ಮಂಗಳೂರು: ಅಶಕ್ತರ ಪಾಲಿನ ಆಶಾಕಿರಣ ಎಂದೇ ಗುರುತಿಸಿಕೊಂಡಿರುವ ಬೆಳ್ತಂಗಡಿಯ ಯುವ ಸಮಾಜ ಸೇವಕ ದೀಪಕ್ ಜಿ. ಅವರು ಮಂಗಳೂರು ಪ್ರೆಸ್ ಕ್ಲಬ್‌ನ 2025-26ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅನಾರೋಗ್ಯ ಪೀಡಿತ ಬಡವರ ಚಿಕಿತ್ಸೆಗೆ ನೆರವು, ಸೂರಿಲ್ಲದ ಕುಟುಂಬಗಳಿಗೆ ಮನೆ ನಿರ್ಮಾಣ, ಉಚಿತ ಆರೋಗ್ಯ ಶಿಬಿರ ಹಾಗೂ ಸರ್ಕಾರಿ ಶಾಲೆಗಳ ಶೌಚಾಲಯ ಸ್ವಚ್ಛತಾ ಅಭಿಯಾನದಂತಹ ಹತ್ತು ಹಲವು ಸೇವಾ ಕಾರ್ಯಗಳನ್ನು ಗುರುತಿಸಿ ಇವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ನೇತೃತ್ವದ ಸಮಿತಿಯು ದೀಪಕ್ ಅವರನ್ನು ಆಯ್ಕೆ ಮಾಡಿದ್ದು, ಪ್ರಶಸ್ತಿಯು 10,001 ರೂ. ನಗದು, ಪ್ರಶಸ್ತಿ ಫಲಕ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ. ಮೇ 24ರಂದು ಮಂಗಳೂರಿನ ರೆಡ್ ಕ್ರಾಸ್ ಶತಮಾನೋತ್ಸವ ಭವನದಲ್ಲಿ ನಡೆಯಲಿರುವ ಮಂಗಳೂರು ಪ್ರೆಸ್ ಕ್ಲಬ್ ದಿನಾಚರಣೆಯಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಪ್ರೆಸ್ ಕ್ಲಬ್‌ನ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಡ ಕುಟುಂಬದ ಹಿನ್ನೆಲೆಯ ದೀಪಕ್ ಜಿ. ಅವರು ಖಾಸಗಿ ಬಸ್ ನಿರ್ವಾಹಕರಾಗಿ ವೃತ್ತಿ ಬದುಕು ಆರಂಭಿಸಿದವರು. ಅಲ್ಪ ಆದಾಯದ ನಡುವೆಯೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಮಗುವಿನ ಚಿಕಿತ್ಸೆಗೆ ಗೆಳೆಯರೊಂದಿಗೆ ಹಣ ಸಂಗ್ರಹಿಸುವ ಮೂಲಕ ಇವರ ಸೇವಾ ಪಯಣ ಆರಂಭವಾಯಿತು. 2012ರಲ್ಲಿ ಇವರು ಸ್ಥಾಪಿಸಿದ 'ರಾಜಕೇಸರಿ ಸೇವಾ ಟ್ರಸ್ಟ್' ಮೂಲಕ ಈವರೆಗೆ 34 ಬಡ ಕುಟುಂಬಗಳಿಗೆ ಉಚಿತ ಮನೆ ನಿರ್ಮಿಸಿಕೊಟ್ಟಿದ್ದಾರೆ. ಅಲ್ಲದೆ, 21 ಹೊಲಿಗೆ ಯಂತ್ರ, 38 ವೀಲ್ ಚೇರ್‌ಗಳ ವಿತರಣೆ, 12 ಜೋಡಿಗಳ ಸಾಮೂಹಿಕ ವಿವಾಹ ಹಾಗೂ 600ಕ್ಕೂ ಅಧಿಕ ಸೇವಾ ಯೋಜನೆಗಳನ್ನು ಕಾರ್ಯಗತಗೊಳಿಸಿದ್ದಾರೆ.
ವಿಶೇಷವಾಗಿ ಸರ್ಕಾರಿ ಶಾಲೆಗಳ 16ಕ್ಕೂ ಹೆಚ್ಚು ಶೌಚಾಲಯಗಳನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿ ನವೀಕರಿಸಿರುವ ದೀಪಕ್, ರಕ್ತದಾನ ಶಿಬಿರಗಳ ಮೂಲಕ 14,000ಕ್ಕೂ ಹೆಚ್ಚು ಮಂದಿಯಿಂದ ರಕ್ತದಾನ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇವರು ಸ್ವತಃ 37 ಬಾರಿ ರಕ್ತದಾನ ಮಾಡಿದ್ದು, ಒಂದೇ ದಿನ 543 ಮಂದಿಯಿಂದ ನೇತ್ರದಾನ ನೋಂದಣಿ ಮಾಡಿಸಿ ದಾಖಲೆ ಬರೆದಿದ್ದಾರೆ. ಕೊರೊನಾ ಸಂದರ್ಭದಲ್ಲಿ 85 ಮೃತದೇಹಗಳ ಅಂತಿಮ ಸಂಸ್ಕಾರ ನಡೆಸಿ ಮಾನವೀಯತೆ ಮೆರೆದಿದ್ದಾರೆ. ಸದ್ಯ ಬೆಳ್ತಂಗಡಿಯ ಸಾನಿಧ್ಯ ಕೌಶಲ ತರಬೇತಿ ಕೇಂದ್ರದ ಬಸ್ ಚಾಲಕನಾಗಿ ದುಡಿಯುತ್ತಿರುವ ದೀಪಕ್ ಅವರ ಸೇವಾ ಮನೋಭಾವ ಇಡೀ ಸಮಾಜಕ್ಕೆ ಮಾದರಿಯಾಗಿದೆ.