ಮಂಗಳೂರು: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮೂಡಾ) ವತಿಯಿಂದ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 53ನೇ ಬಜಾಲ್ ವಾರ್ಡ್‌ನ ಕುಂದೋಡಿ ಕೆರೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಿ. ವೇದವ್ಯಾಸ ಕಾಮತ್ ಅವರು ಇತ್ತೀಚೆಗೆ ಶಿಲಾನ್ಯಾಸ ನೆರವೇರಿಸಿದರು. ಸುಮಾರು 25 ಲಕ್ಷ ರೂಪಾಯಿ ಅನುದಾನದಲ್ಲಿ ಈ ಕಾಮಗಾರಿ ನಡೆಯಲಿದೆ.
ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಶಾಸಕರು, "ಸ್ಥಳೀಯ ನಿವಾಸಿಗಳು ವಿಶ್ರಾಂತಿಗಾಗಿ ಬಳಸುವ ಈ ಕೆರೆಯನ್ನು ಈ ಹಿಂದೆಯೇ ಒಂದು ಹಂತದಲ್ಲಿ ಅಭಿವೃದ್ಧಿಪಡಿಸಲಾಗಿತ್ತು. ಇದೀಗ ಸಾರ್ವಜನಿಕರ ಬೇಡಿಕೆಗೆ ಸ್ಪಂದಿಸಿ, ಮುಂದುವರಿದ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಯೋಜನೆಯ ಕುರಿತು ಮೂಡಾ ಸಭೆಯಲ್ಲಿ ನಾನು ಸಲ್ಲಿಸಿದ ಮನವಿಗೆ ತಕ್ಷಣ ಸ್ಪಂದಿಸಿದ ಪ್ರಾಧಿಕಾರದ ಅಧ್ಯಕ್ಷರಾದ ಸದಾಶಿವ ಉಳ್ಳಾಲ್ ಹಾಗೂ ಸರ್ವ ಸದಸ್ಯರಿಗೂ ಅಭಿನಂದನೆ ಸಲ್ಲಿಸುತ್ತೇನೆ," ಎಂದು ತಿಳಿಸಿದರು.
ಅಲ್ಲದೆ, ಕೆರೆಯ ಅಭಿವೃದ್ಧಿಯ ನಂತರ ಅದರ ಸುಸ್ಥಿತಿ ಕಾಪಾಡಲು ಸ್ಥಳೀಯ ಸಂಘ-ಸಂಸ್ಥೆಗಳು ಮುಂದೆ ಬರಬೇಕು. ಮೇಲ್ವಿಚಾರಣೆಯ ಹೊಣೆಯನ್ನು ಸಂಘಟನೆಗಳು ವಹಿಸಿಕೊಂಡರೆ ಸಾರ್ವಜನಿಕರಿಗೆ ದೀರ್ಘಕಾಲದವರೆಗೆ ಇದರ ಪ್ರಯೋಜನ ದೊರೆಯಲಿದೆ ಎಂದು ಅವರು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಮೂಡಾ ಆಯುಕ್ತರಾದ ಮೊಹಮ್ಮದ್ ನಜೀರ್, ಪ್ರಮುಖರಾದ ಚಂದ್ರಶೇಖರ್ ಬಜಾಲ್, ನೀರಚ್‌ಚಂದ್ರ ಪಾಲ್, ಸುಮನ್‌ದಾಸ್, ಅಬ್ದುಲ್ ಜಲೀಲ್, ಸಭಿತಾ ಮಿಸ್ಕತ್, ವಿನೇಶ್, ಅಶೋಕ್, ಮೋಹನ್ ಟೈಲರ್, ಮೋಹನ್ ದಾಸ್, ದೀಕ್ಷಿತ್, ದೀಪಕ್ ಡಿಸೋಜ, ಮೀನಾಕ್ಷಿ, ಕುಶಾಲ, ಹೇಮಲತಾ, ಮಮತಾ, ಅನಿಶಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.