image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಪ್ರತಿಭಾ ದಿನಾಚರಣೆ: ಕೌಶಲ್ಯವೃದ್ಧಿಗೆ ಗಣ್ಯರ ಕರೆ

ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಪ್ರತಿಭಾ ದಿನಾಚರಣೆ: ಕೌಶಲ್ಯವೃದ್ಧಿಗೆ ಗಣ್ಯರ ಕರೆ

ಮಂಗಳೂರು: ಇಲ್ಲಿನ ವಿಶ್ವವಿದ್ಯಾನಿಲಯ ಕಾಲೇಜಿನ ಲಲಿತ ಕಲಾ ಸಂಘದ ವತಿಯಿಂದ ಪ್ರತಿಭಾ ದಿನಾಚರಣೆಯು ಕಾಲೇಜಿನ ಆವರಣದಲ್ಲಿ ಇಂದು ಅತ್ಯಂತ ಸಂಭ್ರಮದಿಂದ ಜರುಗಿತು.

​ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ನಿವೃತ್ತ ಸೇನಾಧಿಕಾರಿ ಹಾಗೂ ಕಾಲೇಜಿನ ಹಳೆಯ ವಿದ್ಯಾರ್ಥಿ ಸಂಘದ ನಿಕಟಪೂರ್ವ ಅಧ್ಯಕ್ಷ ಕರ್ನಲ್ ನಿಟ್ಟೆ ಗುತ್ತು ಶರತ್ ಬಂಡಾರಿ ಅವರು ಮಾತನಾಡಿ, "ಕಾಲೇಜು ದಿನಗಳಲ್ಲಿ ದೊರೆಯುವ ಶಿಕ್ಷಣದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದು ಬಹಳ ಮುಖ್ಯ. ಇದು ವಿದ್ಯಾರ್ಥಿಗಳಿಗೆ ಮುಂದೆ ಸಿಗುವ ವಿವಿಧ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳಲು ನೆರವಾಗುತ್ತದೆ," ಎಂದು ಕಿವಿಮಾತು ಹೇಳಿದರು.
​ಮತ್ತೊಬ್ಬ ಅತಿಥಿ, ಮಂಗಳೂರಿನ ಸೌರಭ ಕಲಾ ಪರಿಷತ್‌ನ ನಿರ್ದೇಶಕಿ ಡಾ. ಶ್ರೀ ವಿದ್ಯಾ ಅವರು ಮಾತನಾಡಿ, "ಕೇವಲ ಸರ್ಕಾರಿ ಹುದ್ದೆಗಳನ್ನೇ ನಿರೀಕ್ಷಿಸುತ್ತಾ ಕೂರುವ ಬದಲು, ನಮ್ಮಲ್ಲಿರುವ ಸುಪ್ತ ಪ್ರತಿಭೆ ಹಾಗೂ ಕೌಶಲ್ಯಗಳನ್ನು ಗುರುತಿಸಿ ಬಳಸಿಕೊಳ್ಳಬೇಕು. ಆ ಮೂಲಕ ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ತಲುಪಲು ಸಾಧ್ಯವಿದೆ," ಎಂದು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು.
​ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ ಎಸ್. ಅವರು ಮಾತನಾಡಿ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಶ್ಲಾಘಿಸಿ, ಕಾಲೇಜಿನಿಂದ ನಿರ್ಗಮಿಸುತ್ತಿರುವ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ವೇದಿಕೆಯಲ್ಲಿ ಲಲಿತ ಕಲಾ ಸಂಘದ ಸಹ ನಿರ್ದೇಶಕಿ ಡಾ. ನಾಗರತ್ನ ಕೆ.ಎ, ವಿದ್ಯಾರ್ಥಿ ಸಂಘದ ಉಪ ನಿರ್ದೇಶಕ ಪ್ರೊ. ಜಯವಂತ್ ನಾಯಕ್, ವಿದ್ಯಾರ್ಥಿ ಸಂಘದ ಅಧ್ಯಕ್ಷ ಕಾರ್ತಿಕ್ ಆಚಾರಿ, ಕಾರ್ಯದರ್ಶಿ ನಿಧಿ, ಲಲಿತ ಕಲಾ ಸಂಘದ ವಿದ್ಯಾರ್ಥಿ ಕಾರ್ಯದರ್ಶಿ ಸುಪ್ರಿತ ಬಿ. ಮತ್ತು ಸಹ ಕಾರ್ಯದರ್ಶಿ ಶಿವಾನಿ ಕೆ. ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ