ಮಂಗಳೂರು: ಮಂಗಳೂರು ರೈಫಲ್ ಕ್ಲಬ್ ವತಿಯಿಂದ '2ನೇ ಮಂಗಳೂರು ಓಪನ್ ಶೂಟಿಂಗ್ ಚಾಂಪಿಯನ್‌ಶಿಪ್ 2026' ಅನ್ನು ನಗರದಲ್ಲಿ ಆಯೋಜಿಸಲಾಗಿದೆ ಎಂದು ಕ್ಲಬ್‌ನ ಸಂಸ್ಥಾಪಕ ಕಾರ್ಯದರ್ಶಿ ಮುಕೇಶ್ ಕುಮಾರ್ ತಿಳಿಸಿದರು. ಅವರು ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ, ಈ ಪ್ರತಿಷ್ಠಿತ ಕ್ರೀಡಾಕೂಟವು ಮೇ 26 ರಿಂದ ಮೇ 30 ರವರೆಗೆ ನಡೆಯಲಿದ್ದು, ವಿವಿಧ ರಾಜ್ಯಗಳ ಸುಮಾರು 450 ಕ್ಕೂ ಹೆಚ್ಚು ಶೂಟರ್‌ಗಳು ಭಾಗವಹಿಸುವ ನಿರೀಕ್ಷೆಯಿದೆ. ಅರ್ಹತಾ ಸುತ್ತಿನ ಪಂದ್ಯಗಳು ಕದ್ರಿ ಮಲ್ಲಿಕಟ್ಟೆಯ ಜುಗುಲ್ ಟವರ್ಸ್‌ನಲ್ಲಿರುವ ಮಂಗಳೂರು ರೈಫಲ್ ಕ್ಲಬ್‌ನಲ್ಲಿ ನಡೆಯಲಿದ್ದರೆ, ಅಂತಿಮ ಹಂತದ ಪಂದ್ಯಗಳು ನಗರದ ಯು.ಎಸ್. ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿವೆ ಎಂದರು.
2017 ರಲ್ಲಿ ಸ್ಥಾಪನೆಯಾದ ಮಂಗಳೂರು ರೈಫಲ್ ಕ್ಲಬ್ ಈಗಾಗಲೇ 32 ಕ್ಕೂ ಹೆಚ್ಚು ರಾಷ್ಟ್ರಮಟ್ಟದ ಶೂಟರ್‌ಗಳನ್ನು ರೂಪಿಸಿದ್ದು, ಕ್ರೀಡಾ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಈ ಬಾರಿಯ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಅಂತರಾಷ್ಟ್ರೀಯ ಮಟ್ಟದ ಶೂಟರ್‌ಗಳು ಪಾಲ್ಗೊಳ್ಳಲಿದ್ದು, ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ವಿಶೇಷವಾಗಿ ಭಾರತೀಯ ಸಶಸ್ತ್ರ ಪಡೆಗಳ ಕ್ರೀಡಾಪಟುಗಳಿಗೆ ಗೌರವ ಸಲ್ಲಿಸಲು ಪ್ರತ್ಯೇಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕರಾವಳಿ ಭಾಗದಲ್ಲಿ ಶೂಟಿಂಗ್ ಕ್ರೀಡೆಯನ್ನು ಉತ್ತೇಜಿಸುವ ಮತ್ತು ಉದಯೋನ್ಮುಖ ಪ್ರತಿಭೆಗಳಿಗೆ ರಾಷ್ಟ್ರೀಯ ವೇದಿಕೆ ಒದಗಿಸುವ ಉದ್ದೇಶದಿಂದ ಈ ಕೂಟವನ್ನು ಆಯೋಜಿಸಲಾಗಿದ್ದು, ಸಾರ್ವಜನಿಕರು ಮತ್ತು ಕ್ರೀಡಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಘಟಕರನ್ನು 9611027652 ಸಂಖ್ಯೆಯ ಮೂಲಕ ಸಂಪರ್ಕಿಸಬಹುದಾಗಿದೆ ಎಂದರು.