ಮಂಗಳೂರು : ಮುಂಬಯಿ ಅಜೆಕಾರು ಕಲಾಭಿಮಾನಿ ಬಳಗವು ತನ್ನ ರಜತ ಮಹೋತ್ಸವದ ಅಂಗವಾಗಿ 2026ರ ಅಕ್ಟೋಬರ್ 3 ಮತ್ತು 4ರಂದು ಮುಂಬಯಿ ಬಂಟರ ಭವನದಲ್ಲಿ ಆಯೋಜಿಸಿರುವ ಬೃಹತ್ ಯಕ್ಷಗಾನ ಸಮ್ಮೇಳನದ ಅಧ್ಯಕ್ಷರಾಗಿ ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಡಾ. ಟಿ. ಶ್ಯಾಮ ಭಟ್ ಅವರು ಅಧಿಕೃತವಾಗಿ ಆಯ್ಕೆಯಾಗಿದ್ದಾರೆ. ಮಂಗಳೂರಿನಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಅಜೆಕಾರು ಬಾಲಕೃಷ್ಣ ಶೆಟ್ಟಿ ನೇತೃತ್ವದ ನಿಯೋಗವು ಭಟ್ ಅವರನ್ನು ಭೇಟಿ ಮಾಡಿ ಈ ಗೌರವದ ಆಹ್ವಾನವನ್ನು ನೀಡಿತು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ಅವರು ಶ್ಯಾಮ ಭಟ್ಟರನ್ನು ಅಭಿನಂದಿಸಿದರು ಮತ್ತು ಪ್ರಧಾನ ಸಂಚಾಲಕ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರು ಸಮ್ಮೇಳನದ ವೈವಿಧ್ಯಮಯ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.
ಗೌರವ ಸ್ವೀಕರಿಸಿ ಮಾತನಾಡಿದ ಡಾ. ಶ್ಯಾಮ ಭಟ್ ಅವರು, ಮುಂಬಯಿಯಲ್ಲಿ ದಶಕಗಳ ಬಳಿಕ ಇಂತಹದೊಂದು ದೊಡ್ಡ ಮಟ್ಟದ ಸಮ್ಮೇಳನ ನಡೆಯುತ್ತಿರುವುದು ಸಂತಸದ ವಿಷಯವಾಗಿದ್ದು, ಯಕ್ಷಗಾನ ಕಲೆಯನ್ನು ಮುಂದಿನ ಪೀಳಿಗೆಗೆ ದಾಟಿಸುವ ಜವಾಬ್ದಾರಿಯನ್ನು ಈ ಸಮ್ಮೇಳನ ಯಶಸ್ವಿಯಾಗಿ ನಿರ್ವಹಿಸಲಿ ಎಂದು ಆಶಯ ವ್ಯಕ್ತಪಡಿಸಿದರು. 1992ರ ಬ್ಯಾಚಿನ ಐಎಎಸ್ ಅಧಿಕಾರಿಯಾಗಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದರೂ, ಮೂಲತಃ ಕೃಷಿಕ ಕುಟುಂಬದಿಂದ ಬಂದ ಭಟ್ಟರು ಯಕ್ಷಗಾನದ ಮೇಲಿನ ಪ್ರೀತಿಯಿಂದಾಗಿ ಹೊಸನಗರ, ಎಡನೀರು ಹಾಗೂ ಪ್ರಸ್ತುತ ಹನುಮಗಿರಿ ಮೇಳಗಳ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಲಾವಿದರ ಆರ್ಥಿಕ ಸಬಲೀಕರಣಕ್ಕೆ ನೆರವಾಗುತ್ತಿರುವ ಅವರನ್ನು ಕಲಾಕ್ಷೇತ್ರವು 'ಕಲಾವಿದರ ಕಾಮಧೇನು' ಎಂದೇ ಗುರುತಿಸುತ್ತಿದ್ದು, ಈ ಆಯ್ಕೆಯು ಕಲಾಪೋಷಕರಿಗೆ ಸಂದ ಗೌರವವಾಗಿದೆ ಎಂದು ಕಲಾಪ್ರೇಮಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.