ಅಕ್ರಮ ಹಾಗೂ ಆಡಳಿತಾತ್ಮಕ ಲೋಪವೊಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಜಿಲ್ಲೆಯಲ್ಲಿ ಈಗಾಗಲೇ ಮೃತಪಟ್ಟಿರುವ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಅಂದಾಜು 22 ಕೋಟಿ ರೂಪಾಯಿ ಹಣ ಜಮೆಯಾಗಿರುವುದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪರಿಶೀಲನಾ ಸಮಿತಿ ಸಭೆಯಲ್ಲಿ ಬಹಿರಂಗವಾಗಿದೆ. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಈ ಗಂಭೀರ ವಿಚಾರವನ್ನು ಪ್ರಸ್ತಾಪಿಸಿದ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಅವರು, ಮೃತಪಟ್ಟವರ ಹೆಸರಿನಲ್ಲಿ ವರ್ಗಾವಣೆಯಾಗಿರುವ ಹಣವನ್ನು ಕೂಡಲೇ ಸರ್ಕಾರಕ್ಕೆ ಮರಳಿ ಪಡೆಯಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ರಾಜ್ಯ ಕಚೇರಿಯಿಂದ ಬಂದಿರುವ ಅಂಕಿಅಂಶಗಳ ಪ್ರಕಾರ, ಬಳಕೆಯಲ್ಲಿಲ್ಲದ ಮತ್ತು ಮೃತ ಫಲಾನುಭವಿಗಳ ಖಾತೆಗಳಿಗೆ ಹಣ ವರ್ಗಾವಣೆ ಮುಂದುವರಿಯುತ್ತಿರುವುದು ಆತಂಕಕಾರಿ ಎಂದು ಸಭೆಯಲ್ಲಿ ಚರ್ಚಿಸಲಾಯಿತು.
ಕೇವಲ ಮೃತರಿಗೆ ಹಣ ಸಂದಾಯವಾಗಿರುವುದು ಮಾತ್ರವಲ್ಲದೆ, ಜಿಲ್ಲೆಯಲ್ಲಿ ಕೆಲವು ಜೀವಂತ ಫಲಾನುಭವಿಗಳನ್ನು ಇಲಾಖೆಯ ದಾಖಲೆಗಳಲ್ಲಿ 'ಮೃತ' ಎಂದು ಗುರುತಿಸಿರುವ ಆಘಾತಕಾರಿ ಲೋಪಗಳೂ ಪತ್ತೆಯಾಗಿವೆ. ಈ ವ್ಯತ್ಯಾಸಗಳ ಕುರಿತು ಸಮಗ್ರ ತನಿಖೆ ನಡೆಸಿ ಮುಂದಿನ ಸಭೆಯೊಳಗೆ ವರದಿ ಸಲ್ಲಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಾಹಿತಿ ಅನ್ವಯ, ಜಿಲ್ಲೆಯಲ್ಲಿ ಒಟ್ಟು 4,25,759 ಪಡಿತರ ಚೀಟಿ ಹೊಂದಿದವರಿದ್ದು, ಈ ಪೈಕಿ 3,82,178 ಮಂದಿ ಯೋಜನೆಯಡಿ ನೋಂದಾಯಿಸಿಕೊಂಡಿದ್ದಾರೆ. ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿಯಲ್ಲಿರುವ ಮರಣ ದಾಖಲೆಗಳನ್ನು ಆಧರಿಸಿ, ಬ್ಯಾಂಕ್‌ಗಳು ಹಾಗೂ ಸ್ಥಳೀಯ ಆಡಳಿತದೊಂದಿಗೆ ಸಮನ್ವಯ ಸಾಧಿಸಿ ಇಂತಹ ಖಾತೆಗಳನ್ನು ತಕ್ಷಣವೇ ಸ್ಥಗಿತಗೊಳಿಸಲು ಮತ್ತು ಮುಂದಿನ ದಿನಗಳಲ್ಲಿ ಹಣ ಜಮೆಯಾಗದಂತೆ ತಡೆಯಲು ಜಿಲ್ಲಾಡಳಿತ ನಿರ್ಧರಿಸಿದೆ.